Advertisement

Bengaluru: ಚರ್ಚ್‌ ಸ್ಟ್ರೀಟ್‌ ನಲ್ಲಿದ್ದ 50 ಅನಧಿಕೃತ ಅಂಗಡಿ ತೆರವು

12:30 PM Oct 05, 2024 | Team Udayavani |

ಬೆಂಗಳೂರು: ನಗರದ ಬಿಬಿಎಂಪಿ ಪೂರ್ವ ವಲಯ ವ್ಯಾಪ್ತಿಗೆ ಒಳಪಡುವ ಚರ್ಚ್‌ ಸ್ಟ್ರೀಟ್‌ ರಸ್ತೆಯ ಪಾದಚಾರಿ ಮಾರ್ಗದ ಒತ್ತುವರಿಯನ್ನು ವಲಯ ಆಯುಕ್ತರಾದ ಸ್ನೇಹಲ್‌ ಅವರ ನೇತೃತ್ವದಲ್ಲಿ ಶುಕ್ರವಾರ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು.

Advertisement

ಇಲ್ಲಿನ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 50 ಅಂಗಡಿ, ಮಳಿಗೆಗಳಿದ್ದವು. ಇವುಗಳನ್ನು ಪೊಲೀಸ್‌ ಸಿಬ್ಬಂದಿ, ಪಾಲಿಕೆ ಅಧಿಕಾರಿಗಳು ಹಾಗೂ ಮಾರ್ಷಲ್‌ ಗಳ ಸಹಯೋಗದಲ್ಲಿ ತೆರವುಗೊಳಿಸಿ ಸಾಮಗ್ರಿಗಳನ್ನು ವಶಕ್ಕೆ ಪಡೆದರು. ಅವುಗಳನ್ನು 20ಕ್ಕೂ ಹೆಚ್ಚು ಗ್ಯಾಂಗ್‌ ಮ್ಯಾನ್‌ಗಳು 2 ಟಿಪ್ಪರ್‌ ಹಾಗೂ 6 ಟ್ರ್ಯಾಕರ್‌ಗಳ ಮೂಲಕ ಕೊಂಡೊಯ್ದರು.

ಬಳಿಕ ಆಯುಕ್ತೆ ಸ್ನೇಹಲ್‌ ಮಾತನಾಡಿ, ಪಾದಾಚಾರಿ ಮಾರ್ಗ ಅತಿಕ್ರಮಿಸದಂತೆ ಈಗಾಗಲೇ ಅಂಗಡಿ, ಮಳಿಗೆಗಳ ಮಾಲಿಕರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ನಿಯಮ ಮೀರಿ ಒತ್ತುವರಿ ಮಾಡಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಆಹಾರ ತಯಾರಿಸುವುದರಿಂದ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೇ ತೆರೆದ ಜಾಗದಲ್ಲಿ ಸಿಲಿಂಡರ್‌ ಬಳಕೆಯಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಪಾದಚಾರಿ ಮಾರ್ಗ ಅತಿಕ್ರಮಣದಿಂದ ನಾಗರಿಕರು ಓಡಾಟ ಹಾಗೂ ವಾಹನಗಳ ಸುಗಮ ಸಂಚಾರ ಅಡಚಣೆಯಾಗಿ ಅಪಘಾತಗಳಿಗೆ ಕಾರಣವಾಗುವ ಸಂಭವ ಇತ್ತು. ಆ ಹಿನ್ನೆಲೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಮತ್ತೆ ಪಾದಚಾರಿ ಮಾರ್ಗ ಒತ್ತುವರಿ ಮಾಡದಂತೆ ಎಲ್ಲ ಮಳಿಗೆಯ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಈ ವೇಳೆ ವಲಯ ಜಂಟಿ ಆಯುಕ್ತರಾದ ಸರೋಜಾ, ಕಾರ್ಯಪಾಲಕ ಎಂಜಿನಿಯರ್‌ ಮುನಿರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next