Advertisement
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಎಂಇಎಸ್ ಗಡಿ ವಿವಾದವನ್ನೇ ಅಸ್ತ್ರವಾಗಿ ಇಟ್ಟುಕೊಂಡು ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮಂಗಳವಾರ ಆಂದೋಲನ ನಡೆಸಿದೆ. ಬೆಳಗಾವಿಯಲ್ಲಿ ನಾಲ್ಕು ಸ್ಥಾನ ಗೆಲ್ಲಲು ಪ್ಲಾನ್ ಮಾಡಿಕೊಂಡು ಮಹಾರಾಷ್ಟ್ರ ಸರ್ಕಾರಕ್ಕೆ ದುಂಬಾಲು ಬಿದ್ದಿದೆ.
Related Articles
Advertisement
ಕೆಲ ದಿನಗಳ ಹಿಂದೆ ಎಂಇಎಸ್ ನಾಯಕರ ನಿಯೋಗ ಮುಂಬೈಗೆ ತೆರಳಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಗಡಿ ಸಮನ್ವಯ ಸಮಿತಿ ಅಧ್ಯಕ್ಷ ಶಂಭುರಾಜ ದೇಸಾಯಿ, ಚಂದ್ರಕಾಂತ ಪಾಟೀಲ, ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಕೇಶ ಕುಮಾರ ಸೇರಿದಂತೆ ಹಲವರನ್ನು ಭೇಟಿಯಾಗಿತ್ತು. ಗಡಿ ವಿವಾದ ವಿಚಾರಣೆ ಬಂದಾಗ ಮಹಾರಾಷ್ಟ್ರ ಪರ ಸಮರ್ಥ ವಾದ ಮಂಡಿಸುವಂತೆ ಮನವಿ ಮಾಡಿತ್ತು.
ಚುನಾವಣೆ ಪ್ರಚಾರಕ್ಕೆ ಸಿಎಂಗೆ ಮನವಿ: ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ ಹಾಗೂ ಖಾನಾಪುರದಲ್ಲಿ ಎಂಇಎಸ್ ಬಾವುಟ ಹಾರಿಸಲು ಸಜ್ಜಾಗಿರುವ ಎಂಇಎಸ್ ಈ ಚುನಾವಣೆಯಲ್ಲಿ ಸಿಎಂ ಏಕನಾಥ ಶಿಂಧೆ ಅವರನ್ನು ಪ್ರಚಾರಕ್ಕೆ ಕರೆಯಿಸಲು ಸಿದ್ಧತೆ ಮಾಡಿಕೊಂಡಿದೆ. ಮಹಾರಾಷ್ಟ್ರ ಸರ್ಕಾರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ ಅವರು ಆಂದೋಲನ ಸ್ಥಳಕ್ಕೆ ಆಗಮಿಸಿ, ಕರ್ನಾಟಕದಲ್ಲಿರುವ 848 ಹಳ್ಳಿಗಳಲ್ಲಿ ಸುಮಾರು 15 ವರ್ಷಗಳಿಂದ ನೆಲೆಸಿರುವ ಮರಾಠಿ ಭಾಷಿಕರಿಗೆ ಮಹಾರಾಷ್ಟ್ರ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಈ ಬಗ್ಗೆ ಬೆಳಗಾವಿಯ ಗಡಿಯಲ್ಲಿರುವ ಚಂದಗಡದಲ್ಲಿ ಸಮನ್ವಯ ಕಚೇರಿ ತೆರೆದು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷಿಕರ ಪರ ಇದೆ ಎಂದು ಬೆಂಬಲ ಸೂಚಿಸಿದ್ದಾರೆ.
ಎಂಇಎಸ್ ಬೆಳಗಾವಿಯಲ್ಲಿ ಹೇಗೆ ತಲೆ ನೋವಾಗಿದ್ದಾರೋ ಅದೇ ರೀತಿ ಮಹಾರಾಷ್ಟ್ರ ಸರ್ಕಾರಕ್ಕೂ ತಲೆ ನೋವಾಗುವ ದಿನಗಳು ಬಹಳ ದೂರವಿಲ್ಲ. ಕನ್ನಡ-ಮರಾಠಿಗರ ಸೌಹಾರ್ದತೆ ಕೆಡಿಸಿರುವ ಎಂಇಎಸ್‌ಗೆ ಮರಾಠಿ ಜನ ತಕ್ಕ ಪಾಠ ಕಲಿಸಿದ್ದಾರೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಎಲ್ಲ ಕಡೆಗೂ ಧರಣಿ ನಡೆಸಲಿ. ಅದನ್ನು ನಾವು ಸ್ವಾಗತಿಸುತ್ತೇವೆ. ನೆಲಕಚ್ಚಿರುವ ಎಂಇಎಸ್ ವಿಸರ್ಜನೆ ಮಾಡುವುದು ಒಳಿತು.ಅಶೋಕ ಚಂದರಗಿ, ಕನ್ನಡ ಹೋರಾಟಗಾರರು ಭೈರೋಬಾ ಕಾಂಬಳೆ