Advertisement

ವಿದ್ಯೆ ನೀಡಿದ ಸಂಸ್ಥೆಯ ಸ್ಮರಣೆ ಅವಶ್ಯ : ಬೆನ್ನಿ ರಸ್ಕೀನಾ

12:48 PM Sep 08, 2019 | Team Udayavani |

ಮುಂಬಯಿ, ಸೆ. 7: ದಾನದಲ್ಲಿ ಮಹತ್ವದ ದಾನ ವಿದ್ಯಾದಾನವೆಂಬ ಮಾತು ಸತ್ಯಕ್ಕೆ ಸಮೀಪವಾಗಿದೆ. ವಿದ್ಯಾ ಪ್ರಸಾರಕ ಮಂಡಳವು ಹೊರ ರಾಜ್ಯದಲ್ಲಿ ಕನ್ನಡ ಕಂದಮ್ಮಗಳ ಮೇಲಿನ ಅಪಾರಪ್ರೀತಿಯಿಂದ ಹಲವಾರು ದಶಕಗಳಿಂದ ಅಹರ್ನಿಶಿಯಾಗಿ ಶಿಕ್ಷಣ ಸೇವೆ ಮಾಡುತ್ತಿರುವುದು ಪ್ರಶಂಸನೀಯ. ಶಿಕ್ಷಕರು ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಕಡುಬಡವರ ಮಕ್ಕಳಿಗೆ ಶಿಕ್ಷಣ ಮತ್ತು ವಿದ್ಯಾ ಪ್ರಸಾರಕ ಮಂಡಳದ ಸಹಾಯ-ಸಹಕಾರದ ಕುರಿತು ಹೇಳಿ ಕರೆದುಕೊಂಡು ಬರುತ್ತಿರುವುದು, ಅವರನ್ನು ಶಿಕ್ಷಿತರನ್ನಾಗಿ ಮಾಡುವ ಕಾರ್ಯ ಮಹತ್ತರವಾಗಿದೆ ಎಂದು ಮುಲುಂಡ್‌ನ‌ ಲಯನ್ಸ್‌ ಕ್ಲಬ್‌ ಇದರ ಅಧ್ಯಕ್ಷೆ ಅಲ್ವಿನ್‌ ರಸ್ಕೀನಾ ನುಡಿದರು.

