Advertisement

ಹೆಬಿಕ್‌ ಸ್ಮಾರಕ ಚರ್ಚ್‌ನಲ್ಲಿ ಶಿಲುಬೆ ಸಂಜೆ

03:12 PM Apr 15, 2017 | Team Udayavani |

ಧಾರವಾಡ: ಇಂದಿನ ಹಿಂಸಾ ಪ್ರಧಾನ ಸಮಾಜದಲ್ಲಿ ಎಲ್ಲರನ್ನು ಪ್ರೀತಿಸು ಎನ್ನುವ ಕ್ರಿಸ್ತನ ಸಂದೇಶವನ್ನು ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಿರಿಯ ಕವಿ  ಡಾ| ಚೆನ್ನವೀರ ಕಣವಿ ಹೇಳಿದರು. 

Advertisement

ಇಲ್ಲಿನ ಹೆಬಿಕ್‌ ಸ್ಮಾರಕ ಚರ್ಚ್‌ನಲ್ಲಿ ಶುಭ ಶುಕ್ರವಾರ ನಿಮಿತ್ತ ಹಮ್ಮಿಕೊಂಡಿದ್ದ “ಶಿಲುಬೆ ಸಂಜೆ’ ಕಾರ್ಯಕ್ರಮದಲ್ಲಿ “ಕವಿ ಕಂಡ ಕ್ರೂಜೆ’ ಕುರಿತು ಅವರು ಮಾತನಾಡಿದರು. ಪ್ರೀತಿ ಬದುಕಿನ ಭಾಗ ಮತ್ತು ಬದುಕಿನ ರೀತಿಯಾಗಬೇಕು ಎನ್ನುವುದು ಏಸು ಕ್ರಿಸ್ತ ಇಡೀ ಜನ ಸಮುದಾಯಕ್ಕೆ ನೀಡಿದ ಸಂದೇಶ.

ತನ್ನನ್ನು ಹಿಂಸಿಸಿದವರನ್ನು ಕ್ಷಮಿಸು. ಅವರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವ ಕಲ್ಪನೆ ಇಲ್ಲ  ಎನ್ನುವ ಕ್ರಿಸ್ತನ ಉದಾರತೆ ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. ಕನ್ನಡ ಸಾಹಿತ್ಯದ ವಿವಿಧ ನೆಲೆಗಳಲ್ಲಿ ಕ್ರೈಸ್ತ ಸಂವೇದನೆಗಳು ರೂಪಿತವಾಗಿದ್ದು, ಅವು ನೀಡುವ ಅನುಭವಗಳು ಗಾಢವಾಗಿ ತಟ್ಟುತ್ತವೆ.

ಕ್ರಿಸ್ತನ ಕಾವ್ಯಧರ್ಮ ಮತ್ತು ತತ್ವಜ್ಞಾನದ ಕುರಿತು ಕನ್ನಡ ಸಾಹಿತ್ಯದಲ್ಲಿ ಹಲವು ಕೃತಿಗಳು ರಚಿತವಾಗಿವೆ. ಕಿಟೆಲ್‌,  ಮೊಗ್ಲಿಂಗ್‌ ಸಾಹಿತ್ಯದಿಂದ ಹಿಡಿದು ಇಂದಿನ ಆಧುನಿಕ ಸಾಹಿತ್ಯದಲ್ಲಿ ಕ್ರಿಸ್ತನ ಮೌಲಿಕ ಸಂದೇಶಗಳನ್ನು ಜನಮಾನಸಕ್ಕೆ ಮುಟ್ಟಿಸುವ ಪ್ರಯತ್ನಗಳು ಹಲವು ವಿಧದಲ್ಲಿ ಸಾಗಿದೆ ಎಂದರು. 

18ನೇ ಶತಮಾನದ ಪೂರ್ವಾರ್ಧದಲ್ಲಿ ಕ್ರೈಸ್ತ ಮಿಶನರಿಗಳು ಭಾರತಕ್ಕೆ ಪ್ರವೇಶ ಮಾಡಿದ ಸಂದರ್ಭದಲ್ಲಿ ಅವರ ಮೂಲಕ ಕ್ರೈಸ್ತ ಧರ್ಮದ ಮೌಲಿಕ ವಿಚಾರಗಳು  ಕನ್ನಡ ಸಾಹಿತ್ಯದಲ್ಲಿ ಪ್ರವೇಶ ಪಡೆದುಕೊಂಡವು. ರೆವೆರಂಡ್‌ ಕಿಟೆಲ್‌ ಇಲ್ಲಿಗೆ ಬಂದು ಕನ್ನಡ ಕಲಿತು, ಭಾಮಿನಿದಿಯಲ್ಲಿ ಕಾವ್ಯ ರಚನೆ ಮಾಡಿದ್ದು ಅಚ್ಚರಿ ಹುಟ್ಟಿಸುವ ಸಂಗತಿ.  

Advertisement

ಅದಾದ ನಂತರ ಅನೇಕ ಕನ್ನಡದ ಕವಿಗಳು ಕ್ರಿಸ್ತನ ಹುಟ್ಟು, ಬದುಕು, ಚಿಂತನೆ ಮತ್ತು ಸಂದೇಶ ಕುರಿತು ಕಾವ್ಯದ ಮೂಲಕ ಕಟ್ಟಿಕೊಡುವ ಅನುಭವಗಳು ಸಾಹಿತ್ಯದ ಬೆಳವಣಿಗೆಗೂ ಪೂರಕವಾಗಿದ್ದವು ಎಂದು ಹೇಳಿದರು. ರೆವೆರಂಡ್‌ ರವಿ ಕುಮಾರ್‌ ನಿರಂಜನ, ಡಾ| ಜಿ.ಎಂ. ಹೆಗಡೆ, ಕವಿ ವಿ.ಸಿ. ಐರಸಂಗ, ಡಾ| ಎಸ್‌.ಆರ್‌. ಗುಂಜಾಳ ಇದ್ದರು. ನಂತರ ಹೆಬಿಕ್‌ ಸಭೆಯ ಕಲಾವಿದರು ಕ್ರಿಸ್ತನ ಸಂದೇಶ ಸಾರುವ ಗೀತೆಗಳನ್ನು ಪ್ರಸ್ತುತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next