Advertisement

ಬ್ಯಾಂಕುಗಳ ವಿಲೀನ: ಯಾರಿಗೆ ಲಾಭ, ಏನೇನಿದ ಕಷ್ಟ?

01:23 PM Oct 01, 2018 | |

ಎರಡು ವರ್ಷದ ಹಿಂದೆ ಸ್ಟೇಟ್‌ಬ್ಯಾಂಕ್‌ ಇಂಡಿಯಾ, ಅದರ ಸಹವರ್ತಿ ಬ್ಯಾಂಕ್‌ಗಳ ವಿಲೀನ ಮುಗಿಯಿತು. ಈಗ ಅದೇ ರೀತಿಯ ವಿಲೀನದ ಸದ್ದು ಕೇಳುತ್ತಿದೆ. ಒಂದು ಮೂಲದ ಪ್ರಕಾರ- ವಿಲೀನ ನಡೆಯುವುದು ಶತಃಸಿದ್ಧ ಎನ್ನಲಾಗುತ್ತಿದೆ. ಇದರ ಪರಿಣಾಮ ಗ್ರಾಹಕರ ಮೇಲಾಗುತ್ತದೆಯೇ? ಇದರಿಂದ ಪ್ರಯೋಜನ ಏನು? ಅನ್ನೋದನ್ನು ನೋಡೋಣ. 

Advertisement

ಸಾಮಾನ್ಯವಾಗಿ, ಒಂದು ದೊಡ್ಡ ಬ್ಯಾಂಕಿನಲ್ಲಿ ಸಣ್ಣ ಬ್ಯಾಂಕ್‌ ಜೊತೆ ವಿಲೀನ ಗೊಂಡರೆ ತನ್ನ ಐಡೆಂಟಿಟಿಯೊಂದಿಗೆ ಹೆಸರು, ಲಾಂಛನ  ಮತ್ತು ಧ್ಯೇಯ ವಾಕ್ಯವನ್ನು ಉಳಿಸಿಕೊಳ್ಳುವುದು ಕಷ್ಟ.  ಇದಕ್ಕೆ ಇತಿಹಾಸ ಕೂಡಾ ಇದೆ. ಈ ಹಿಂದೆ ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ನಲ್ಲಿ ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌ ವಿಲೀನವಾದಾಗ, ಗ್ಲೋಬಲ್‌  ಟ್ರಸ್ಟ್‌ ಬ್ಯಾಂಕ್‌  ತನ್ನತನ ಕಳೆದುಕೊಂಡಿತು, ನ್ಯೂ ಬ್ಯಾಂಕ್‌ ಆಫ್ ಇಂಡಿಯಾ, ಪಂಜಾಬ ನ್ಯಾಷನಲ್‌ ಬ್ಯಾಂಕ್‌ನೊಂದಿಗೆ ವಿಲೀನವಾದಾಗ  ನ್ಯೂ ಬ್ಯಾಂಕ್‌ ಆಫ್ ಇಂಡಿಯಾದ ಹೆಸರೇ  ಕಳೆದುಹೋಯಿತು. ಸಧ್ಯದ ಮಾಹಿತಿ ಪ್ರಕಾರ ದೊಡ್ಡ ಬ್ಯಾಂಕ್‌ ಆದ  ಬ್ಯಾಂಕ್‌ ಆಫ್ ಬರೋಡಾ ತನ್ನ ಹೆಸರು , ಲಾಂಛನ ಮತ್ತು  ಧ್ಯೇಯ ವಾಕ್ಯವನ್ನು ಉಳಿಸಿಕೊಳ್ಳಬಹುದು ಎನ್ನುವ  ಅಂದಾಜಿದೆ. 

