ಯಕ್ಷಗಾನದ ಮೇಲೆ ಹುಚ್ಚುಪ್ರೀತಿ ನನಗೆ ಯಾವಾಗ ಹುಟ್ಟಿತ್ತೋ ನೆನಪಿಲ್ಲ. ಈ ಹುಚ್ಚಿನಿಂದಾದ ಅನುಭವಗಳು ಮತ್ತು ನೆನಪುಗಳು ಹಾಗೇ ಉಳಿದಿವೆ. ಯಕ್ಷಗಾನದ ಚಂಡೆಯ ಸದ್ದೊಂದು ಸಾಕು ಯಕ್ಷಪ್ರೇಮಿಯಾಗಲು. ಅಂಥದ್ದರಲ್ಲಿ, ಆಗೆಲ್ಲ ನನ್ನೂರು ಗುಂಡೀಬೈಲು ಯಕ್ಷಗಾನ ನಾಟಕಗಳಿಂದ ಶೃಂಗಾರಗೊಳ್ಳುತ್ತಿದ್ದ ಕಾಲ. ಅಲ್ಲದೇ, ಪಕ್ಕದ ಗುಂಡಬಾಳದಲ್ಲಿ ಆರು ತಿಂಗಳುಗಳ ಕಾಲ ಒಂದೇ ರಂಗಸ್ಥಳದಲ್ಲಿ ಸೇವೆಯಾಟ ನಡೆಯುತ್ತಿತ್ತು. ಜೊತೆಗೆ ಊರಿನ ಸುತ್ತಮುತ್ತ ಯಕ್ಷಗಾನ ಸಂಘಗಳು, ಯಕ್ಷಗಾನ ಪ್ರದರ್ಶನ ಇಟ್ಟುಕೊಳ್ಳುತ್ತಿದ್ದವು.
ನನಗಾಗ ಏಳು ವರುಷ. ಅವತ್ತು ರಾತ್ರಿ ಪಕ್ಕದ ಕೆಂಚಗಾರಿನಲ್ಲಿ ಸಂಘದ ಯಕ್ಷಗಾನವಿತ್ತು. ಮನೆಯವರೆಲ್ಲ ಹೋಗಿ, ರಂಗಸ್ಥಳದ ಎದುರುಗೋಣಿಚೀಲವನ್ನು ಹಾಸಿ ಕುಳಿತುಕೊಳ್ಳುವ ಹೊತ್ತಿಗೆ, “ದಕ್ಷಿಣಾಮೂರ್ತಿ ದೇವಾ..’ ಎನ್ನುತ್ತಾ ಭಾಗವತರು ಶುರುಮಾಡಿದ್ದೇ ತಡ, ವೇಷ ಯಾವಾಗ ರಂಗಕ್ಕೆ ಬರುತ್ತದೆಂಬಕಾತರದಲ್ಲಿ ಕಾಯುತ್ತಿದ್ದೆ. ಹರೇ ರಮಣ ಗೋವಿಂದ ಎಂಬ ಪದ್ಯಕ್ಕೆ ಕುಣಿಯುತ್ತ ಬಂದ ಎರಡು ವೇಷಗಳನ್ನು ಕಂಡು ಪುಳಕಿತನಾದೆ. ಅವರ ಕುಣಿತದೆಡೆಗೆ ನೆಟ್ಟ ದೃಷ್ಟಿಯನ್ನುತೆಗೆಯಲಿಲ್ಲ. ಮನದೊಳಗೆ ನಾನೂ ಕುಣಿಯುತ್ತಿದ್ದೆ. ನನ್ನ ಕೈ ಕಾಲುಗಳು ಚಂಡೆಗೆ ತಕ್ಕಂತೆ ಆಡಲು ಶುರುವಿಟ್ಟುಕೊಂಡಾಗ ಎದ್ದು ನೇರವಾಗಿ ರಂಗಸ್ಥಳದತ್ತ ಓಡಿದೆ. ಆ ಎರಡು ಬಾಲಗೋಪಾಲರ ನಡುವೆ ನಿಂತು, ಪದ್ಯ ಮುಗಿಯುವ ತನಕವೂ ಆನಂದದಿಂದ ಕುಣಿದೆ. ಅವತ್ತು ನಾನು ಧರಿಸಿದ್ದ ಕಡುನೀಲಿ ಮತ್ತು ಕೆಂಪುಗೆರೆಯ ಸ್ವೆಟರ್ ಮತ್ತು ಅಲ್ಲಿ ಕುಣಿದ ಕ್ಷಣ ಮನದಲ್ಲಿ ಅಚ್ಚೊತ್ತಿಕೊಂಡಿವೆ. ಏನು ಕುಣಿದೆನೋ- ಬಿಟ್ಟೆನೋ? ನೆನಪಿಲ್ಲ, ಆದರೆ ಅವತ್ತಿನ ಈ ಪರಮಾನಂದಕ್ಕೆ ಸಮನಾದದು ಯಾವುದೂ ಇಲ್ಲ. ಈತನಕ ಮತ್ತೂಂದು ಮರುಕಳಿಸಲಿಲ್ಲ.
