Advertisement
ಪಂಜಾಬ್ ಸರಕಾರ ಏರ್ಪಡಿಸಿದ್ದ ಜಲಿಯನ್‌ವಾಲಾಬಾಗ್ ದುರಂತದ ನೆನಪಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುವ ಬದಲಿಗೆ ಇದಕ್ಕೆ ಸಮಾನಾಂತರವಾದ ಇನ್ನೊಂದು ಶತಕ ಸ್ಮರಣೆಯ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆಕ್ಷೇಪಿಸಿದ್ದಾರೆ. ಈ ವಿಷಯದಲ್ಲಿ ಬಹುಶಃ ಇಬ್ಬರೂ ತಪ್ಪಿತಸ್ಥರೇ. ವಾಸ್ತವವಾಗಿ ಇದೊಂದು ಕೇಂದ್ರ ಹಾಗೂ ರಾಜ್ಯದ ಜಂಟಿ ಕಾರ್ಯಕ್ರಮವಾಗಬೇಕಿತ್ತು. ನೂರು ವರ್ಷಗಳ ಹಿಂದೆ ಬ್ರಿಟಿಷರು ನಡೆಸಿದ ಈ ಕೃತ್ಯವನ್ನು ನಾವು ಒಂದು ರಾಷ್ಟ್ರವಾಗಿ ಖಂಡಿಸುತ್ತಿದ್ದೇವೆಂದು ಈ ಮೂಲಕ ಜಗತ್ತಿಗೆ ಅದರಲ್ಲೂ ಮುಖ್ಯವಾಗಿ ಬ್ರಿಟಿಷ್ ಸರಕಾರಕ್ಕೆ ತೋರಿಸಿಕೊಡಬಹುದಿತ್ತು. ಆದರೂ ತೃಪ್ತಿದಾಯಕ ಸಂಗತಿಯೆಂದರೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಜಲಿಯನ್‌ವಾಲಾ ಬಾಗ್‌ಗೆ ಭೇಟಿ ನೀಡಿದ್ದು ಹಾಗೂ ಅಂದು ಹತ್ಯೆಗೀಡಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು. ಈ ಮಾರಣಹೋಮವನ್ನು ಖಂಡಿಸುವ ಲೇಖನವೊಂದನ್ನು ಕೂಡ ಅವರು ಪತ್ರಿಕೆಗಳಲ್ಲಿ ಬರೆದಿದ್ದರು.
Related Articles
Advertisement
ಜಲಿಯನ್‌ವಾಲಾಬಾಗ್ ವಿಷಯದಲ್ಲಿ ಬ್ರಿಟಿಷರೇಕೆ ಕ್ಷಮೆಯಾಚಿಸಲು ಬಯಸುತ್ತಿಲ್ಲ? ಇದಕ್ಕೆ ಹಲವಾರು ಕಾರಣಗಳಿವೆ. ಬ್ರಿಟಿಷ್ ಸಾಮ್ರಾಜ್ಯವೆಂಬುದು ಅವರ ಪಾಲಿಗೆ ಒಂದು ಹೆಮ್ಮೆಯ, ಪ್ರತಿಷ್ಠೆ ವಿಷಯವಾಗಿತ್ತು. ಯಾರು ವಸಾಹತುಗಳಾಗಿ ಮಾರ್ಪಟ್ಟ ಜಾಗಗಳಲ್ಲಿ ನೆಲೆನಿಂತರೋ, ಅವರ ಜೀವನಮಟ್ಟದಲ್ಲಿ ಸುಧಾರಣೆಯಾಯಿತು. ವಸಾಹತೀಕರಣದಿಂದ ಭಾರತೀಯರೂ ನಾಗರಿಕರಾದರು; ಅದರಿಂದ ಭಾರತೀಯರು ಇಂಗ್ಲಿಷ್ ಭಾಷೆ ಕಲಿತರು; ಕ್ರಿಕೆಟ್ ಆಟ ಕಲಿತರು; ಮಲೆನಾಡಿನ ಭಾಗಗಳಲ್ಲಿ ಕಾಫಿ ತೋಟಗಳನ್ನು ಹೇಗೆ ಮಾಡುವುದೆಂದು ಕಲಿತರು; ಸರಿಯಾದ ನಡವಳಿಕೆ ಹಾಗೂ ವರ್ತನೆಗಳನ್ನು ಕಲಿತರು ಎನ್ನುವುದು ಅವರ ವಾದ. ಜಲಿಯನ್‌ವಾಲಾಬಾಗ್ ದುರಂತ ಒಂದು ಪ್ರತ್ಯೇಕವಾಗಿ ಪರಿಗಣಿಸಬಹುದಾದ ದೌರ್ಜನ್ಯ. 190 ವರ್ಷಗಳ ಆಡಳಿತಾವಧಿಯಲ್ಲಿ ಬ್ರಿಟಿಷರಿಂದ ಭಾರತಕ್ಕೆ ದೊರೆತ ಕೊಡುಗೆಗಳು ಹಾಗೂ ಸನ್ನಡತೆಗಳನ್ನು ಜಲಿಯನ್‌ವಾಲಾಬಾಗ್ ಘಟನೆಯೊಂದಿಗೆ ತೂಗಿ ನೋಡಬೇಕು ಎಂದು ಬ್ರಿಟಿಷರು ವಾದಿಸಬಹುದೇನೋ ನಿಜ. ಇನ್ನು ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ಮೇಲೆ ಭಾರತವನ್ನು ಆಳಲಿದ್ದ ಭಾರತೀಯರ ಬಗ್ಗೆ ವಿನ್‌ಸ್ಟನ್ ಚರ್ಚಿಲ್ ಹೇಳಿದ ಮಾತನ್ನು ಉಲ್ಲೇಖೀಸಬೇಕಾಗಿಯೇ ಇಲ್ಲ. ಇನ್ನು, 1890ರ ದಶಕದಲ್ಲಿ ಚರ್ಚಿಲ್ ಬೆಂಗಳೂರಿನಲ್ಲಿ ವಾಸವಾಗಿದ್ದ ಬಂಗಲೆ ಹಾಗೂ ನಗರದ ಕ್ಲಬ್ಬೊಂದಕ್ಕೆ ಅವರು ಕೊಡಬೇಕಿದ್ದ ಹಣದ ಮೊತ್ತದ ಬಗ್ಗೆ ಸಂಶೋಧನೆ ನಡೆಸಲು ಮುಂದಾಗಿರುವ ಕೆಲ ಬೆಂಗಳೂರು ಕೇಂದ್ರಿತ ಇತಿಹಾಸಕಾರರ ನಡೆ ಕೇವಲ ಮೂರ್ಖತನದ್ದು ಎಂದೂ ಹೇಳುವ ಅಗತ್ಯವಿಲ್ಲ! ಅಂದಿನ ಬೆಂಗಳೂರಿಗರ ಬಗೆಗೆ ಮಾತ್ರವಲ್ಲ ಇಡೀ ಭಾರತದ ಜನರ ಬಗ್ಗೆ ಚರ್ಚಿಲ್‌ಗೆ ಅಗೌರವದ ಭಾವವಿತ್ತು.
ಇಲ್ಲೇ ಇನ್ನೊಂದು ಮಾತನ್ನೂ ಹೇಳಬೇಕು – 1997ರ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ನ ರಾಣಿ ಎಲಿಜಬೆತ್ ಅವರು ತಮ್ಮ ಪತಿ, ಎಡಿನ್‌ಬರ್ಗ್‌ನ ಡ್ನೂಕ್ ಜೊತೆಗೆ ಭಾರತಕ್ಕೆ ಬಂದು ಜಲಿಯನ್‌ವಾಲಾಬಾಗ್‌ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಹತ್ಯಾಕಾಂಡದ ಬಗ್ಗೆ ತಮ್ಮ ವಿಷಾದ ವ್ಯಕ್ತಪಡಿಸಿದ್ದರೇ ಹೊರತು ಕ್ಷಮೆ ಯಾಚಿಸಿರಲಿಲ್ಲ. ಅಲ್ಲಿರುವ ಸ್ಮಾರಕದ ಮೇಲೆ ಪುಷ್ಪಗುತ್ಛ ಇರಿಸಿದ್ದ ಆಕೆ, ಅಂದು ನಡೆದ ಹತ್ಯಾಕಾಂಡ ನಮ್ಮ ಭೂತಕಾಲದ ಒಂದು ಸಂಕೀರ್ಣ ಅಧ್ಯಾಯ ಎಂದು ಬಣ್ಣಿಸಿದ್ದರು.
