Advertisement

ಅನಾಥವಾದ ತ್ಯಾಗವೀರನ ಸ್ಮಾರಕಗಳು

11:52 AM Jan 10, 2020 | Suhan S |

ನವಲಗುಂದ: ಸ್ವಹಿತಕ್ಕಾಗಿ ಸಂಪತ್ತು ಗಳಿಸದೆ ಪರಹಿತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಲಿಂ| ಲಿಂಗರಾಜ ದೇಸಾಯಿ ಯವರನ್ನು ನೆನಪಿಸುವ ಐತಿಹಾಸಿಕ ಸ್ಮಾರಕಗಳು ಅಕ್ಷರಶಃ ಅನಾಥವಾಗಿವೆ. ಅವರ ಸಮಾಧಿ ಸ್ಥಳ ತಡಿಮಠ ಹಾಗೂ ವಾಡೆ ಜೀರ್ಣೋದ್ಧಾರಕ್ಕೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

Advertisement

ಸ್ಮಾರಕಗಳಿಗೆ ಕಾಯಕಲ್ಪ ನೀಡಬೇಕಾದ ಸ್ಥಾನದಲ್ಲಿರುವವರು ಜಾಣನಿದ್ದೆಗೆ ಜಾರಿದ್ದಾರೆ. ನವಲಗುಂದ-ಶಿರಸಂಗಿ ಲಿಂಗರಾಜ ಟ್ರಸ್ಟ್‌ ಇದ್ದೂ ಇಲ್ಲದಂತಾಗಿದೆ.

ತಡಿಮಠ ಜೀರ್ಣಾವಸ್ಥೆ:ಲಿಂಗರಾಜರು 1861ರ ಜ.10ರಂದು ಜನಿಸಿ, 1906ರಲ್ಲಿ ನಿಧನರಾದರು. ನವಲಗುಂದ ಪಟ್ಟಣದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಅವರ ಸಮಾಧಿ ಸ್ಥಳ ಇಂದು ತಡಿಮಠವೆಂದೇ ಪ್ರಸಿದ್ಧವಾಗಿದೆ. ತಡಿ ಎಂಬುದು ಮರಾಠಿ ಶಬ್ದ. ತಡಿ ಅಂದರೆ ಸಮಾಧಿ  ಎಂದರ್ಥ. ಅದಕ್ಕಾಗಿ ಅಂದಿನಿಂದಲೇ ಈ ಸ್ಮಾರಕದ ಸ್ಥಳಕ್ಕೆತಡಿಮಠವೆಂದು ಕರೆಯುತ್ತಾ ಬರಲಾಗಿದೆ. ಲಿಂಗರಾಜರ ಸಂಸ್ಥಾನದ ಹಿರಿಯ ಜೀವಿಗಳ ಸಮಾಧಿ ಇಲ್ಲಿದೆ.

ಸಂಸ್ಥಾನದ ಆಳ್ವಿಕೆ ಕಾಲದಲ್ಲಿ ದಾನಿಗಳ ಸ್ಮಾರಕ ನಿರ್ಮಾಣ ಮಾಡಿರುವುದನ್ನು ಬಿಟ್ಟರೆ ಇವತ್ತಿನವರೆಗೂ ಸ್ಮಾರಕಗಳ ಅಭಿವೃದ್ಧಿ ಪಡಿಸಬೇಕೆಂಬ ಇಚ್ಛಾಶಕ್ತಿ ಉಸ್ತುವಾರಿ ನೋಡಿಕೊಳ್ಳುವ ಟ್ರಸ್ಟ್‌ಗಳಿಗೆ ಬರುತ್ತಿಲ್ಲ.

ವಾಡೆ ಸ್ಥಿತಿ ಚಿಂತಾಜನಕ: ಲಿಂಗರಾಜರು ವಾಸಿಸಿದ, ಅಮೂಲ್ಯ ಕ್ಷಣಗಳನ್ನು ಕಳೆದ ವಾಡೆಯ ಸ್ಥಿತಿ ಚಿಂತಾಜನಕವಾಗಿದೆ. 21 ಅಡಿ ಉದ್ದದ ಕಂಬಗಳು, ಕರಕುಶಲತೆಯಿಂದ ಕೂಡಿದ ಕೆತ್ತನೆ, ವಾಡೆಯಲ್ಲಿರುವ ಮೇಲಿನ ಕೊಠಡಿಗಳು ಇಂದು-ನಾಳೆ ಬೀಳುವಂತಾಗಿವೆ. ನವಲಗುಂದ-ಶಿರಸಂಗಿ ಸಂಸ್ಥಾನದ ದರ್ಬಾರಿನ ಆಳ್ವಿಕೆ ಸ್ಥಳ ಅವನತಿಯತ್ತ ಸಾಗಿದೆ. ವಾಡೆಯ ವಿಶಾಲವಾದ ಜಾಗೆ, ದ್ವಾರಬಾಗಿಲು ಕ್ಷೀಣಿಸುತ್ತಿದೆ. ಕಾಂಪೌಂಡ್‌ ಸಹ ಬಿದ್ದು ಮುಳ್ಳಕಂಠಿಗಳಿಂದ ಕೂಡಿದೆ. ವಾಡೆಯಲ್ಲಿರುವ ದೇಸಾಯಿ ಮನೆತನದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ದೇವರ ದೇವಸ್ಥಾನ ಏಕಾಂಗಿಯಾಗಿದೆ. ಅದು ಯಾವಾಗ ನೆಲಕಚ್ಚಲಿದೆಯೋ ಗೊತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ನೀಡದೇ ಇದ್ದರೆ ಮುಂದಿನ ಪೀಳಿಗೆಗೆ ಸ್ಮಾರಕಗಳನ್ನು ರಕ್ಷಿಸಿಕೊಂಡು ಹೋಗುವುದು ದುಸ್ತರವಾಗಲಿದೆ.

