ಮುಂಬಯಿ, ಫೆ. 26: ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಶ್ರೀ ಪುರಂದರ ದಾಸರ ಕೀರ್ತನ ಸ್ಪರ್ಧೆಯು ಫೆ. 8ರಂದು ಅಪರಾಹ್ನ 2.30ರಿಂದ ಕೇಶವ್ ಗೋರೆ ಸ್ಮಾರಕ ಟ್ರಸ್ಟ್ ಹಾಲ್‌ನಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ 14 ಸಂಘ-ಸಂಸ್ಥೆಗಳು ಮತ್ತು ಭಜನ ಮಂಡಳಿಗಳು ಸಾ ಮೂಹಿಕ ಹಾಗೂ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯ ನಿಯಮಾವಳಿಗಳನ್ನು ಸಂಘದ ಉಪಾಧ್ಯಕ್ಷೆ ಪದ್ಮಜಾ ಮಣ್ಣೂರು ಸ್ಪರ್ಧಾಳುಗಳಿಗೆ ತಿಳಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಡಾ| ಶ್ಯಾಮಲಾ ಪ್ರಕಾಶ್ ಮತ್ತು ಮಂಜುಳಾ ಭಟ್ ಅವರು ಸಹಕರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ನಾರಾಯಣ ಆರ್. ಮೆಂಡನ್ ಅವರು ಮಾತನಾಡಿ, ಜಿಪುಣಾಗ್ರಸ್ತರಾದ ಶ್ರೀನಿವಾಸ ನಾಯಕನ ಜೀವನದಲ್ಲಿ ನಡೆದ ಒಂದು ಅಪೂರ್ವ ಘಟನೆ ಅದು ಅವನ ಜೀವನ ಶೈಲಿಯನ್ನೇ ಬದಲಾಯಿಸಿತು. ಅನಂತರ ಅವನು ಭಗವಂತನ ಲೀಲೆಯನ್ನು ಹಾಡಿ ಹೊಗಳುತ್ತಾ ಅನೇಕ ಕೃತಿಗಳನ್ನು ರಚಿಸಿ ದಾಸರಲ್ಲಿ ಶ್ರೇಷ್ಠರಾಗಿ ಪುರಂದರ ದಾಸರೆಂದೇ ಖ್ಯಾತಿ ಪಡೆದರು. ಇವರ ಅಪೂರ್ವ ತಿರುವು ಬರುವುದಕ್ಕೆ ಭಗವಂತನ ಪ್ರೇರಣೆ ಹಾಗೂ ಕೃಪೆ ಯೇ ಕಾರಣ. ಪುರಂದರ ದಾಸರ ಮಹತ್ವವನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಂಘವು ಪ್ರತೀ ವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಎಸ್. ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಪುಗಾರರನ್ನು ಮಹಿಳಾ ವಿಭಾಗದ ಸದಸ್ಯೆಯರಾದ ಸುಮಿತಿ ಆರ್. ಶೆಟ್ಟಿ ಮತ್ತು ಚಂದ್ರಾವತಿ ಬಿ. ಶೆಟ್ಟಿ ಪರಿಚಯಿಸಿದರು. ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸರಿತಾ ಎಸ್. ನಾಯಕ್ ಮತ್ತು ಸಮೂಹ ಗೀತೆಯಲ್ಲಿ ಭಾಗವಹಿಸಿದವರ ಹೆಸರನ್ನು ಸಾವಿತ್ರಿ ಶೆಟ್ಟಿ ಅವರು ಘೋಷಿಸಿದರು.
ಬಂಗೂರ್ ನಗರ ಕನ್ನಡ ಬಳಗ, ಗೋರೆಗಾಂವ್ ಕರ್ನಾಟಕ ಸಂಘ, ಸುಮಿತ್ರಾ ಆರ್. ಕುಂದರ್ ಇವರು ತಮ್ಮ ತಾಯಿ ಕಮಲಾ ಎಲ್. ಕುಂದರ್ ಅವರ ಸಂಸ್ಮರಣೆಯಲ್ಲಿ ಸ್ಥಾಪಿಸಿದ ದತ್ತಿನಿಧಿ ಹಾಗೂ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್ ನಾಯಕ್ ಅವರು ಸಂಗ್ರಹಿಸಿದ ಧನ ಸಂಗ್ರಹದಿಂದ ಕಾರ್ಯಕ್ರಮ ನೆರವೇರಿತು. ಸಮೂಹ ಗೀತೆಯಲ್ಲಿ ಚಾರ್‌ಕೋಪ್ ಕನ್ನಡಿಗರ ಬಳಗ ಪ್ರಥಮ, ಮದ್ವೇಷ ಭಜನ ಮಂಡಳಿ ದ್ವಿತೀಯ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ತೃತೀಯ ಬಹುಮಾನ ಪಡೆಯಿತು.
ವೈಯಕ್ತಿಕ ಸ್ಪರ್ಧೆಯಲ್ಲಿ ಬಬಿತಾ ಕಾಂಚನ್ ಶ್ರೀ ದುರ್ಗಾಮರಮೇಶ್ವರಿ ಭಜನ ಮಂಡಳಿ ಪ್ರಥಮ, ವಿಜಯಾ ರಾವ್ ಮಧ್ವೇಷ ಭಜನ ಮಂಡಳಿ ದ್ವಿತೀಯ, ಸುಶೀಲಾ ಪೂಜಾರಿ ಜಗದಂಬಾ ಕಾಲಭೈರವ ದೇವಸ್ಥಾನ ತೃತೀಯ ಬಹುಮಾನ ಗಳಿಸಿದರು. ಬಹುಮಾನದ ಯಾದಿಯನ್ನು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಇಂದಿರಾ ಮೊಲಿ ಓದಿದರು. ಮಹಿಳಾ ವಿಭಾಗದ ಸಂಚಾಲಕಿ ಉಷಾ ಪಿ. ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಸದಸ್ಯೆ ಸವಿತಾ ಭಟ್ ವಂದಿಸಿದರು.