Advertisement
ಆನಂತರ ಒಂದು ಕಾಲಿಗೆ ಚಪ್ಪಲಿ ಹಾಕಿಕೊಂಡು ಇನ್ನೊಂದು ಪಾದದಡಿ ಅಲ್ಯುಮಿನಿಯಂ ತಟ್ಟೆಯನ್ನಿರಿಸಿಕೊಂಡು ಎರಡು ಸುತ್ತು ಹೆಜ್ಜೆ ಇಟ್ಟಳು. ಮೂರನೆಯ ಸಲ ಕಣ್ಣಿಗೆ ಕಪ್ಪು ಕನ್ನಡಕ ಇಟ್ಟುಕೊಂಡಳು. ಕೊನೆಗೆ ಒಂದು ಕಬ್ಬಿಣದ ಚಕ್ರದೊಳಗಡೆ ತನ್ನೆರಡು ಪಾದಗಳನ್ನಿರಿಸಿ ಹಗ್ಗದ ಮೇಲೆ ಈ ಮೂಲೆಯಿಂದ ಆ ಮೂಲೆಯವರೆಗೆ ತಿರುಗಿಸಿದಳು. ಒಮ್ಮೆ ನಾಯಕ್ ನಹೀ ಕಲ್ ನಾಯಕ್ ಹ್ಞೂ ಮೆ ಮತ್ತೂಮ್ಮೆ ಮೆ ತೆರಿ ದುಷ್ಮನ್, ದುಷ್ಮನ್ ತೂ ಮೆರ, ಮೇ ತೋ ನಾಗಿನ್… ಹೀಗೆ ಟೇಪ್‌ರೆಕಾರ್ಡರ್‌ನಲ್ಲಿ ಹಾಡುಗಳು ಬದಲಾಗುತ್ತಲೇ ಇದ್ದವು. ಅಲ್ಲಿ ನಿಂತು ನೋಡುತ್ತಿದ್ದ ಕೆಲವರು ಅವಳತ್ತ ಹತ್ತು ರೂಪಾಯಿಯ ನೋಟುಗಳನ್ನು ಚಾಚುತ್ತಿದ್ದರು. ಆಯತಪ್ಪಿ ಬಿದ್ದು ಬಿಡುತ್ತಾಳ್ಳೋ ಎಂದು ನಾನು ಅವಳನ್ನೇ ಆತಂಕದಿಂದ ನೋಡುತ್ತಿದ್ದೆ. ಆದರೆ, ಅವಳು ನೋಟುಗಳನ್ನು ಸ್ವೀಕರಿಸುತ್ತಲೇ ಮುಂದೆ ಹೆಜ್ಜೆಯಿಡುತ್ತಿದ್ದಳು. ಸುಮಾರು ಅರ್ಧ ತಾಸಿನ ನಂತರ ಆ ಹುಡುಗಿ ಕೆಳಗಡೆ ಇಳಿದು ಬಂದಳು.
