ಬಿಹಾರ: ಅಪರಿಚಿತ ವ್ಯಕ್ತಿಗಳ ಗುಂಪೊಂದು ಮನೆಗೆ ನುಗ್ಗಿ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಬಿಹಾರ ಮೂಲದ ಪತ್ರಕರ್ತ ವಿಮಲ್ ಕುಮಾರ್ (41) ಮೃತ ದುರ್ದೈವಿಯಾಗಿದ್ದು ಇವರು ದೈನಿಕ್ ಜಾಗರಣ ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ವಿಮಲ್ ಕುಮಾರ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ರಾಣಿಗಂಜ್ ಪ್ರದೇಶದ ಪ್ರೇಮ್ ನಗರದಲ್ಲಿ ವಾಸಿಸುತ್ತಿದ್ದು ಶುಕ್ರವಾರ ಮುಂಜಾನೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ವಿಮಲ್ ಕುಮಾರ್ ಅವರ ಮನೆಯೊಳಗೆ ಪ್ರವೇಶಿಸಿ ಮಾತನಾಡಲಿದೆ ಎಂದು ಮನೆಯಿಂದ ಹೊರಗೆ ಕರೆದಿದ್ದಾರೆ ಈ ವೇಳೆ ಮನೆಯಿಂದ ಹೊರ ಬಂದ ವಿಮಲ್ ಕುಮಾರ್ ನ ಮೇಲೆ ಗುಂಡು ಹಾರಿಸಿದ್ದಾರೆ, ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಮಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಂಡಿನ ಸದ್ದು ಕೇಳಿ ಅಕ್ಕಪಕ್ಕದವರು ಬಂದು ನೋಡಿದಾಗ ವಿಮಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದು ಈ ವೇಳೆ ದುಷ್ಕರ್ಮಿಗಳು ಜನರಿಗೆ ಬಂದೂಕು ತೋರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎನ್ನಲಾಗಿದ್ದು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಸಹೋದರನನ್ನೂ ಹತ್ಯೆ ಮಾಡಲಾಗಿತ್ತು:
2019 ರಲ್ಲಿ ವಿಮಲ್ ಅವರ ಸಹೋದರನನ್ನೂ ಹತ್ಯೆಗೈಯಲಾಗಿತ್ತು ಎನ್ನಲಾಗಿದ್ದು ಈ ಪ್ರಕರಣ ಇನ್ನು ಕೋರ್ಟ್ ನಲ್ಲಿ ವಾದ ನಡೆಯುತ್ತಿದ್ದು ಅಲ್ಲದೆ ಸಹೋದರನ ಹತ್ಯೆ ವಿಚಾರದಲ್ಲಿ ವಿಮಲ್ ಕುಮಾರ್ ಅವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದರು ಎನ್ನಲಾಗಿದೆ ಈ ವಿಚಾರವಾಗಿಯೇ ಕೊಲೆ ನಡೆದಿದೆಯೋ ಎಂಬ ಅನುಮಾನವೂ ಪೊಲೀಸರಲ್ಲಿ ಹುಟ್ಟಿಸಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.