Advertisement

ಇದ್ದೂ ಇಲ್ಲದಂತಿರುವ ಟ್ರಸ್ಟ್‌: ಲಿಂ| ಲಿಂಗರಾಜ ದೇಸಾಯಿ ಅವರ ಅಪೇಕ್ಷೆ ಕಾರ್ಯಗತಗೊಳಿಸಲು ನವಲಗುಂದ-ಶಿರಸಂಗಿ ಲಿಂಗರಾಜ ಟ್ರಸ್ಟ್‌ ರೂಪಗೊಂಡಿದೆ. ಟ್ರಸ್ಟ್‌ನಲ್ಲಿ ಶಿಕ್ಷಣ ಮಾಡಿ ಎಲ್ಲ ರಂಗದಲ್ಲಿಯೂ ಪ್ರಖ್ಯಾತಗೊಂಡ ಅನೇಕ ಗಣ್ಯರು ಇಂದಿಗೂ ಲಿಂಗರಾಜರ ನೆನೆದುಕೊಳ್ಳುತ್ತಾರೆ. ಹೆಮ್ಮರವಾಗಿ ಸಂಸ್ಥೆ ಬೆಳೆದು ನಿಂತರೂ ನವಲಗುಂದದಲ್ಲಿರುವ ನೂರಾರು ವರ್ಷದ ಲಿಂಗರಾಜ ವಾಡೆ, ಕೈಲಾಸ ಮಂದಿರ (ಸ್ಮಾರಕ) ಮಾತ್ರ ಅವನತ್ತಿಯತ್ತ ಹೊರಟಿರುವುದು ದುರದುಷ್ಟಕರವಾಗಿದೆ. ಟ್ರಸ್ಟ್‌ ಕಾರ್ಯವ್ಯಾಪ್ತಿ ಕೇವಲ ಬೆಳಗಾವಿಗೆ ಸೀಮಿತವಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಿದ್ದು, ವರ್ಷಕ್ಕೆ ಮೂರು ಸಭೆಗಳನ್ನು ಮಾಡಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಟ್ರಸ್ಟ್‌ ಕಥೆ. ಸ್ಮಾರಕಗಳ ಅಭಿವೃದ್ಧಿಗಾಗಿ 2019ರ ಜಯಂತಿ ಸಂದರ್ಭದಲ್ಲಿ ಪಟ್ಟಣದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಸಮಾಜ ಬಾಂಧವರು ನಾಗನೂರ ಸ್ವಾಮೀಜಿಗಳ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಟ್ರಸ್ಟ್‌ಗೆ ಮನವಿ ನೀಡಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ.

ಕೊನೆ ಹನಿ :  ಲಿಂಗರಾಜ ವಾಡೆ, ಕಾಡಸಿದ್ದೇಶ್ವರ ಮಠ, ತಡಿಮಠ(ಸಮಾಧಿ ) ಅಭಿವೃದ್ಧಿ ಕಾಣಬೇಕಾಗಿದೆ. ಜೊತೆಗೆ ನೀಲಮ್ಮನ ಕೆರೆ, ಸಂಗವ್ವನ ಭಾವಿ, ಚನ್ನಮ್ಮಕೆರೆ ಸೇರಿದಂತೆ ಹಲವಾರು ಸ್ಥಳಗಳ ಜೀಣೊದ್ಧಾರವಾಗಬೇಕಾಗಿದೆ. ಲಿಂಗರಾಜರ 159ನೇ ಜಯಂತ್ಯುತ್ಸವ ಜ. 10ರಂದು ನಡೆಯಲಿದ್ದು, ಅದ್ಧೂರಿಯಾಗಿ ಆಚರಣೆಯಾಗಬೇಕಾಗಿದೆ. ದಾನವೀರನಿಗೆ ಸಂಬಂಧಿಸಿದ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಿ ಯುವ ಪೀಳಿಗೆಗೆ ಮಾದರಿಯಾಗಿಸಬೇಕಾಗಿದೆ. ಅಂದಾಗಲೇ ತ್ಯಾಗವೀರನಿಗೆ ಒಂದಿನಿತು ಕೃತಜ್ಞತೆ ಸಲ್ಲಿಸಿದಂತಾಗುತ್ತದೆ ಅಲ್ಲವೆ.

ಲಿಂ| ಲಿಂಗರಾಜ ದೇಸಾಯಿಯವರು ಪರರ ಹಿತಕ್ಕಾಗಿ ತಮ್ಮ ಆಸ್ತಿಯನ್ನೇ ದಾನವಾಗಿ ನೀಡಿದ ಪುಣ್ಯಾತ್ಮರು. ಅವರ ಮೂಲ ವಾಸಸ್ಥಾನ, ಸ್ಮಾರಕಗಳು ಜೀರ್ಣೋದ್ಧಾರಬಾಗದಿರುವುದು ದುರ್ದೈವ. ಇದಕ್ಕಾಗಿ ಬೆಳಗಾವಿ ಟ್ರಸ್ಟ್‌ಗಳಿಗೂ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಸವಲಿಂಗ ಸ್ವಾಮೀಜಿ, ಗವಿಮಠ ನವಲಗುಂದ

 

-ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next