Related Articles
Advertisement
ಎಲ್ಲರ ಮನಸ್ಸಿನಲ್ಲಿ ಹೂವಾಗಿ ಅರಳಿದವಳು: ರಸ್ತೆ ಬದಿಯಲ್ಲಿ ಹಣ್ಣು, ತರಕಾರಿ ಮತ್ತು ಹೂವು ಮಾರುವವರಲ್ಲಿ ಮೌಶಿಯರೇ ಹೆಚ್ಚಾಗಿ ಕಾಣಸಿಗುತ್ತಾರೆ. ಮನೆಯಲ್ಲಿ ನಿತ್ಯ ಹಾಲು ಹಣ್ಣು ತರಕಾರಿಗಳು ಎಷ್ಟು ಅಗತ್ಯವೋ ಹಾಗೆಯೇ ದೇವರ ಪೂಜೆಗೆ ಹೂವು ಅಷ್ಟೇ ಮುಖ್ಯ. ಊರಿನಲ್ಲಾದರೆ ಪ್ರತಿದಿನ ದೇವರ ಪೂಜೆಗೆ ಬೇಕಾದ ಹೂವುಗಳನ್ನು ಮನೆಯಂಗಳದಲ್ಲಿಯೇ ಬೆಳೆಸಲಾಗುತ್ತದೆ. ಆದರೆ, ನಗರದಲ್ಲಿ ಇದು ಸಾಧ್ಯವಾಗದ ಮಾತು. ಇಲ್ಲಿ ರಸ್ತೆಯ ಒಂದೊಂದು ತಿರುವಿನಲ್ಲಿಯೂ ಹೂವಿನಂಗಡಿ ಇರುತ್ತದೆ. ವಿಳಾಸ ಕೊಟ್ಟರೆ ಸಂಜೆಯ ಹೊತ್ತಿಗೆ ನಾವು ಹೇಳಿದಷ್ಟು ಹೂವಿನ ಹಾರ ನಿತ್ಯ ನಮ್ಮ ಮನೆ ಬಾಗಿಲಿಗೆ ಕೊಟ್ಟು ಹೋಗುತ್ತಾರೆ. ತಿಂಗಳಿಗೊಮ್ಮೆ ಹಣ ಸಂದಾಯ ಮಾಡಿದರಾಯ್ತು. ಸುಮಾರು ಹತ್ತು ವರ್ಷದ ಹಿಂದೆ ಅರುವತ್ತು ದಾಟಿದ ಹೆಂಗಸು ನಮ್ಮ ಕಟ್ಟಡದಎದುರಿನ ಬೀದಿಯಲ್ಲಿ ಹೂವು ಮಾರಲು ಬಂದಳು. ಸ್ವಲ್ಪ ಉದ್ದದ ಮರದ ಮೇಜು, ಅದರ ಇಕ್ಕೆಲಗಳಲ್ಲಿ ಎರಡು ಕಂಬಗಳನ್ನು ನೆಟ್ಟು ದಾರಕಟ್ಟಿ, ಹೂವಿನ ಹಾರವನ್ನು ನೇತು ಹಾಕುತ್ತಿದ್ದಳು. ಬಣ್ಣಬಣ್ಣದ ಗೊಂಡೆ, ಸೇವಂತಿ, ಗುಲಾಬಿ ಹೂವುಗಳಿದ್ದರೂ ಅವಳಿಗೆ ಮುಡಿಯುವ ಮನಸ್ಸಿಲ್ಲ. ಹಿಂದೆ ಹಣೆಗೆ ನಿರಂತರ ಸಿಂಧೂರ ಹಚ್ಚಿಕೊಳ್ಳುತ್ತಿದ್ದಿರಬೇಕು. ಗೋದಿ ಬಣ್ಣದ ಅವಳ ಮುಖದಲ್ಲಿ ತಿಳಿ ಬಿಳಿ ಬಣ್ಣದ ದುಂಡಗಿನ ಮಚ್ಚೆ, ಹಣೆಯ ಮಧ್ಯದಲ್ಲಿ ಮಾಸದೆ ಉಳಿದಿತ್ತು.