ಆದರೂ ಅಂದು ಬ್ರಿಗೇಡಿಯರ್ ಜನರಲ್ ಡಾಯರ್ ಹೊರಡಿಸಿದ್ದ ಆದೇಶದನ್ವಯ ನಡೆದ ಗುಂಡೆಸೆತದ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಕುರಿತ ಅಂದಾಜು ಒಂದು ಉತ್ಪ್ರೇಕ್ಷೆಯಷ್ಟೆ ಎಂದು ರಾಜಕುಮಾರ ಫಿಲಿಪ್ ಹೇಳಿದ್ದರು. ಫಿಲಿಪ್ ಬ್ರಿಟಿಶ್ ನೌಕಾ ಪಡೆಯಲ್ಲಿದ್ದಾಗ ಅವರೊಂದಿಗೆ ಸೇವೆ ಸಲ್ಲಿಸಿದ್ದ ಡಾಯರ್ ಪುತ್ರನೊಂದಿಗಿನ ಮಾತುಕತೆಯ ಫಲವಾಗಿ ಫಿಲಿಪ್ ರೂಪಿಸಿಕೊಂಡಿದ್ದ ಅಭಿಪ್ರಾಯ ಇದು.
ಮಾಜಿ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರಾನ್ ಅವರೂ 2013ರಲ್ಲಿ ಜಲಿಯನ್‌ವಾಲಾಭಾಗ್‌ಗೆ ಭೇಟಿ ನೀಡಿದ್ದರು; ಅವರು ಕೂಡ ಕ್ಷಮಾಪಣೆ ಕೇಳಿರಲಿಲ್ಲ. ಈ ಘಟನೆ ಬ್ರಿಟಿಷ್ ಚರಿತ್ರೆಯ ಒಂದು ನಾಚಿಕೆಗೇಡಿನ ಪ್ರಸಂಗ ಎಂದಷ್ಟೇ ಹೇಳಿದ್ದರು.
ಆದರೆ ವಿನ್‌ಸ್ಟನ್ ಚರ್ಚಿಲ್ ಅವರನ್ನು ಒಂದು ವಿಷಯದಲ್ಲಿ ಅಭಿನಂದಿಸಬೇಕಾಗುತ್ತದೆ. ಡಾಯರ್‌ನನ್ನು ಬ್ರಿಟಿಷ್ ಸೇನೆ ಬಲವಂತವಾಗಿ ನಿವೃತ್ತಿಗೊಳಿಸಿತು. ಹಾಗೆ ಒತ್ತಾಯದ ನಿವೃತ್ತಿ ಸಾಧ್ಯವಾದುದಕ್ಕೆ ಚರ್ಚಿಲ್ ಅವರೇ ಕಾರಣ. ಸಂಸತ್ತಿನ ಕೆಳಮನೆಯಲ್ಲಿ ಈ ದುರಂತದ ಬಗ್ಗೆ ಹೇಳಿಕೆ ನೀಡುತ್ತ ಚರ್ಚಿಲ್, ಇದೊಂದು “ರಾಕ್ಷಸೀಯ’ ಘಟನೆ ಎಂದು ಬಣ್ಣಿಸಿದ್ದರು. ಜಲಿಯನ್‌ವಾಲಾಬಾಗ್ ಮೈದಾನದಲ್ಲಿ ಅಂದು ಜಮಾಯಿಸಿದ್ದ ಜನರು ನಿಶ್ಶಸ್ತ್ರರಾಗಿದ್ದರು ಎಂಬ ಅಂಶದತ್ತ ಅವರು ಬೆಟ್ಟು ಮಾಡಿದ್ದರು. “ಈ ಹತ್ಯಾಕಾಂಡದ ಘಟನೆ ನಮ್ಮ ಇಡೀ ಚರಿತ್ರೆಯಲ್ಲೇ ಅತಿ ಕ್ರೂರವಾದ ಕೃತ್ಯ’ ಎಂದು ಬ್ರಿಟಿಷ್ ರಾಜ ನೀತಿಜ್ಞ, ಲಾರ್ಡ್ ಆಸ್ಕಿತ್ ಬಣ್ಣಿಸಿದ್ದರು.
