Advertisement

ಸಮುದ್ರದಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯ ಲಕ್ಷಣ…?

12:10 AM Aug 18, 2019 | Team Udayavani |

ಮಲ್ಪೆ: ಮಲ್ಪೆ ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದಲ್ಲಿ ಕಡಲಮಡಿ (ಕಡಲ ತ್ಯಾಜ್ಯ) ತೇಲಿ ಬಂದಿದೆ. ಇದು ಸಮುದ್ರದಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯ ಲಕ್ಷಣ ಎನ್ನಲಾಗುತ್ತಿದ್ದು ಮೀನುಗಾರರಲ್ಲೂ ಸಂತಸ ಮೂಡಿಸಿದೆ.

Advertisement

ಏನಿದು ಮಡಿ ಬೀಳುವುದು ?

ಮಳೆಗಾಲದ ಸಮಯದಲ್ಲಿ ನದಿ ತೊರೆಗಳ ಮೂಲಕ ಹರಿದು ಬಂದು ಸಮುದ್ರ ಸೇರಿದ ಮರಗಿಡ ಭಾಗಗಳು, ಬಳ್ಳಿಗಳು, ಎಲೆಗಳು ಸಮುದ್ರ ಬಿರುಸುಗೊಂಡ ಬಳಿಕ ತನ್ನೊಡಲು ಸೇರಿದ ಎಲ್ಲಾ ಕಸಕಡ್ಡಿಗಳನ್ನು ಕಡಲ ತೀರದಲ್ಲಿ ಹೊರ ಹಾಕುತ್ತದೆ. ಇದನ್ನು ಕರಾವಳಿಗರು ಮಡಿ ಬೀಳುವುದು ಎನ್ನುತ್ತಾರೆ. ಕಡಲ ತಡಿಯಲ್ಲಿ ಬಿದ್ದಿರುವ ಕಡಲತ್ಯಾಜ್ಯಕ್ಕೆ ಉಡುಪಿ ಜನರು ಮಡಿ ಎಂದು ಕರೆದರೆ, ಮಂಗಳೂರು ಕಡೆಯ ಮಂದಿ ಪಲ್ಕೆ ಬೀಳುವುದು ಎನ್ನುತ್ತಾರೆ.

ಕಾಡು, ನಗರ ಪ್ರದೇಶದ ಕಸ ಕಡ್ಡಿಗಳು, ಎಲೆಗಳು ನೆರೆ ನೀರಿನಲ್ಲಿ ಹರಿದು ಬಂದು ಕಡಲನ್ನು ಸೇರಿಕೊಳ್ಳುತ್ತವೆ. ಮಡಿ ಇರುವ ಜಾಗದಿಂದ ಸುಮಾರು 5 ಕಿ.ಮೀ. ದೂರ ಸಮುದ್ರ ಶಾಂತವಾಗಿರುತ್ತದೆ. ಈ ಜಾಗದಲ್ಲಿ ಮೀನಿನ ಸಂತತಿ ಕೂಡ ಹೆಚ್ಚಾಗಿ ಇರುತ್ತದೆ. ಈ ವೇಳೆ ತೀರ ಪ್ರದೇಶದಲ್ಲಿ ನಡೆಸುವ (ನಾಡದೋಣಿ) ಮೀನುಗಾರಿಕೆಗೆ ಹೆಚ್ಚಿನ ಪ್ರಮಾಣ ದಲ್ಲಿ ಮೀನು ಸಿಗುತ್ತದೆ ಎನ್ನುತ್ತಾರೆ ಮೀನುಗಾರರು.

ಕಾಡು ನಾಶದಿಂದ ಮಡಿ ಪ್ರಮಾಣ ಕ್ಷೀಣ

Advertisement

ಕಡಲು ಮಡಿ ಬೀಳುವುದು ಪ್ರತೀ ವರ್ಷ ಮಳೆಗಾಲದಲ್ಲಿ ಕಂಡು ಬರುವ ವಿದ್ಯಾಮಾನ. ಎರಡು ದಶಕದ ಹಿಂದೆ ತೀರದಲ್ಲಿ ಅಪಾರ ಪ್ರಮಾಣದಲ್ಲಿ ಸಮುದ್ರ ತೀರದಲ್ಲಿ ಸೇರುತ್ತಿತ್ತು. ಈಗೀಗ ಇದರ ಪ್ರಮಾಣವು ಕಡಿಮೆಯಾಗುತ್ತಿದೆ. ಕಾಡು, ಮರಗಿಡಗಳ ನಾಶ, ಅಲ್ಲಲ್ಲಿ ಅಣೆಕಟ್ಟುಗಳಿಂದಾಗಿ ನೀರಿನ ಹರಿವಿಗೂ ತಡೆಯಾಗುತ್ತಿರುವುದು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಸ್ವಚ್ಛತೆ: ಪೊರಕೆ ಬಳಸುವಂತಿಲ್ಲ

ಕಡಲತಡಿಯಲ್ಲಿ ಬಿದ್ದ ಕಸವನ್ನು ಪೊರಕೆ ಹಿಡಿದು ಸ್ವಚ್ಛ ಮಾಡುವಂತಿಲ್ಲ. ಮುಟ್ಟಾದ ಮಹಿಳೆಯರು ಸ್ಪರ್ಶಿಸುವಂತಿಲ್ಲ. ಮಡಿ ಬೀಳುವುದು ದೇವರ ವರ ಎಂಬ ನಂಬಿಕೆಯೂ ಈ ಹಿಂದೆ ಮೀನುಗಾರರಲ್ಲಿತ್ತು. ಮಡಿಬಿದ್ದ ಜಾಗದಲ್ಲಿ ನಿಶಾಚರಗಳು ಸೇರಿಕೊಳ್ಳುತ್ತವೆಂಬ ನಂಬಿಕೆ ಹಿಂದಿನಿಂದಲೂ ಇದೆ. ಯಾರು ಮುಟ್ಟದಂತೆ ಈ ಹಿಂದೆ ಈ ಭಾಗದಲ್ಲಿ ಬಾವುಟವನ್ನು ಏರಿಸಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next