Advertisement
ಇವು ಮಾಜಿ ಸಚಿವ ಹಾಗೂ 371(ಜೆ)ನೇ ಕಲಂ ಹೋರಾಟದ ರೂವಾರಿ ವೈಜನಾಥ ಪಾಟೀಲ ಅವರ ಮಾತುಗಳು. ಮತ್ತೆ ತಮ್ಮ ಮಾತು ಮುಂದುವರಿಸಿದ ಅವರು, ಚಿಂಚೋಳಿಯಲ್ಲಿ ಬಾಂಬ್ ಸಿಡಿಸಲು ಆಗಲಿಲ್ಲ. ಇದೇ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳು ಬೀದರ್‌ಗೆ ಬಂದಿದ್ದರು.ಮುಖ್ಯಮಂತ್ರಿ ಬರುವ ಸಮಯದಲ್ಲೇ ಬಾಂಬ್ ಸಿಡಿಸಬೇಕೆಂದು ನಿರ್ಧರಿಸಿ ಬೀದರ್ ಗೆ ಬಾಂಬ್ ತೆಗೆದುಕೊಂಡು ಹೋದೆ. ಆದರೆ, ಅಲ್ಲೂ ಬಾಂಬ್ ಸಿಡಿಸಲು ಆಗಲಿಲ್ಲ. ತುರ್ತು ಪರಿಸ್ಥಿತಿ ಮುಗಿದರೂ ಬಾಂಬ್ ಸಿಡಿಸಲು ಸಾಧ್ಯವಾಗಲಿಲ್ಲ ಎಂದು ಮುಗುಳು ನಕ್ಕರೂ, ಮುಖದಲ್ಲಿ ಹೋರಾಟದ ಕಿಚ್ಚು ಕಾಣುತ್ತಿತ್ತು.
ಛೋಡನಾ ನಹಿ’ ಎಂಬಂತೆ ಹೋರಾಟಗಳನ್ನು ಮಾಡಿಕೊಂಡು ಬರಲಾಗಿದೆ ಎಂದು ಹೇಳಿದರು. ಬೀದರ್ ಜಿಲ್ಲೆಯ ಔರಾದ ತಾಲೂಕಿನ ಹಕ್ಯಾಳ ನನ್ನ ಹುಟ್ಟೂರು. ಮೊದಲು ಉರ್ದು, ಮರಾಠಿ ಬಳಿಕ ಕನ್ನಡದಲ್ಲಿ ಅಭ್ಯಾಸ ಮಾಡಿದೆ. ಬಿ.ಎ ವರೆಗೆ ಎಲ್ಲ ಬೋರ್ಡ್ ಪರೀಕ್ಷೆಯಲ್ಲಿ ಅನ್ನುತ್ತೀರ್ಣನಾಗುತ್ತಾ ಬಂದಿದ್ದೆ. 1962ರ ಲೋಕಸಭೆ ಚುನಾವಣೆ ಸಮಯದಲ್ಲಿ ಸೋಶಿಯಲಿಸ್ಟ್ ಪಕ್ಷದ ಸಂಪರ್ಕ ಬೆಳೆಯಿತು. ಅಲ್ಲಿಂದ ಪರೀಕ್ಷೆಗೆ ಓದುವುದನ್ನು ಬಿಟ್ಟು ಚುನಾವಣಾ ಪ್ರಚಾರಕ್ಕೆ ಇಳಿದೆ. ಪರೀಕ್ಷೆ ಪ್ರತಿವರ್ಷ ಬರುತ್ತದೆ. ಚುನಾವಣೆ ಬರುವುದು ಐದು ವರ್ಷಕ್ಕೊಮ್ಮೆ ಎಂದು ಪ್ರಚಾರದಲ್ಲಿ ತೊಡಗಿದೆ ಎಂದು ರಾಜಕೀಯ ಆರಂಭದ ದಿನಗಳನ್ನು ನೆನೆದರು.