ಅಂದಿನ ಬ್ರಿಟಿಷ್ ಸರಕಾರ ಈ ಹತ್ಯಾಕಾಂಡದ ತನಿಖೆ ಕೈಗೊಂಡಿತ್ತು. ಇದಕ್ಕಾಗಿ ಹಂಟರ್ (ತನಿಖಾ) ಆಯೋಗವನ್ನು ರೂಪಿಸಿತ್ತು. ಇದರಲ್ಲಿ ಮೂವರು ಭಾರತೀಯ ಸದಸ್ಯರಿದ್ದರು. ಸರ್ ಚಿಮಣ್‌ಲಾಲ್ ಸೇತಲ್ವಾಡ್ (ಆಗಿನ ಬಾಂಬೆ ವಿ.ವಿ.ಯ ಉಪಕುಲಪತಿ ಹಾಗೂ ಖ್ಯಾತ ವಕೀಲರು), ಪಂಡಿತ್ ಜಗತ್‌ನಾರಾಯಣ್ (ಪಂಜಾಬಿನ ನ್ಯಾಯವಾದಿ) ಹಾಗೂ ಸಾಹಿಬ್‌ಜಾದ್ ಸುಲ್ತಾನ್ ಅಹ್ಮದ್ (ಗ್ವಾಲಿಯರ್ ಮೂಲದ ವಕೀಲರು).
ಎಂಟು ಮಂದಿ ಸದಸ್ಯರ ಈ ಆಯೋಗ ಜನಾಂಗೀಯ ತಾರತಮ್ಯ ಧೋರಣೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಹೊಂದಿದ್ದುದು ನಿಜವಾದರೂ, ಆಯೋಗ ಯದ್ವಾತದ್ವಾ ಗುಂಡು ಹಾರಿಸುವಂತೆ ಆದೇಶಿಸಿದ್ದ ಜ| ಡಾಯರ್‌ನ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸುವ ವರದಿಯನ್ನು ಸಲ್ಲಿಸಿತ್ತು. ಆಯೋಗದಲ್ಲಿದ್ದ ಭಾರತೀಯ ಸದಸ್ಯರೂ ಪ್ರತ್ಯೇಕ ವರದಿಯೊಂದನ್ನು ಸಲ್ಲಿಸಿದ್ದರಾದರೂ ಅದರಲ್ಲಿನ ಅಭಿಪ್ರಾಯ ಪೂರ್ಣ ಆಯೋಗದ ನಿಲುವಿಗಿಂತ ಭಿನ್ನವಾಗಿರಲಿಲ್ಲ. ಹಂಟರ್ ಆಯೋಗದ ವಿಚಾರಣಾ ಪ್ರಕ್ರಿಯೆಯ ಒಂದು ಗಣನೀಯ ವಿಶೇಷತೆಯೆಂದರೆ ಜ| ಡಾಯರ್‌ನ ಪಾಟೀ ಸವಾಲು ನಡೆಸಿದವರು ಸರ್ ಚಿಮಣ್‌ಲಾಲ್ ಸೇತಲ್ವಾಡ್. ಪಂಜಾಬಿನ ಆ ಕಟುಕ ಸರ್ ಚಿಮಣ್‌ಲಾಲ್ ಅವರ ಸರಣಿ ಪ್ರಶ್ನೆಗುತ್ತರಿಸುತ್ತ, “ಆ ಮೈದಾನಕ್ಕೆ ಸಾಗುವ ಮಾರ್ಗ ಇನ್ನಷ್ಟು ಅಗಲವಾಗಿ ಇದ್ದಿದ್ದರೆ, ಶಸ್ತ್ರಾಸ್ತ್ರ ತುಂಬಿದ ವಾಹನಗಳನ್ನು ಬಳಸಿಕೊಳ್ಳುತ್ತಿದ್ದೆ’ ಎಂಬ ದಾಷ್ಟದ ಉತ್ತರ ನೀಡಿದ್ದ. ಈ ವಿಚಾರಣೆ ಹತ್ಯಾಕಾಂಡ ನಡೆಸುವ ದಿನದ ಕೆಲ ದಿನಗಳ ಮುಂಚೆಯಷ್ಟೆ ಸರ್ ಚಿಮಣ್‌ಲಾಲ್ ಅವರಿಗೆ ಬ್ರಿಟಿಷ್ ಸರಕಾರ ನೈಟ್‌ಹುಡ್ ನೀಡಿ ಪುರಸ್ಕರಿಸಿತ್ತು; ಅವರ ಪುತ್ರ ಎಂ.ಸಿ. ಸೇತಲ್ವಾಡ್, ಭಾರತದ ಪ್ರಪ್ರಥಮ ಅಟಾರ್ನಿ ಜನರಲ್ ಆಗಿ ಕೆಲಸ ಮಾಡಿದ್ದರು.