Advertisement

ಪ್ರೌಢಶಾಲೆಯ ನೆನಪುಗಳು

12:30 AM Jan 04, 2019 | |

ಅದೊಂದು ಪುಟ್ಟ ಹಳ್ಳಿ. ನಾನು ನನ್ನ ಪ್ರಾಥಮಿಕ ಶಿಕ್ಷಣ ಅಂದರೆ, 1ರಿಂದ 5ನೆಯ ತರಗತಿಯವರೆಗೆ ಅಲ್ಲಿ ಓದಲು ಸಾಧ್ಯವಾಯಿತು. ಮುಂದೆ ನನ್ನ ವಿದ್ಯಾಭ್ಯಾಸವನ್ನು ನಾನು ಬೇರೆ ಕಡೆ ಮುಂದುವರಿಸಬೇಕಾಯಿತು. ನನ್ನಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಅವರಿಗೆ ಬೇರೊಂದು ಕಡೆ ವರ್ಗ ಆಗಿದ್ದರಿಂದ ನಾವೂ ಅವರೊಂದಿಗೆ ಕುಟುಂಬ ಸಮೇತ ಹೋಗಬೇಕಾಗಿ ಬಂತು. ಮೊದಲೆಲ್ಲ ನನಗೆ ನನ್ನ ಪ್ರಾಥಮಿಕ ಶಾಲೆಯ (ಕನ್ನಡದ ಮಾಧ್ಯಮ) ಶಿಕ್ಷಕರು, “ನೀನು ಹೇಗಿದ್ದರೂ ಬೇರೆ ಕಡೆ ಹೋಗುತ್ತೀಯಾ. ಆಂಗ್ಲ ಮಾಧ್ಯಮಕ್ಕೆ ಸೇರಿಕೋ’ ಎಂದೆಲ್ಲ ಹೇಳುತ್ತಿದ್ದರು. ಆದರೆ, ಅದೇಕೋ ಏನೋ ಆಗ ನನಗೆ ಆಂಗ್ಲ ಮಾಧ್ಯಮವೆಂದರೆ ಆಗದ ಮಾತು. ನಂತರ 6ನೇ ತರಗತಿಯಲ್ಲಿ ಅಲ್ಲಿನ ಮುಖ್ಯೋಪಾಧ್ಯಾಯರು ಅದೇನು ಮೋಡಿ ಮಾಡಿ ಹೇಳಿದರೋ ಏನೋ ನಾನು 8ನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಸೇರಿದೆ.

Advertisement

7ನೆಯ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ ಒಮ್ಮೆಗೆ ಆಂಗ್ಲ ಮಾಧ್ಯಮಕ್ಕೆ ಹೋದಾಗ ಆದ ಭಯ ಅಷ್ಟಿಷ್ಟಲ್ಲ. ಮುಂದೆ ಹೇಗೋ ಏನೋ ಎಂದು ಎಣಿಸುತ್ತಿರಬೇಕಾದರೆ ಕಡೆಗೂ ಮೊದಲ ದಿನ ಬಂದೇ ಬಿಟ್ಟಿತು. ಯಾವಾಗಲೂ ಇರದ ಆ ಭಯ ನನ್ನಲ್ಲಿತ್ತು. ಕಡೆಗೂ ತರಗತಿ ಪ್ರವೇಶಿಸಿದೆ. ಏನೋ ಹೊಸತೊಂದು ಅನುಭವ. ಬೇರೆ ಯಾರೂ ಪರಿಚಯವಿರಲಿಲ್ಲ. ಮೊದಲ ದಿನವೇ ಅಲ್ಲಿನ ಮುಖ್ಯೋಪಾಧ್ಯಾಯರು ಅದೇನು ಹೇಳಿದರೋ ಎಳ್ಳಷ್ಟೂ ಅರ್ಥವಾಗಲಿಲ್ಲ. ತರಗತಿಯನ್ನು ಎರಡು ವಿಭಾಗಗಳನ್ನಾಗಿ ಮಾಡಿದರು. ನಾವೋ ಅವರು ಹೇಳಿದಂತೆಯೇ ಅವರು ಸೂಚಿಸಿದ ವಿಭಾಗಕ್ಕೆ ಹೊರಟೆವು. ಅಲ್ಲಿಗೆ ಹೋದಾಗ ಎಲ್ಲರೂ ಅಪರಿಚಿತರು. ಅದರಲ್ಲೂ ಆಂಗ್ಲಭಾಷೆಯನ್ನು ಚೆನ್ನಾಗಿ ಬಲ್ಲವರು. ನನಗಂತೂ ಭಯವೇ ಆಗಿಹೋಯಿತು. ಪುಟ್ಟ ತಲೆಯಲ್ಲಿ ಏನೇನೋ ಆಲೋಚನೆಗಳು. ಶಾಲೆಯಲ್ಲಿ ಆಂಗ್ಲಭಾಷೆಯನ್ನು ಬಿಟ್ಟು ಬೇರಾವ ಭಾಷೆಯನ್ನೂ ಆಡಬಾರದೆಂದು ಕಟ್ಟಪ್ಪಣೆ ಬೇರೆ ಆಗಿತ್ತು. ಅಲ್ಲದೆ ಸರಿಯಾಗಿ ಯಾರೂ ಪರಿಚಯ ಇಲ್ಲದಿದ್ದುದರಿಂದ ಮಾತನಾಡಲಾಗಲಿಲ್ಲ.