Related Articles
Advertisement
ಕರಿ ಕೋಟ್-ಹೋರಾಟ-ಮದುವೆ: ಬೀದರ್ ನಲ್ಲಿ ಲಾ ಪ್ರಾಕ್ಟಿಸ್ ಮಾಡುವಾಗ “ಜಮೀನು ಕಬ್ಜಾ ಕರೋ’ (ಬಳಕೆಯಾಗದ ಸರ್ಕಾರಿ ಭೂ) ಎಂಬ ಚಳವಳಿಯನ್ನು ಜಾರ್ಜ್ ಫರ್ನಾಂಡೀಸ್ ಆರಂಭಿಸಿದರು. ಆಗ ನಾನು ಮತ್ತೆ ಗುಲಬರ್ಗಾಕ್ಕೆ ಬಂದು ಚಳವಳಿ ಆರಂಭಿಸಿದೆ. ಆದರೆ ಜನ ಸೇರದ ಕಾರಣ, ನಾನು ಕರಿ ಕೋಟ್‌ನಲ್ಲೇ ಡಂಗೂರ ಹೊಡೆದೆ. ವಕೀಲನೇ ಹೋರಾಟಕ್ಕೆ ಇಳಿದಿದ್ದಾನೆಂದು ಜನರು ಸೇರಿದರು. ಇದರಿಂದ ನನಗೆ ಸಜೆ ಸಹ ಆಯಿತು ಎಂದರು. ರಾಜಕೀಯ ಮತ್ತು ಹೋರಾಟದಲ್ಲಿ ತೊಡಗಿಸಿ ಕೊಂಡಿದ್ದರಿಂದ ವಕಾಲತ್ತು ಮಾಡುವುದು ಕಡಿಮೆ ಆಯಿತು. ನನಗೆ ವಾದ ಮಾಡಲು ಕೇಸ್‌ಗಳಿರಲಿಲ್ಲ. ಈ ಮಧ್ಯೆ ಮನೆಯಲ್ಲಿ ಮದುವೆ ತಯಾರಿ ನಡೆಸಿದಾಗ ಸಂಸಾರ ನಡೆಸಲು ನೌಕರಸ್ಥ ಹುಡುಗಿಯೇ ಬೇಕೆಂದು, ಸರ್ಕಾರಿ ನೌಕರಿ ಇರುವ ಹುಡುಗಿಯನ್ನು ಹುಡುಕಲು ಶುರು ಮಾಡಿದೆ. ನಾನು ಹುಡುಗಿಯನ್ನು ಒಪ್ಪಿದರೂ ಅವಳು ನನಗೆ ಕೆಲಸ ಇಲ್ಲವೆಂದು ಪಸಂದ್ ಮಾಡುತ್ತಿರಲಿಲ್ಲ ಎಂದು ನಕ್ಕರು ಪಾಟೀಲ. ಕೊನೆಗೆ ಚಿಂಚೋಳಿಯ ಹುಡುಗಿಯೊಂದಿಗೆ ಮದುವೆಗೆ ಒಪ್ಪಿಕೊಂಡೆ. ಆದರೆ, ಆ ಹುಡುಗಿಯ ನೆಂಟಸ್ಥನ ಮಾಡ ಬೇಕಾದರೆ ಮುಖ್ಯಮಂತ್ರಿಯನ್ನು ಕೇಳಿ ಎಂದು ಗ್ರಾಮಸ್ಥರು ಹೇಳಿದರು. ಯಾಕೆಂದರೆ ಹುಡುಗಿ ಕುಟುಂಬದವರಿಗೆ ಸಾಕಷ್ಟು ಜಮೀನಿತ್ತು. ಈ ಜಮೀನು ಸಂಬಂಧ ನಾನು ಮದುವೆಯಾಗಬೇಕಾದ ಹುಡುಗಿ ಕುಟುಂಬ ಮತ್ತು ಆಗ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ ಕುಟುಂಬ ನಡುವೆ ಸಂಘರ್ಷ ಇತ್ತು. ಆಗ ನಾನು ಹುಡುಗಿ ಮತ್ತು ನನಗೆ ಒಪ್ಪಿಗೆ ಇದ್ದಾಗ ಮುಖ್ಯಮಂತ್ರಿಯನ್ನು ಯಾಕೆ ಕೇಳುವುದು ಎಂದು ಅದೇ ಹುಡುಗಿಯನ್ನೇ ಮದುವೆಯಾದೆ ಎಂದು ತಮ್ಮ ವಿವಾಹದ ಸನ್ನಿವೇಶ ಬಿಡಿಸಿಟ್ಟರು.