ಹಾಗೆಯೇ, ವಿಲೀನ ಗೊಳ್ಳಲು ಸಿದ್ಧವಿರುವ ಈ ಬ್ಯಾಂಕುಗಳಲ್ಲಿ ಲಾಭಗಳಿಸುತ್ತಿರುವ ಏಕ ಮಾತ್ರ ಬ್ಯಾಂಕ್‌ ಅಂದರೆ ವಿಜಯಾ ಬ್ಯಾಂಕ್‌.  ಈ ನಿಟ್ಟಿನಲ್ಲಿ ಹಕ್ಕುಮಂಡಿಸುವುದನ್ನು ಅಲ್ಲಗೆಳೆಯಲಾಗದು. ಈ ಹೊಸ ರೂಪದ ಬ್ಯಾಂಕ್‌ 85,675 ಸಿಬ್ಬಂದಿಯನ್ನು ಹೊಂದಲಿದ್ದು,  8.41 ಲಕ್ಷ  ಕೋಟಿ  ಠೇವಣಿ, 6.40 ಲಕ್ಷ ಕೋಟಿ ಸಾಲ, 9490  ಶಾಖೆಗಳ ಮೂಲಕ  14.82 ಲಕ್ಷ ಕೋಟಿ ವ್ಯವಹಾರ  ನಡೆಸಲಿದೆ. ನಿವ್ವಳ ಅನುತ್ಪಾದಕ ಸಾಲವು  80567 ಕೋಟಿ , ಅಂದರೆ, ಶೇ.5.71ರಷ್ಟು ಇರುತ್ತಿದ್ದು, ಆದಾಯವು 74,592 ಕೋಟಿಗೆ ಏರುತ್ತದೆ. ಬ್ಯಾಂಕಿನ ಶೇರು ಕ್ಯಾಪಿಟಲ್‌ ವರ್ಷ ವರ್ಷವೂ ಗಮನಾರ್ಹವಾಗಿ ಏರುತ್ತಿದ್ದು, ಅದೀಗ ಖಂಡಿತ ಅಂತಾರಾಷ್ಟ್ರೀಯ ಮಟ್ಟಕ್ಕೆ  ತಲುಪಲಿದೆ.  ವಿದೇಶಿ  ಬ್ಯಾಂಕುಗಳು ಮೊದಲಿನಂತೆ  ಲೊ ಕ್ಯಾಪಿಟಲ್‌ ಎಂದು ಭಾರತೀಯ ಬ್ಯಾಂಕುಗಳೊಂದಿಗೆ ವ್ಯವಹಾರ  ಮಾಡುವಾಗ ಹಿಂಜರಿಯುವಂತಿಲ್ಲ. ಹಾಗೆಯೇ ಈ ಕ್ಯಾಪಿಟಲ ಹೆಚ್ಚಳದ  ಆಧಾರದ ಮೇಲೆಯೇ  ದೊಡ್ಡ ಪ್ರಮಾಣದ ಸಾಲವನ್ನು ಇನ್ನೊಂದು ಬ್ಯಾಂಕಿನ ಸಹಾಯವಿಲ್ಲದೇ ನೀಡಬಹುದು. ಇದರೊಂದಿಗೆ, ಬ್ಯಾಂಕುಗಳ ವಿಲೀನದ ಹಿಂದಿನ ಮುಖ್ಯ  ಉದ್ದೇಶ ಈಡೇರಿದಂತಾಗುತ್ತದೆ.

ಬ್ಯಾಂಕುಗಳ ವಿಲೀನದಿಂದ  ಒಂದೇ  ಬ್ಯಾಂಕಿನ ಹಲವಾರು ಶಾಖೆಗಳು ಒಂದೇ ಪ್ರದೇಶದಲ್ಲಿ ಕಾಣುತ್ತಿದ್ದು ಶಾಖೆಗಳ ದಟ್ಟಣೆ ಸಮಸ್ಯೆಯಾಗುತ್ತದೆ.  ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ ದೊಡ್ಡದಾಗಿರುವ, ಹೆಚ್ಚು ವ್ಯವಹಾರವಿರುವ  ಹೆಚ್ಚು ಗ್ರಾಹಕರಿಗೆ ಅನುಕೂಲವಾಗಿರುವ  ಮತ್ತು ಸ್ವಲ್ಪ ಮಧ್ಯವರ್ತಿ ಸ್ಥಳದಲ್ಲಿ ಇರುವ  ಶಾಖೆಯನ್ನು ಉಳಿಸಿಕೊಂಡು ಉಳಿದ  ಶಾಖೆಗಳನ್ನು ಮುಚ್ಚಬಹುದು ಅಥವಾ ಸ್ಥಳಾಂತರ ಮಾಡಬಹುದು.  
ಗ್ರಾಹಕರಿಗೆ ಮಾತ್ರ  ಯಾವುದೇ ಮಹತ್ವದ  ವ್ಯತ್ಯಾಸ  ಕಾಣುವುದಿಲ್ಲ. ಅವರ ವ್ಯವಹಾರಗಳು ಮೊದಲಿನಂತೆ ನಡೆಯುತ್ತವೆ. ಬ್ಯಾಂಕಿನ ಹೆಸರಿನಲ್ಲಷ್ಟೇ ಬದಲಾವಣೆ. ಅವೇ ಸಿಬ್ಬಂದಿಗಳು, ಅದೇ  ಕಟ್ಟಡ. ಕಾಲಾನಂತರ ಸಿಬ್ಬಂದಿ, ಕಟ್ಟಡ ಬದಲಾಗಬಹುದು. ಅವರ ಠೇವಣಿ, ಲಾಕರ್‌ಗಳ ಅದೇ ರೀತಿ ಮುಂದುವರೆಯುತ್ತವೆ. ಠೇವಣಿ,  ಅದರ ನವೀಕರಣ ಆದಾಗ, ಹೊಸ ಪಾಸ್‌ಬುಕ್‌ ಬೇಕಾದಾಗ ಮುಂತಾದ ಕೆಲಸಗಳು ಹೊಸ ನಿಯಮದ ಪ್ರಕಾರ ಆಗುತ್ತದೆ. 