ಯಕ್ಷಗಾನದ ಇನ್ನೊಂದು ಹಸಿಹಸಿ ನೆನಪು ಜೊತೆಯಲ್ಲಿದೆ. ಎಂಟನೇ ತರಗತಿಯಲ್ಲಿದ್ದಾಗ ಕೆರೆಮನೆ ಶಂಭು ಹೆಗಡೆಯವರ ತಂಡದೊಂದಿಗೆ ಬಾಳೆಹೊನ್ನೂರಿಗೆ ಹೋಗಿದ್ದೆ. ಸತ್ಯಹರಿಶ್ಚಂದ್ರ ಪ್ರಸಂಗದಲ್ಲಿ ಲೋಹಿತಾಶ್ವನ ಪಾತ್ರ ಮಾಡಿದ್ದೆ. ಲೋಹಿತಾಶ್ವನಿಗೆ ಹಾವು ಕಚ್ಚಿ ಶವವಾದಾಗ, ತಾಯಿ ಚಂದ್ರಮತಿ ಅದನ್ನು ಸುಡುವುದಕ್ಕೆ ರುದ್ರಭೂಮಿಗೆ ತಂದು, ಕಾವಲುಗಾರನಾಗಿದ್ದ ಹರಿಶ್ಚಂದ್ರನ ಜೊತೆಗಿನ ಸಂಭಾಷಣೆಯ ಸನ್ನಿವೇಶದಲ್ಲಿ ನಾನು ಮಲಗಿದ್ದು, ಈ ಸನ್ನಿವೇಶ ಮುಗಿದ ಕೂಡಲೇ ತೆರೆಹಿಡಿಯವವರು ಬಂದಾಗ ಎದ್ದು ಚೌಕಿಗೆ ಹೋಗಬೇಕಿತ್ತು.
ಸರಿ ಸುಮಾರು ಅರ್ಧಗಂಟೆಗೂ ಮಿಕ್ಕಿದ ಆ ಸನ್ನಿವೇಶ ಮುಗಿಯುವ ಮೊದಲೇ, ನನಗೆ ಜೋರಾದ ನಿದ್ದೆ ಬಂದಿತ್ತು. ತೆರೆ ಹಿಡಿಯುವವರು, ನಾನು ಏಳದೇ ಇದ್ದದ್ದನ್ನು ನೋಡಿ, ನಿಧಾನವಾಗಿ ಅವರ ಕಾಲನ್ನು ನನ್ನ ಕಾಲಿಗೆ ತಾಗಿಸಿ ಎಬ್ಬಿಸಿದರು. ಒಂದರೆಕ್ಷಣ ನಾನೆಲ್ಲಿದ್ದೇನೆಂದು ತಿಳಿಯದೆ ಪರದಾಡಿದೆ. ಆ ಕೂಡಲೇ ಸಾವರಿಸಿಕೊಂಡು ಚೌಕಿಯತ್ತ ಓಡಿದೆ. ಇಂಥ ಘಟನೆಗಳು ಯಕ್ಷಗಾನ ಅನ್ನುತ್ತಲೇ ನೆನಪಾಗಿ ಪಾತ್ರಧಾರಿಗಳಂತೆ ಎದುರಿಗೆ ಬಂದು ಕುಣಿಯುತ್ತವೆ.
-ವಿಷ್ಣು ಭಟ್ ಹೊಸ್ಮನೆ