Advertisement

Menstrual Cup; 75 ಪ.ಪೂ. ಕಾಲೇಜುಗಳ 11,263 ಮಕ್ಕಳಿಗೆ ವಿತರಣೆ ಪೂರ್ಣ

11:18 PM Nov 17, 2023 | Team Udayavani |

ಬೆಳ್ತಂಗಡಿ: ಸರಕಾರಿ ಪದವಿಪೂರ್ವ ಕಾಲೇಜಿನ ಹೆಣ್ಣುಮಕ್ಕಳ ನೈರ್ಮಲ್ಯಕ್ಕಾಗಿ ರಾಜ್ಯ ಸರಕಾರವು “ಶುಚಿ’ ಕಾರ್ಯಕ್ರಮದಡಿ ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಪೈಲಟ್‌ ಪ್ರಾಜೆಕ್ಟ್ ರೂಪದಲ್ಲಿ ಆಯ್ಕೆ ಮಾಡಿ ಮೈತ್ರಿ ಮುಟ್ಟಿನ ಕಪ್‌ ವಿತರಣೆ ನಡೆಸುತ್ತಿದ್ದು, ಪ್ರಾಯೋಗಿಕ ಯಶ ಸಾಧಿಸಿದೆ.

Advertisement

ಯೋಜನೆಯಡಿ ಸರಕಾರವು ಮುಂದುವರಿದ ಜಿಲ್ಲೆಯೆಂಬ ನೆಲೆಯಲ್ಲಿ ದ.ಕ. ಮತ್ತು ಹಿಂದುಳಿದ ಜಿಲ್ಲೆಯೆಂಬ ನೆಲೆಯಲ್ಲಿ ಚಾಮರಾಜ ಜಿಲ್ಲೆಯನ್ನು ಆಯ್ಕೆ ಮಾಡಿತ್ತು. ಫಲಿತಾಂಶವನ್ನು ಅವಲೋಕಿಸಿ ರಾಜ್ಯಾ ದ್ಯಂತ ವಿಸ್ತರಿಸುವುದು ಸರಕಾರದ ಉದ್ದೇಶ. ವಿಶೇಷವೆಂದರೆ ಇಂತಹ ಯೋಜನೆ ಪರಿಚಯಿಸಿದ ಮೊದಲ ರಾಜ್ಯವೆಂಬ ಹೆಮ್ಮೆ ಕರ್ನಾಟಕದ್ದು.

ದ.ಕ.ದಲ್ಲಿ ಆರಂಭದಲ್ಲಿ ಮಂಗಳೂರು ಹಾಗೂ ಪುತ್ತೂರಿನಲ್ಲಿ ಶೇ. 28 ಉತ್ತಮ ಸ್ಪಂದನೆ ದೊರೆತ ಬಳಿಕ ಜಿಲ್ಲೆಯ ಒಟ್ಟು 54 ಸರಕಾರಿ ಹಾಗೂ 21 ಅನುದಾನಿತ ಸೇರಿ ಒಟ್ಟು 75 ಪದವಿ ಪೂರ್ವ ಕಾಲೇಜುಗಳ 16ರಿಂದ 18 ವರ್ಷ ವಯಸ್ಸಿನ 11,263 ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ (Menstrual Cup) ವಿತರಿಸುವ ಕಾರ್ಯಕ್ರಮ ನ. 10ಕ್ಕೆ ಪುತ್ತೂರಿನ ಕೊಂಬೆಟ್ಟಿನಲ್ಲಿ ನೀಡುವ ಮೂಲಕ ಪೂರ್ಣಗೊಂಡಿದೆ.

ಸ್ತ್ರೀಯರು ಮಾಸಿಕ ಋತುಸ್ರಾವದ ಸಮಯದಲ್ಲಿ ಪ್ಯಾಡ್‌ಗಳಿಗೆ ಪರ್ಯಾಯವಾಗಿ ಬಳಸಬಹುದಾದ ಒಂದು ಸಾಧನ ಇದು. ಋತುಸ್ರಾವದ ಸಮಯದಲ್ಲಿ ಯಾವುದೇ ಕೆಲಸಕ್ಕೂ ಅಡ್ಡಿಯಾಗಬಾರದು ಎನ್ನುವ ನೆಲೆಯಲ್ಲಿ ಸರಕಾರವು ಈ ಮೂಲಕ ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಣ ನೀಡಲು ಮುಂದಾಗಿದೆ. ಇದಕ್ಕಾಗಿ ಪೋಷಕರ ಜತೆಗೂಡಿ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಆಯಾ ತಾಲೂಕಿನ ಆರೋಗ್ಯ ಇಲಾಖೆಯ ಸಿಬಂದಿ, ಸಂಪನ್ಮೂಲ ವ್ಯಕ್ತಿ, ಸಮುದಾಯ ಆರೋಗ್ಯ ಅಧಿಕಾರಿ, ಕೌನ್ಸಿಲರ್‌ ತಂಡವಾಗಿ ಪ.ಪೂ. ಕಾಲೇಜುಗಳಿಗೆ ಒಟ್ಟು 6 ಬಾರಿ ತೆರಳಿ ತಲಾ 2 ತಾಸುಗಳ ತರಬೇತಿ ಹಾಗೂ ಮಾಹಿತಿ ನೀಡಿದ ಬಳಿಕ ಕಪ್‌ ವಿತರಣೆ ಮಾಡಲಾಗಿದೆ.

ಸ್ಯಾನಿಟರಿ ಪ್ಯಾಡ್‌, ಟ್ಯಾಂಪೂನ್‌ ಇತ್ಯಾದಿಗಳ ಬದಲಾಗಿ ಮರುಬಳಕೆ ಮಾಡಬಹುದಾದ ಮುಟ್ಟಿನ ಕಪ್‌ ವಿತರಿಸುವ ಮೂಲಕ ಪೋಷಕರ ಮೂಢನಂಬಿಕೆ ಹಾಗೂ ಭಯವನ್ನು ಹೋಗಲಾಡಿಸಿ ಮಕ್ಕಳ ಒತ್ತಡವನ್ನು ಕಡಿಮೆ ಮಾಡುವುದು, ಮುಟ್ಟಿನ ಕಾರಣಕ್ಕೆ ಬಾಲಕಿಯರು ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯದೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಯೋಜನೆಯ ಉದ್ದೇಶ. ಶೇ. 100 ಬಾಲಕಿಯರು ಇದನ್ನು ಉಪಯೋಗಿಸಬೇಕು ಎಂಬುದು ಸರಕಾರದ ಉದ್ದೇಶ. ಈ ಯೋಜನೆಯಲ್ಲಿ ದ.ಕ. ಜಿಲ್ಲೆ ಶೇ. 89ರಷ್ಟು ಪ್ರಾಯೋಗಿಕ
ಯಶಸ್ಸು ಕಂಡಿದೆ.
– ಡಾ| ರಾಜೇಶ್‌,
ಸಂತಾನ ಉತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ, ದ.ಕ. ಜಿಲ್ಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next