ಸ್ವಲ್ಪ ದಿನದಲ್ಲಿಯೇ ಸುತ್ತ ಮುತ್ತಲಿನ ಪರಿಸರದಲ್ಲಿರುವ ಎಲ್ಲರ ಜೊತೆಯೂ ಸ್ನೇಹವನ್ನು ಬೆಳೆಸಿಕೊಂಡಳು. ಅಲ್ಲಿ ಹೋಗಿ ಬರುವವರನ್ನೆಲ್ಲ ಕರೆದು ಮಾತನಾಡಿಸುತ್ತ, ಸುಖ ಕಷ್ಟ ವಿಚಾರಿಸುತ್ತಲೇ ರಾಶಿರಾಶಿ ಬಿಡಿ ಹೂವುಗಳೆಲ್ಲ ಹಾರವಾಗುತ್ತಿದ್ದವು. ಆದರೆ ಎಲ್ಲರ ಮನೆ ಬಾಗಿಲಿಗೆ ಹೂವು ತಲುಪಿಸುವ ವ್ಯವಸ್ಥೆ ಅವಳಲ್ಲಿ ಇರಲಿಲ್ಲ. ಅವಳ ಮೇಲಿನ ಅನುಕಂಪವೋ ಏನೋ! ನಿತ್ಯ ಹೋಗಿ ತಂದು ಬರುವುದು ಕಷ್ಟವಾದರೂ ಹೆಚ್ಚಿನವರು ಅವಳಿಂದಲೇ ಹೂವನ್ನು ಖರೀದಿಸಲಾರಂಭಿಸಿದ್ದರು. ನನ್ನ ಮನೆದೇವರಿಗೂ ಅವಳು ನೇಯ್ದ ಹೂವೇ ಖಾಯಂ ಆಯಿತು. ಸಂಜೆ ನಾನು ಹೋಗುವುದು ತಡವಾದರೆ ಅಲ್ಲೇ ಕಂಬದ ಬದಿಯಲ್ಲಿ ಹೂವಿನ ಹಾರವನ್ನು ತೈಲಿಯಲ್ಲಿ ಕಟ್ಟಿ ನೇತಾಡಿಸಿ ಇಡುತ್ತಿದ್ದಳು. ಅವಳಿಗೆ ನನ್ನ ಊರಿನ ಬಗ್ಗೆಯೂ ತಿಳಿಯುವ ಕುತೂಹಲ. “”ನೀನು ಊರಿನಿಂದ ತಂದು ಕೊಟ್ಟ ಬ್ರಾಹ್ಮಿ ಗಿಡ ಗ್ಯಾಲರಿ ತುಂಬ ಹರಡಿದೆ” ಎಂದು ವಾರಕ್ಕೊಮ್ಮೆಯಾದರೂ ಹೇಳದಿದ್ದರೆ ಅವಳಿಗೆ ಸಮಾಧಾನವಿಲ್ಲ. ಆದರೆ, ತನ್ನ ಅಂತರಾಳವನ್ನು ತೆರೆದಿಡುತ್ತಿದ್ದುದು ಅವಳ ಸಮವಯಸ್ಕರಲ್ಲಿ ಮಾತ್ರ. ಬೆನ್ನು ನೋವು, ನಿಂತು, ನಿಂತು ಕೈ ಕಾಲಿನ ಗಂಟು ನೋವು ಅದೆಲ್ಲ ಅವಳಾಡುವ ಮಾತಿನಲ್ಲಿಯೇ ವ್ಯಕ್ತವಾಗುತ್ತಿತ್ತು. ಅದೇನೇ ಆದರೂ ಬಗೆಬಗೆಯ ಕಂಪಿನ ಹೂವಿನೊಂದಿಗೆ ನಿತ್ಯವೂ ತಪ್ಪದೆ ಕಾಣಿಸಿಕೊಳ್ಳುತ್ತಿದ್ದಳು.
ಐದಾರು ತಿಂಗಳಿಗೊಮ್ಮೆ ಊರಿಗೆ ಹೋದರೂ ನಾಲ್ಕೇ ದಿನದಲ್ಲಿ ಮತ್ತೆ ಹಾಜರು. ಕಳೆದ ತಿಂಗಳು ಹೂವಿಗಾಗಿ ಬಂದ ಹೆಂಗಸಿನ ಜೊತೆ ತನ್ನ ಆರೋಗ್ಯದ ಕುರಿತು ಹೇಳಿಕೊಳ್ಳುತ್ತಿದ್ದಳು. ಮಾರನೆಯ ದಿನದಿಂದ ಅವಳು ಹೂವು ಮಾರಲು ಬರಲಿಲ್ಲ. ಅವಳಿರುವಾಗ ಹೂವು ಕಟ್ಟುವ ಅವಸರದಲ್ಲಿ ಕೆಳಗುದುರಿದ ಎಸಳುಗಳು ಕೂಡ ಒಣಗಿ ಬಣ್ಣ ಮಾಸಿತ್ತು. ಹೂವಿಡಲು ಉಪಯೋಗಿಸುತ್ತಿದ್ದ ಮೇಜು ಮತ್ತು ಕಂಬಗಳನ್ನು ಬದಿಗೆ ಸರಿಸಿ ಇಡಲಾಗಿತ್ತು. ಕೆಲವು ದಿನಗಳ ನಂತರವೂ ಅವಳ ಸುಳಿವಿರಲಿಲ್ಲ. ಅಲ್ಲೆ ಪಕ್ಕದಲ್ಲಿ ವಿಚಾರಿಸಿದೆ. ವಾಂತಿ ಬೇಧಿ ಜಾಸ್ತಿಯಯಿತೆಂದು ಆಸ್ಪತ್ರೆಗೆ ಸೇರಿದವಳು ಮತ್ತೆ ಮರಳಿ ಬರಲಿಲ್ಲವೆಂದು ತಿಳಿಯಿತು.
