Advertisement
ಆಡಳಿತ ವಿಕೇಂದ್ರೀಕರಣ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಹಿಂದೆ ಅನೇಕ ಇಲಾಖೆಗಳನ್ನು ವಿಭಜಿಸಿ, ಅದಕ್ಕೊಬ್ಬರು ಮಂತ್ರಿ, ಕಾರ್ಯದರ್ಶಿ, ಆಯುಕ್ತರ ಹುದ್ದೆ ಸೃಷ್ಟಿಸಲಾಗಿತ್ತು. ಈಗ ಅದೇ ಸರಕಾರಕ್ಕೆ ಹೊರೆಯಾಗಿದ್ದು, ಅವುಗಳ ವಿಲೀನಕ್ಕೆ ಬೇಡಿಕೆ ಹೆಚ್ಚುತ್ತಿದೆ.ಇತ್ತೀಚೆಗೆ ಆಡಳಿತ ಸುಧಾರಣೆಗಾಗಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಒಬ್ಬರೇ ಸಚಿವರನ್ನು ನಿಯಮಿಸಿ ದ್ದು, “ವಿಲೀನ’ ಪ್ರಸ್ತಾವಕ್ಕೆ ಮತ್ತೆ ಜೀವ ಬಂದಿದೆ. ಹಲವು ಇಲಾಖೆಗಳ ವಿಲೀನಕ್ಕೆ ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಂಪುಟ ಉಪ ಸಮಿತಿ ಎಲ್ಲ ಇಲಾಖೆಗಳಿಂದ ಅಭಿಪ್ರಾಯ ಸಂಗ್ರಹಿಸಿದೆ. ಆದರೆ ಈವರೆಗೆ ವರದಿ ಸಲ್ಲಿಸಿಲ್ಲ. ಈ ಕುರಿತು ತ್ವರಿತವಾಗಿ ಕಾರ್ಯನಿರ್ವಹಿಸಿ, ಆಡಳಿತ ಸುಧಾರಣೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯ.
Related Articles
ವಿವಿಧ ಇಲಾಖೆಗಳಲ್ಲಿ ಜಂಟಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರು, ಹೆಚ್ಚುವರಿ ಮುಖ್ಯ ಎಂಜಿನಿಯರ್ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಒಂದೇ ಇಲಾಖೆಯಲ್ಲಿ ಇಬ್ಬರು ಕಾರ್ಯದರ್ಶಿಗಳು, ಇಬ್ಬರು ಆಯುಕ್ತರು ಕಾರ್ಯ ನಿರ್ವಹಿಸುತ್ತಿದ್ದು, ಅಂತಹ ಅನಗತ್ಯ ಹುದ್ದೆಗಳಿಗೂ ಕತ್ತರಿ ಹಾಕುವಂತೆ ಸರಕಾರಕ್ಕೆ ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ.
Advertisement
ಏರುತ್ತಿದೆ ಬದ್ಧತೆ ವೆಚ್ಚಇಲಾಖೆಗಳ ವಿಲೀನ ಮತ್ತು ಅನಗತ್ಯ ಹುದ್ದೆಗಳ ಕಡಿತದಿಂದ ಸರಕಾರದ ಬದ್ಧತೆ ವೆಚ್ಚಕ್ಕೂ ಕಡಿವಾಣ ಬೀಳಲಿದೆ. ಸರಕಾರಿ ನೌಕರರ ವೇತನ, ದಿನಗೂಲಿ ನೌಕರರ ವೇತನ, ನಿವೃತ್ತಿ ವೇತನ, ಸಾಮಾಜಿಕ ಭದ್ರತಾ ಪಿಂಚಣಿ, ಸಹಾಯ ಧನ, ವೇತನಾನುದಾನ ಮತ್ತಿತರ ಆರ್ಥಿಕ ನೆರವು, ಆಡಳಿತಾತ್ಮಕ ವೆಚ್ಚ, ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ವೆಚ್ಚಗಳು ಪ್ರಮುಖ ಬದ್ಧತೆ ವೆಚ್ಚಗಳಾಗಿವೆ. ಅನಗತ್ಯ ಯೋಜನೆಗಳ ಹೊರೆ
ಜನಪ್ರಿಯ ಯೋಜನೆಗಳ ಘೋಷಣೆಯೂ ಹೊರೆ ಹೆಚ್ಚಲು ಕಾರಣ. ಯೋಜನೆಯ ಒಟ್ಟಾರೆ ಮೊತ್ತದ ಪೈಕಿ ಶೇ.5 ಇಲ್ಲವೇ ಶೇ. 10ರಷ್ಟು ಹಣವನ್ನು ಕಾಯ್ದಿರಿಸಿರುತ್ತಾರೆ. ಯೋಜನೆ ಜಾರಿ ಬಳಿಕ ಬಾಕಿ ಮೊತ್ತ ಭರಿಸುವುದು ಅನಿವಾರ್ಯ. ಆಗ ಬದ್ಧತೆ ವೆಚ್ಚ ಪ್ರಮಾಣವೂ ಏರುತ್ತದೆ. 5 ಸಾವಿರ ಕೋ.ರೂ. ಉಳಿತಾಯ?