Advertisement

ಇತ್ತೀಚೆಗೆ ಮುಲುಂಡ್‌ ವಿಪಿಎಂ ಕನ್ನಡ ಮಾಧ್ಯಮ ಶಾಲಾ ಸಭಾಗೃಹದಲ್ಲಿ ನಡೆದ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಯಾವಾಗಲೂ ವಿದ್ಯಾ ಪ್ರಸಾರಕ ಮಂಡಳದ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಾವು ಸಿದ್ದರಿದ್ದೇವೆ ಎಂದು ನುಡಿದು ಶುಭ ಹಾರೈಸಿದರು. ಡಾ| ಕೆ. ಮೋಹನ್‌ ಅವರು ಮಾತನಾಡಿ, ವಿದ್ಯಾರ್ಥಿಗಳು ಸದೃಢವಾಗಿರಲು ಆಟ-ಪಾಠ-ಕೂಟಗಳು ಅತ್ಯಗತ್ಯವಾಗಿವೆ. ಹಿತಮಿತವಾದ ಆಹಾರ ಸೇವನೆಯಿಂದ ಆರೋಗ್ಯದ ಸಂಪತ್ತನ್ನು ಕಾಪಾಡಿಕೊಳ್ಳಬಹುದು. ಅಧ್ಯಯನ ಮಾಡಿದ ವಿದ್ಯಾ ದೇಗುಲವನ್ನು, ಜ್ಞಾನ ನೀಡಿದ ಶಿಕ್ಷಕರನ್ನು ವಿದ್ಯಾರ್ಥಿಗಳು ಮರೆಯದೆ ಸದಾ ಸ್ಮರಣೆಯನ್ನು ಮಾಡಿ, ಮುಂದೊಂದು ದಿನ ಉನ್ನತ ಹುದ್ದೆಗೆ ಸೇರಿದಾಗ ಶಾಲೆಗೆ ಬಡ ಮಕ್ಕಳಿಗೆ ಇದೇ ರೀತಿಯಾಗಿ ಧನ ಸಹಾಯವನ್ನು, ಧಾನ-ಧರ್ಮವನ್ನು ಮಾಡಲು ಮುಂದೆ ಬರಬೇಕು ಎಂದು ನುಡಿದರು. ಡಾ| ಪಿ. ಎಂ. ಕಾಮತ್‌ ಮಾತನಾಡಿ, ಮುಂಬಯಿ ವಲಯದ ಮುಲುಂಡಿನ ಲಯನ್ಸ್‌ ಕ್ಲಬ್‌ನವರು ಮಾಡುವ ಸಮಾಜ ಸೇವೆಗೆ ನಾವು ಸದಾ ಕೃತಜ್ಞರಾಗಿದ್ದೇವೆ. ವಿದ್ಯಾ ಪ್ರಸಾರಕ ಮಂಡಳದ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಉಚಿತ ಶಾಲಾ ಪರಿಕರಗಳನ್ನು ಮತ್ತು ವೈದ್ಯಕೀಯ ಚಿಕಿತ್ಸಾ ಶಿಬಿರವನ್ನು ಡಾ| ಕೆ. ಮೋಹನ್‌ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡು, ಕಡುಬಡತನದ ವಿದ್ಯಾರ್ಥಿಗಳಿಗೆ ದಾನ-ಧರ್ಮ ಮಾಡುತ್ತಿರುವುದು ಒಂದು ವಿಶಾಲ ಹೃದಯದ ಮನೋಭಾವನೆ ಮತ್ತು ಸೇವಾ ಕಾರ್ಯವಾಗಿದೆ. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬರದೆ, ಅವರಿಗೆ ನಾವು ಶಿಕ್ಷಣವನ್ನು ನೀಡಿ ಉತ್ತಮ ಮತ್ತು ಆದರ್ಶ ಸಮಾಜದಲ್ಲಿ ಶ್ರೇಷ್ಠ ನಾಗರಿಕರನ್ನಾಗಿ ಪರಿವರ್ತಿಸಲು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತಾ ಬಂದಿದ್ಧೇವೆ ಮತ್ತು ಇನ್ನೂ ಮುಂದೆಯೂ ಮಾಡುತ್ತೇವೆ ಎಂದರು.

ವೇದಿಕೆಯಲ್ಲಿ ಲಯನ್ಸ್‌ ಕ್ಲಬ್‌ನ ಸದಸ್ಯರು, ಡಾ| ಪಿ. ಎಂ. ಕಾಮತ್‌, ಡಾ| ಕೆ. ಮೋಹನ್‌, ಮುಖ್ಯ ಶಿಕ್ಷಕಿ ಸುವಿನಾ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಸಿಂತಾ ಸಿಕ್ವೇರಾ, ಮಾರ್ಗರೆಟ್ ಬೆರೆಟ್ಟೊ, ಲಯನ್ಸ್‌ ಮಾರ್ಗದರ್ಶಿಗಳಾದ ಧನಂಜಯ್‌ ಭೋಸ್ಲೆ, ಪ್ರವೀಣ್‌ ಶೆಟ್ಟಿ, ಪ್ರಭಾಕರ್‌ ಗುರವ್‌ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಅತಿಥಿಗಳನ್ನು ಮಂಡಳದ ಅಧ್ಯಕ್ಷರಾದ ಡಾ| ಪಿ. ಎಂ. ಕಾಮತ್‌ ಗೌರವಿಸಿದರು. ಶಿಕ್ಷಕಿ ಲಕ್ಷ್ಮೀಕೆಂಗನಾಳ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ಪರಿವೀಕ್ಷಕಿ ಗೌರಿ ದೇಶಪಾಂಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಲಿನೆಟ್ ಪಿಂಟೋ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next