ಕಮಲನಗರ: ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ| ಮಹೇಶ ಬಿರಾದಾರ ಹೇಳಿದರು.
ಮುಧೋಳ (ಬಿ) ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಒತ್ತಡ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಮಕ್ಕಳು ಮನೋ ರೋಗಕ್ಕೆ ಒಳಗಾಗಿ ಮಾನಸಿಕ ಸ್ಥಿತಿ ಅಸ್ವಸ್ಥ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಯೋಗ, ಧ್ಯಾನ, ಪ್ರಾಣಾಯಮ ರೂಢಿಸಿ ಕೊಳ್ಳಬೇಕು. ದೈನಂದಿನ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮರಾಗಲು ಸಾಧ್ಯ ಎಂದರು.
ಮೇಲ್ವಿಚಾರಕ ರಮೇಶ ಡಿ.ಎನ್ .ಟಿ ಮಾತನಾಡಿ, ಕುಷ್ಠರೋಗ ಪಾಪ-ಶಾಪದಿಂದ ಬರುವುದಿಲ್ಲ. ಬಿಳಿ, ತಿಳಿ ತಾಮ್ರ ಬಣ್ಣದ ಮಚ್ಚೆಗಳು ಸ್ಪರ್ಶ ಜ್ಞಾನವಿಲ್ಲದೇ ಕಂಡುಬಂದಲ್ಲಿ ಕುಷ್ಠರೋಗ ಎಂದು ಪರಿಗಣಿಸಬೇಕು. ವಿದ್ಯಾರ್ಥಿಗಳು ಸಮುದಾಯದಲ್ಲಿರುವ ಯಾವುದೇ ವ್ಯಕ್ತಿಯು ಕುಷ್ಠರೋಗಕ್ಕೆ ಒಳಗಾಗಿದ್ದರೆ ಅವರಿಗೆ ಸಂಪರ್ಕಿಸಲು ತಿಳಿಹೇಳಿದರು.
ಮುಖ್ಯಗುರು ಸೂರ್ಯಕಾಂತ ಸಿಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಿಂದ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕುರಿತು ಅರಿವು ಮೂಡಿಸಿ, ವಿದ್ಯಾರ್ಥಿಗಳಲ್ಲಿ ಹೊಸ ವಿಷಯ ಪರಿಚಯಿಸಿರುವುದು ಶ್ಲಾಘನೀಯ ಎಂದರು.
ಆಪ್ತ ಸಮಾಲೋಚಕ ಎಸ್. ಸರಕುರೆ ಮಾತನಾಡಿ, ಮಾನಸಿಕ ಒತ್ತಡ ನಿವಾರಣೆ ಕುರಿತು ವಿದ್ಯಾರ್ಥಿಗಳಿಗೆ ಮೊದಲು ಅರಿವು ಮೂಡಿಸಿ, ನಂತರ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೋನಿ ಬಸವರಾಜ ಪ್ರಥಮ, ಸತೀಶ ಹಣಮಂತ ದ್ವಿತೀಯ, ರಾಹುಲ ಸುಭಾಷ ಅವರಿಗೆ ತೃತೀಯ ಬಹುಮಾನ ವಿತರಿಸಲಾಯಿತು. ಈ ವೇಳೆ ವೈದ್ಯಾಧಿಕಾರಿ ಡಾ| ಅನೀಲಕುಮಾರ ಗಡ್ಡೆ, ಅಧಿಕಾರಿ ಗಂಗಾಧರ ಕಾಂಬಳೆ, ಶಿಕ್ಷಕರಾದ ಸ್ವರೂಪರಾಣಿ, ರವೀಂದ್ರ, ಶ್ರೀಕೃಷ್ಣ, ಧೋಂಡಿಬಾ, ಬಿ.ಕೆ. ತಂಗಾ ಇದ್ದರು.