ಮದುವೆಯಾದ ಮೇಲೆ ಬೀದರ್‌ನಿಂದ ನನ್ನನ್ನು ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಚಿಂಚೋಳಿಗೆ ಕರೆದುಕೊಂಡು ಹೋದರು. ಆಗ ನನ್ನ ಗೆಳೆಯರೇ ಜಮೀನು ಕಬ್ಜಾ ಮಾಡಲು ಚಿಂಚೋಳಿಗೆ ಹೋಗಿದ್ದಾನೆ ಎಂದು ಗೇಲಿ ಮಾಡಿದರು. ಅತ್ತೆ ಮನೆಯವರು ವೀರೇಂದ್ರ ಪಾಟೀಲ ವಿರುದ್ಧ ಹೋರಾಟ ಮಾಡಲು ನಿನ್ನನ್ನು ಕರೆ ತಂದಿದ್ದೇವೆ ಎಂದರು. ಅಲ್ಲಿಂದ ವೀರೇಂದ್ರ ಪಾಟೀಲರ ವಿರುದ್ಧ ವಕಾಲತ್ತು ಮಾಡಿದೆ. ವಾಲೀಕಾರರ ಪರ, ಕೊಂಚಾವರಂ ಅರಣ್ಯ ಭೂಮಿ ಹಾಗೂ ತುರ್ತು ಪರಿಸ್ಥಿತಿ ಹೋರಾಟದ ದಿನಗಳನ್ನು ಮೆಲುಕು ಹಾಕಿದರು.
ತುರ್ತು ಪರಿಸ್ಥಿತಿ ನಂತರ ಜನತಾ ಪಾರ್ಟಿ ಸ್ಥಾಪನೆ ಆಯಿತು. ಮೂಲತಃ ಕಾಂಗ್ರೆಸ್ ನವರಾದ ವೀರೇಂದ್ರ ಪಾಟೀಲರು ಪಕ್ಷದ ರಾಜ್ಯಾಧ್ಯಕ್ಷರಾದರು. ನಾನು ಚಿಂಚೋಳಿ ತಾಲೂಕಾಧ್ಯಕ್ಷನಾದೆ. ಚಿಂಚೋಳಿಯಲ್ಲಿ ನಾನುಪ್ರಭಾವಿ ನಾಯಕನಾಗಿ ಗುರುತಿಸಿಕೊಂಡೆ. 1978ರಲ್ಲಿ ಚುನಾವಣೆ ಟಿಕೆಟ್ ವಿಷಯ ಬಂತು. ಚಿಂಚೋಳಿಯಲ್ಲಿ ವೀರೇಂದ್ರ ಪಾಟೀಲ ಹೆಸರು ಹೇಳುವುದಕ್ಕಿಂತ ಹೆಚ್ಚಾಗಿ ನನ್ನ ಹೆಸರು ಹೇಳತೊಡಗಿದರು. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ನಿಂತು ಸೋತೆ. ನಂತರ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದೆ. ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ, ಜನತಾ ಪಕ್ಷದಿಂದ ನಾನೊಬ್ಬನೇ ಎಲ್ಲರಿಗಿಂತ ಹೆಚ್ಚು ಮತಗಳಿಂದ ಆಯ್ಕೆಯಾಗಿದ್ದೆ. ಆದ್ದರಿಂದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನನಗೆ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದರು ಎಂದು ಸ್ಮರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ “ಮನದಾಳದ ಮಾತು’ ನಡೆಸಿ ಕೊಟ್ಟರು. ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಠಗಿ, ಬಸವರಾಜ ಇಂಗಿನ್, ಸುಭಾಷ ರಾಠೊಡ, ಡಾ| ವಿಕ್ರಮ ಪಾಟೀಲ, ಲಿಂಗಣ್ಣ ದೇಸಾಯಿ, ರೇವಣ ಸಿದ್ಧಪ್ಪ ಬೆಡಸೂರು, ಶಶಿಕಾಂತ ತಡಕಲ್, ಗೌತಮ ಪಾಟೀಲ, ಸುರೇಶ ಸಜ್ಜನ್, ಎಂ.