ಅಂಬಿಕಾತನಯದತ್ತ ವೇದಿಕೆ: ಮಾನಸಿಕವಾಗಿ ಕರ್ನಾಟದ ಏಕೀಕರಣ ಆಗಬೇಕು. ಸಮಾನತೆ ಹಾಗೂ ಅಭಿವೃದ್ಧಿ ಕಡೆಗೆ ಹೆಜ್ಜೆ ಹಾಕಿದಾಗ ಮಾತ್ರವೇ, ಉತ್ತರ-ದಕ್ಷಿಣದ ಮನಸ್ಸುಗಳು ಒಂದಾಗಲು ಸಾಧ್ಯ. ಹಿಂದುಳಿದ ತಾಲೂಕುಗಳ ಏಳ್ಗೆಗೆ ಕಾರಣವಾಗಬೇಕಿದ್ದ ನಂಜುಡಪ್ಪ ವರದಿ ಇನ್ನಾದರೂ ಅನುಷ್ಠಾನಗೊಳ್ಳಬೇಕೆಂದು ಹೋರಾಟಗಾರ ಎಸ್.ಆರ್. ಹಿರೇಮಠ ಆಗ್ರಹಿಸಿದರು.
ಅದು ಸಮ್ಮೇಳನದ ಪ್ರಪ್ರಥಮ ಗೋಷ್ಠಿ.”ಉ.ಕ.: ಅಭಿವದ್ಧಿ ಸವಾಲುಗಳು’ ಕುರಿತು ಮಾತನಾಡಿದ ಅವರು, ಪ್ರಾದೇಶಿಕ ಅಸಮಾನತೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ವಿಶ್ವದ ಸಮಸ್ಯೆ. ಉ.ಕ. ಅಭಿವೃದ್ಧಿ ಕುರಿತು ಸಾಕಷ್ಟು ನೀತಿ ಆಯೋಗಗಳು ಚರ್ಚಿಸಿವೆ. ಆದರೂ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಭಾವನೆ ಇಲ್ಲಿನ ಜನರಲ್ಲಿದೆ ಎಂದು ವಿಷಾದಿಸಿದರು.
ಡಿ.ಎಂ.ನಂಜುಡಪ್ಪ ಅವರ ನೇತೃತ್ವದಲ್ಲಿ ಐದು ಸದಸ್ಯರ ತಂಡವನ್ನು ಸರ್ಕಾರ ನೇಮಿಸಿ, 8 ವರ್ಷಗಳ ತನಕ ಸಮಗ್ರ ವಿಶೇಷ ಅಭಿವೃದ್ಧಿ ಯೋಜನೆ ಪ್ರಸ್ತಾಪ ಮಾಡಿತ್ತು. ರಾಜ್ಯದ 175 ತಾಲೂಕಿನಲ್ಲಿ 114 ತಾಲೂಕುಗಳು ಹಿಂದುಳಿದಿವೆ ಎಂಬುದನ್ನು ಆ ವರದಿ ತಿಳಿಸಿತ್ತು. ಉ.ಕದಲ್ಲಿಯೇ 24 ಅತಿ ಹಿಂದುಳಿದ ತಾಲೂಕುಗಳಿವೆ. ಇಲ್ಲಿ ಇನ್ನೂ ವಲಸೆ ತಪ್ಪಿಲ್ಲ. ಭೂ ಸುಧಾರಣೆ ಕೂಡ ಆಗಿಲ್ಲ ಎಂದು ಬೇಸರ ಸೂಚಿಸಿದರು.
ಕೇಂದ್ರದ ನೆರವಿಗೇಕೆ ಕಾಯಬೇಕು?: ರಾಜ್ಯ ಸರ್ಕಾರವು ಕೇಂದ್ರ ವಿಕೋಪ ನಿಧಿಯನ್ನೇ ನೋಡುತ್ತ ಕೂರುವುದು ಸರಿಯಲ್ಲ. ಬರಗಾಲ ಬಂದರೆ ಕೃಷಿ, ಪಶುಸಂಗೋಪನೆ, ನೀರಾವರಿ, ಭೂಮಿ, ನದಿಯ ಮೇಲೆ ಪರಿಣಾಮ ಆಗುತ್ತದೆ. ಇವೆಲ್ಲ ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತವೆ. ಪ್ರತಿ ಸಲವೂ ಯಾವುದೇ ಸರಕಾರ ಬಂದರೂ ಕೇಂದ್ರದ ಮೇಲೆ ಯಾಕೆ ಗೂಬೆ ಕೂರಿಸಬೇಕೆಂದು ಕೇಳಿದ ಅವರು, ಬರಗಾಲ ನಿರ್ವಹಣಾ ಯೋಜನೆಯಿಂದ ಸಂಚಿತ ನಿಧಿ ಇಟ್ಟುಕೊಂಡರೆ ಎಲ್ಲವೂ ಸಲೀಸು ಎಂಬ ಸಲಹೆಯನ್ನು ಹಿರಿಯ ನಿವೃತ್ತ ಅಧಿಕಾರಿ ಡಾ. ಎಸ್.ಎಂ. ಜಾಮದಾರ್ ಅವರು ಇದೇ ಗೋಷ್ಠಿಯಲ್ಲಿ ನೀಡಿದರು.