ಈಗಾಗಲೇ ತೆಗೆದುಕೊಂಡ ಸಾಲಗಳು ಮತ್ತು ಠೇವಣಿ ಮೇಲಿನ ಬಡ್ಡಿದರದಲ್ಲಿ ವ್ಯತ್ಯಾಸ ಆಗುವುದಿಲ್ಲ. ಹಾಗೆಯೇ ನಿಬಂಧನೆಯಲ್ಲೂ ಬದಲಾವಣೆಗಳು ಇರುವುದಿಲ್ಲ. ಅವರು ಯಾವುದೇ ರೀತಿಯ ಹೊಸ ನಮೂನೆ ಅಥವಾ   ದಾಖಲೆಗಳನ್ನು  ಸಲ್ಲಿಸಬೇಕಾಗಿಲ್ಲ.

Advertisement

 ಬ್ಯಾಂಕುಗಳು ವಿಲೀನವಾದಾಗ, ಕೆಲವು ಶಾಖೆಗಳು ಸ್ಥಳಾಂತರವಾಗುತ್ತವೆ. ಇನ್ನು ಕೆಲವು ಮುಚ್ಚಲ್ಪಡುತ್ತವೆ. ಈ ಬೆಳವಣಿಗೆಯಲ್ಲಿ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ಬ್ಯಾಂಕುಗಳು  ಬಾಡಿಗೆ ಕಟ್ಟಡಗಳನ್ನು ತೆರವು ಮಾಡುತ್ತವೆ.
ಮುಖ್ಯ ಕಚೇರಿಯನ್ನು ಆಡಳಿತಾತ್ಮಕ  ಮತ್ತ ಅನುಕೂಲದ ದೃಷ್ಟಿಯಲ್ಲಿ  ದೊಡ್ಡ ನಗರಗಳಲ್ಲಿ ಅಥವಾ   ಕಮರ್ಷಿಯಲ್‌  ಕ್ಯಾಪಿಟಲ್‌ ನಲ್ಲಿ  ಮುಂದುವರೆಸುತ್ತವೆ. ಪ್ರಸ್ತುತ ವಿಲೀನ ಪ್ರಕ್ರಿಯೆಯಲ್ಲಿರುವ ಮೂರೂ ಬ್ಯಾಂಕುಗಳು ಸ್ವಂತ  ಮುಖ್ಯ ಕಚೇರಿ ಹೊಂದಿದೆ. 

ಈ ಬ್ಯಾಂಕುಗಳ ಶೇರುಗಳನ್ನು ಹೊಂದಿದವರು ಸ್ವಲ್ಪ ಅತಂಕಕ್ಕೆ ಒಳಗಾಗುತ್ತಾರೆ. ತಮ್ಮ ಶೇರಿನ ಬೆಲೆ ಎಷ್ಟು? ಇದಕ್ಕೆ ಬದಲಿ ವ್ಯವಸ್ಥೆ ಏನು? ಹೊಸ ಶೇರು  ದೊರಕಬಹುದೇ ಮುಂತಾದ  ಸಂದೇಹಗಳು  ಕಾಣುತ್ತಿದ್ದು, ವಿಲೀನ ಪ್ರಕ್ರಿಯೆ ಪೂರ್ಣವಾಗುವ ಹೊತ್ತಿಗೆ  ಇವುಗಳಿಗೆ ಪರಿಹಾರ ನೀಡುತ್ತಾರೆ.

ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next