ಬಿ. ಅಂಬಲಗಿ, ಮಹಿಪಾಲರೆಡ್ಡಿ ಮುನ್ನೂರು ಇದ್ದರು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಮೊದಲ ಬಾರಿಗೆ ನಾನು ಸಚಿವನಾಗಿದ್ದಾಗ ಹೈದ್ರಾಬಾದ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮಂಡಳಿ ಬೇಡಿಕೆಯಿಟ್ಟಿದ್ದೆ. ಆದರೆ, ರಾಮಕೃಷ್ಣ ಹೆಗಡೆ ಒಪ್ಪಲಿಲ್ಲ. ಇದರಿಂದ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ಅಲ್ಲದೇ, ಆಗ ಉಂಟಾದ ರಾಜಕೀಯ ಗೊಂದಲಗಳಿಂದ ನನ್ನನ್ನು ಅವರು ಜನತಾ ಪಕ್ಷದಿಂದ ವಜಾಗೊಳಿಸಿದರು ಎಂದು ವೈಜನಾಥ ಪಾಟೀಲ ಹೇಳಿದರು. ಬಳಿಕ ಜಾರ್ಜ್ ಫರ್ನಾಂಡೀಸ್ ಒತ್ತಡದಿಂದ ಪಕ್ಷದಲ್ಲಿ ಉಳಿಸಿಕೊಂಡರು. 1989ರ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ ಗೆದ್ದರೆ ಮುಖ್ಯಮಂತ್ರಿ ಆಗುತ್ತಾರೆ. ವೈಜನಾಥ ಗೆದ್ದರೆ ಸಚಿವರಾಗುತ್ತಾರೆ ಎಂದು ಪ್ರಚಾರ ಮಾಡಲಾಯಿತು. ಇದರಿಂದ ಬರೀ 17 ಮತಗಳಿಂದ ಸೋಲು ಕಂಡೆ. ನಂತರದ ಚುನಾವಣೆಯಲ್ಲಿ ಗೆದ್ದು ದೇವೇಗೌಡರ ಸರ್ಕಾರದಲ್ಲಿ ಸಚಿವನಾದೆ. ಈ ಸಮಯದಲ್ಲಿ ಮತ್ತೆ ನಾನು ಪ್ರತ್ಯೇಕ ಮಂಡಳಿ ರಚನೆ ಬೇಡಿಕೆ ಇಟ್ಟೆ. ಆಗ ಮಾಡುತ್ತೇನೆ ಎಂದು ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದರು. ನಂತರದಲ್ಲಿ ಜೆ.ಎಚ್.ಪಟೇಲರು ನನ್ನನ್ನು ಸಚಿವ ಸ್ಥಾನದಿಂದ ತೆಗೆದರು ಎಂದು ಏಳು-ಬೀಳುಗಳನ್ನು ಬಿಚ್ಚಿಟ್ಟರು. ಮಹಾರಾಷ್ಟ್ರದ ವಿದರ್ಭ ಮತ್ತು ಆಂಧ್ರಪ್ರದೇಶದ ತೆಲಂಗಾಣದಲ್ಲಿ ಸ್ಥಳೀಯರಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎನ್ನುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೂ 371ನೇ ಕಲಂ ವಿಧಿಯಡಿ ವಿಶೇಷ ಸ್ಥಾನಮಾನ ಕಲ್ಪಿಸಲು ಹೋರಾಟ ರೂಪಿಸಿ ಅದನ್ನು ಜಾರಿಗೆ ತರಲು ಸರ್ವರು ನೆರವಾದರು ಎಂದರು. (ಸಪ್ಟೆಂಬರ್ 23 2019ರಂದು ‘ಉದಯವಾಣಿ’ಯಲ್ಲಿ ಪ್ರಕಟವಾದ ಸುದ್ದಿ)