ಸುಮಾರು ಹತ್ತು ವರ್ಷದಿಂದ ಅವಳೆಂದರೆ ನಮ್ಮ ಮನೆಯವಳೇ ಅನ್ನುವಷ್ಟು ಬಾಂಧವ್ಯ ಎಲ್ಲರಲ್ಲಿ ಬೆಳೆದಿತ್ತು. ಈಗ ಅದೇ ಜಾಗದಲ್ಲಿ ಮತ್ತೋರ್ವ ಮೌಶಿ ಅಲ್ಲಿ ಸೊಪ್ಪು ತರಕಾರಿ ಮಾರುತ್ತ ಕೂತಿದ್ದಾಳೆ. ಈ ನಗರಿಯಲ್ಲಿ ತುತ್ತು ಕೂಳಿಗಾಗಿ ಬೀದಿಗೆ ಬರುವವರಲ್ಲಿ ಇಳಿವಯಸ್ಸಿನ ವಿಧವೆಯರೇ ಹೆಚ್ಚು ಕಾಣ ಸಿಗುತ್ತಾರೆ. ನಗರದಲ್ಲಿ ಭಿಕ್ಷೆಗಾಗಿ ಹರಕುಬಟ್ಟೆ, ಮುರುಕು, ತಟ್ಟೆ ಹಿಡಿದುಕೊಂಡವರಲ್ಲಿ ವೃದ್ಧರ ಪಾಲು ಅರ್ಧದಷ್ಟಿದೆ. ಸಡಿಲಗೊಂಡು ಸುಕ್ಕುಗಟ್ಟಿರುವ ದೇಹ ಬಿರುಬಿಸಿಲಿಗೆ ಇನ್ನಷ್ಟು ಸುಟ್ಟುಕೊಳ್ಳುತ್ತಲೇ ಇರುತ್ತದೆ. ಅವರನ್ನು ನೋಡಿದಾಗಲೆಲ್ಲ “ಈ ಜೀವಗಳು ಒಂದಿಷ್ಟಾದರೂ ಸುಖವನ್ನು ಕಂಡಿದೆಯೋ ಇಲ್ಲವೋ!’ ಎಂಬ ಭಾವ ಕಾಡುವುದುಂಟು. “ಹೊಟ್ಟೆಗೆ ಊಟವಿದ್ದರೆ ಅದೇ ಸ್ವರ್ಗ, ಅದೇ ದೇವರು, ಅದೇ ಆಧ್ಯಾತ್ಮ’ ಎನ್ನುವ ಮಾತೊಂದಿದೆ. ಆದರೆ, ಹೊಟ್ಟೆಪಾಡಿಗಾಗಿ ಕೆಲವರಿಗೆ ಎಷ್ಟೆಲ್ಲ ಬವಣೆಗಳನ್ನು ಎದುರಿಸಬೇಕಾಗುತ್ತದೆ. ಆದರೂ ಭರವಸೆಯಲ್ಲಿ ಬದುಕಿದೆ ಎಂಬ ತತ್ವವನ್ನು ಇವರೆಲ್ಲ ಅರಿತಿರುವರೆಂಬುದು ದಿಟ. ಎಲ್ಲರ ಧ್ಯೇಯ ಒಂದೇ ಆದರೂ ಮಾರ್ಗ ಮಾತ್ರ ಬೇರೆ ಬೇರೆಯಾಗಿರುತ್ತದೆ.
-ಅನಿತಾ ಪಿ. ತಾಕೊಡೆ