ಇಲಾಖೆಗಳ ವಿಲೀನ ಮತ್ತು ಹುದ್ದೆಗಳ ಕಡಿತದಿಂದ ಸರಕಾರಕ್ಕೆ ವಾರ್ಷಿಕವಾಗಿ ನಾಲ್ಕರಿಂದ ಐದು ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ವರದಿಗೆ ಸೂಚನೆ
ಸಚಿವ ಅಶೋಕ್ ನೇತೃತ್ವದ ಸಂಪುಟ ಉಪ ಸಮಿತಿಯಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸದಸ್ಯರಾಗಿದ್ದಾರೆ. ಈಗಾಗಲೇ ಮೂರು ಸಭೆಗಳನ್ನು ನಡೆಸಿರುವ ಸಮಿತಿ ಆಡಳಿತ ಮತ್ತು ಸಿಬಂದಿ ಸುಧಾರಣ ಇಲಾಖೆ ಕಾರ್ಯದರ್ಶಿ ಮೌನೀಶ್ ಮುದ್ಗಲ್ ನೇತೃತ್ವದ ಅಧಿಕಾರಿಗಳ ತಂಡಕ್ಕೆ ಈ ಕುರಿತು ಸಂಪೂರ್ಣ ವರದಿ ಸಿದ್ಧಪಡಿಸಲು ಸೂಚನೆ ನೀಡಿದೆ. 3 ವರ್ಷದಲ್ಲಿ ಶೇ. 11 ಹೆಚ್ಚಳ
3 ವರ್ಷಗಳಲ್ಲಿ ಬದ್ಧತೆ ವೆಚ್ಚ ಪ್ರಮಾಣ ಶೇ. 11ರಷ್ಟು ಹೆಚ್ಚಳವಾಗಿದೆ. 2017-18ನೇ ಶೇ. 77 ರಷ್ಟಿತ್ತು. 2018-19ನೇ ಸಾಲಿನಲ್ಲಿ ಶೇ. 85 ಮತ್ತು 2019-20 ಸಾಲಿನಲ್ಲಿ ಅದು ಶೇ.88ಕ್ಕೆ ಏರಿಕೆಯಾಗಿದೆ. ಯಾವ್ಯಾವ ಇಲಾಖೆ ವಿಲೀನ?
– ಜಲ ಸಂಪನ್ಮೂಲ – ಸಣ್ಣ ನೀರಾವರಿ.
– ಬೃಹತ್ ಕೈಗಾರಿಕೆ – ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳು, ಸಕ್ಕರೆ.
– ಕೃಷಿ -ತೋಟಗಾರಿಕೆ ಮತ್ತು ರೇಷ್ಮೆ.
– ನಗರಾಭಿವೃದ್ಧಿ – ಪೌರಾಡಳಿತ.
– ಕಾರ್ಮಿಕ-ಐಟಿ ಬಿಟಿ.
– ಆರೋಗ್ಯ -ವೈದ್ಯಕೀಯ ಶಿಕ್ಷಣ.
– ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳು.
– ಗ್ರಾಮೀಣಾಭಿವೃದ್ಧಿ – ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ.
– ಕನ್ನಡ ಮತ್ತು ಸಂಸ್ಕೃತಿ -ವಾರ್ತಾ ಮತ್ತು ಪ್ರವಾಸೋದ್ಯಮ.
– ವಾಣಿಜ್ಯ ತೆರಿಗೆ -ತೂಕ ಮತ್ತು ಅಳತೆ