ನವದೆಹಲಿ:ಲೋಕಸಭೆ ಕಲಾಪಕ್ಕೆ ಭಾರತೀಯ ಜನತಾ ಪಕ್ಷದ ಸಂಸದರು ಗೈರು ಹಾಜರಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಡಿಸೆಂಬರ್ 07) ಅಸಮಾಧಾನವ್ಯಕ್ತಪಡಿಸಿದ್ದು, ಒಂದು ವೇಳೆ ನೀವು(ಸಂಸದರು) ನಿಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ, ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್
ದಯವಿಟ್ಟು ಸಂಸತ್ ಕಲಾಪ ಹಾಗೂ ಸಭೆಗಳಿಗೆ ನಿರಂತರವಾಗಿ ಹಾಜರಾಗಿ. ಪದೇ, ಪದೇ ಹೀಗೆ ಗೈರುಹಾಜರಾಗುತ್ತಿರುವುದನ್ನು ಮಕ್ಕಳು ಕೂಡಾ ಇಷ್ಟಪಡಲಾರರು. ದಯವಿಟ್ಟು ಈ ವಿಚಾರದಲ್ಲಿ ಬದಲಾವಣೆಯಾಗಲಿ, ಇಲ್ಲದಿದ್ದಲ್ಲಿ ಕಾಲವೇ ಬದಲಾಯಿಸುತ್ತದೆ ಎಂದು ಭಾರತೀಯ ಜನತಾ ಪಕ್ಷದ ಸಂಸದೀಯ ಸಭೆಯ ವೇಳೆ ಪ್ರಧಾನಿ ಮೋದಿ ಪಕ್ಷದ ಸಂಸದರಿಗೆ ಈ ಎಚ್ಚರಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಇಲ್ಲಿನ ಅಂಬೇಡ್ಕರ್ ಇಂಟರ್ ನ್ಯಾಶನಲ್ ಸೆಂಟರ್ ನಲ್ಲಿ ಬಿಜೆಪಿ ಸಂಸದರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಕಲಾಪಕ್ಕೆ ಸಂಸದರು ಗೈರುಹಾಜರಾಗುವ ಬಗ್ಗೆ ಉಲ್ಲೇಖಿಸಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಸಂಸದರು ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸಭೆಯಲ್ಲಿ ಮಾತನಾಡುತ್ತ ತಿಳಿಸಿದ್ದರು.
ಕಳೆದ ಮುಂಗಾರು ಅಧಿವೇಶನದ ವೇಳೆ ಕೋಲಾಹಲ ಎಬ್ಬಿಸಿ ಅಮಾನತುಗೊಂಡಿರುವ 12 ಮಂದಿ ರಾಜ್ಯ ಸಭಾ ಸಂಸದರು ಒಂದು ವೇಳೆ ತಮ್ಮ ನಡವಳಿಕೆ ಬಗ್ಗೆ ಕ್ಷಮೆ ಕೇಳಿದರೆ ಸರ್ಕಾರ ಅಮಾನತು ಆದೇಶವನ್ನು ಹಿಂಪಡೆಯಲಿದೆ ಎಂದು ಜೋಶಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.