ಎರಡನೆಯ ದಿನ ಕೊಂಚ ಭಯವಿತ್ತು. ನಾನು ಹೇಳಿಕೇಳಿ ಮೊದಲನೆಯ ಬೆಂಚು. ನನ್ನೊಂದಿಗೆ ನಾಲ್ಕು ಜನ. ಅವರೆಲ್ಲರೂ ಮೊದಲಿನಿಂದಲೂ ಆಂಗ್ಲ ಮಾಧ್ಯಮದವರು. ನಾನೋ ಹೊಸದಾಗಿ ಬಂದವಳು. ಆದರೆ, ಅವರೆಲ್ಲರೂ ಅವರ ಪರಿಚಯ ಹೇಳಿಕೊಂಡು ನನ್ನನ್ನೂ ಪರಿಚಯಿಸಿಕೊಂಡರು.

ನಾನು ಕನ್ನಡ ಮಾಧ್ಯಮದವಳೆಂದು ಕರುಣೆ ಉಕ್ಕಿ ಬಂತೋ ಏನೋ. ಕನ್ನಡದಲ್ಲಿಯೇ ಮಾತನಾಡಿಸಿದರು. ಹೀಗೆ ಕನ್ನಡದ ಮಾತುಕತೆ ದಿನಗಳುರುಳಿದಂತೆ ಮುಂದುವರೆಯಿತು. ಕೊನೆಗೆ ಇದೆಲ್ಲ ಶಿಕ್ಷಕರಿಗೆ ತಿಳಿದು ಮತ್ತೆ ಆಂಗ್ಲಭಾಷೆಯಲ್ಲಿಯೇ ಮಾತನಾಡಬೇಕೆಂದು ಆದೇಶ ಹೊರಡಿಸಿದರೂ ನಮಗೆ ಕನ್ನಡದಲ್ಲಿಯೇ ಮಾತನಾಡಿ ರೂಢಿಯಾದ್ದರಿಂದ ನಮ್ಮ cಟnvಛಿrsಚಠಿಜಿಟn ಎಂಬುವುದು ಕನ್ನಡದಲ್ಲಿಯೇ ಮುಂದುವರೆಯಿತು. ಕೆಲವು ಶಿಕ್ಷಕರಂತೂ ನಮಗೆ ಕನ್ನಡದಲ್ಲಿಯೇ ಉತ್ತರಿಸುತ್ತಿದ್ದರು. ನಾನು ಮೊದಲೆಲ್ಲ ಸದಾ ತರಗತಿಗೆ ಮೊದಲಾಗಿರುತ್ತಿದ್ದವಳು. ಆದರೆ, 8ನೇ ತರಗತಿಯಲ್ಲಿದ್ದಾಗ ತೀರಾ ಕಡಿಮೆ ಅಂಕ ಪಡೆದು ಬೇಸರವಾಗಿತ್ತು. ಆದರೂ ಎಲ್ಲರ ಸಹಕಾರದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾದೆ. ಅದೆಷ್ಟು ಬಾರಿ ಶಿಕ್ಷಕರ ಕೋಣೆಗೆ ಡೌಟ್‌ಗಳನ್ನು ಕೇಳಲು ಹೋಗಿದ್ದೆನೋ ನನಗಂತೂ ತಿಳಿಯದು.

ಮೊದಲೇ ಆಂಗ್ಲ ಮಾಧ್ಯಮ. ಆದ್ದರಿಂದ ಶಿಕ್ಷಕರ ಬಳಿ ಡೌಟ್‌ ಕೇಳಲು ಹೋದಾಗ ಆಂಗ್ಲ ಭಾಷೆಯಲ್ಲಿ ಮೊದಲೇ ಹೇಗೆ ಕೇಳಬೇಕೆಂದು ಅಭ್ಯಾಸ ಮಾಡಿದ ನಂತರ ಕೇಳುತ್ತಿದ್ದವರು ನಾವು. ಹೇಗೋ ಮಾಡಿ ಡೌಟ್‌ ಅನ್ನು ಪರಿಹರಿಸಿಕೊಳ್ಳುತ್ತಿದ್ದೆವು. ಕಡೆಗೂ ನಮ್ಮ ಅವರೆ ನೋಡಿ ಬೇಸತ್ತು, ಅವರೇ ಕನ್ನಡದಲ್ಲಿ ಉತ್ತರಿಸುತ್ತಿದ್ದರು. ಮಾತನಾಡಿಸುತ್ತಿದ್ದರು. ಆಗ ಆಂಗ್ಲ ಭಾಷೆಯೇ ಬಾರದಿದ್ದ ನಾನು ಈಗ ತಕ್ಕಮಟ್ಟಿಗೆ ಚೆನ್ನಾಗಿ ಬಲ್ಲೆ. ಅಂದಿನ ಆಂಗ್ಲ ಮಾಧ್ಯಮದಲ್ಲೂ ಯಾರಿಗೂ ತಿಳಿಯದೆ ನಾವು ಮೂರೂ ವರ್ಷ ಕನ್ನಡದಲ್ಲೇ ವ್ಯವಹರಿಸುತ್ತಿದ್ದುದನ್ನು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಇಂತಹ ಸವಿನೆನಪು ಮತ್ತೆ ಜೀವನದಲ್ಲಿ ಬರುವುದೋ ಇಲ್ಲವೋ ಅಲ್ಲವೇ?

Advertisement

ಚೈತ್ರಾ ಕಿನ್ನಿಗೋಳಿ

Advertisement

Udayavani is now on Telegram. Click here to join our channel and stay updated with the latest news.

Next