Advertisement

ಜನಮಂಗಲ ಕಾರ್ಯ ಮಸ್ತಕಾಭಿಷೇಕ ಸ್ಮರಣೀಯ

01:00 AM Feb 06, 2019 | Harsha Rao |

ಬೆಳ್ತಂಗಡಿ: ಧಾರ್ಮಿಕ ಹಿನ್ನೆಲೆಯ ಜತೆಗೆ ಸೇವಾ ಕಾರ್ಯಗಳ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ಕ್ಷೇತ್ರ ಧರ್ಮಸ್ಥಳ. ಇಲ್ಲಿರುವ ಬಾಹುಬಲಿಗೆ ಇದುವರೆಗೆ ಮೂರು ಮಹಾಮಜ್ಜನಗಳಾಗಿವೆ. ಈಗಾಗಲೇ ಇರುವ ಜನೂಪಯೋಗಿ ಸೇವಾ ಕಾರ್ಯಗಳ ಜತೆಗೆ ಪ್ರತಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲೂ ಜನಮಂಗಲ ಯೋಜನೆಗಳನ್ನು ಪ್ರಕಟಿಸುವ ಮೂಲಕ ಸಂದರ್ಭವನ್ನು ಚಿರಸ್ಥಾಯಿಗೊಳಿ ಸುವ ಪರಂಪರೆ ಶ್ರೀಕ್ಷೇತ್ರದ್ದು.

Advertisement

1982ರಲ್ಲಿ ನಡೆದ ಬಾಹುಬಲಿ ಪ್ರತಿಷ್ಠಾಪನೆ ಹಾಗೂ ಪ್ರಥಮ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರಕಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರುಡ್‌ಸೆಟ್‌ ಸಂಸ್ಥೆಗಳು ಲಕ್ಷಾಂತರ ಮಂದಿಗೆ ಸ್ವಾಭಿಮಾನದ ಬದುಕನ್ನು ಒದಗಿಸುವ ಜತೆಗೆ ದೇಶದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದೆ.

ಯೋಜನೆ ಹಾಗೂ ರುಡ್‌ಸೆಟ್‌ ಸಂಸ್ಥೆಗಳು ಜನಸೇವೆಯ ವಿಚಾರದಲ್ಲಿ ಧರ್ಮಸ್ಥಳಕ್ಕೆ ಬಲು ದೊಡ್ಡ ಹೆಸರನ್ನು ತಂದುಕೊಟ್ಟಿವೆ, ಪ್ರಥಮ ಮಸ್ತಕಾಭಿಷೇಕವನ್ನು ಚಿರಸ್ಮರಣೀಯವಾಗಿಸಿವೆ. ಎರಡೂ ಯೋಜನೆಗಳು ಪ್ರಸ್ತುತ ಪರಿಪೂರ್ಣ ಹಂತ ತಲುಪಿವೆ. 

1991ರಲ್ಲಿ ಆರಂಭವಾದ ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ 1995ರ ದ್ವಿತೀಯ ಮಹಾಮಸ್ತಕಾಭಿಷೇಕದ ಸಂದರ್ಭ ವಿಸ್ತರಣೆ ಲಭಿಸಿತು. ಜತೆಗೆ ಗ್ರಾ. ಯೋಜನೆ, ರುಡ್‌ಸೆಟ್‌ನ ವಿಸ್ತರಣೆಯೂ ನಡೆಯಿತು. 2007ರ ತೃತೀಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಇವೆಲ್ಲವುಗಳ ವಿಸ್ತರಣೆಯ ಜತೆಗೆ ಗ್ರಾ. ಯೋಜನೆ-ರುಡ್‌ಸೆಟ್‌ ಸಂಸ್ಥೆಗಳ ಬೆಳ್ಳಿಹಬ್ಬಕ್ಕೂ ಚಿಂತನೆ ನಡೆಸಲಾಯಿತು.

ಕೆರೆ ಸಂಜೀವಿನಿ ಯೋಜನೆ
ಈ ಬಾರಿ ಜನಮಂಗಲ ಕಾರ್ಯವಾಗಿ ಕೆರೆ ಸಂಜೀವಿನಿ ಯೋಜನೆಯ ಆರಂಭಕ್ಕೆ ಡಾ| ವೀರೇಂದ್ರ ಹೆಗ್ಗಡೆಯವರು ಚಿಂತನೆ ನಡೆಸಿದ್ದಾರೆ. ರಾಜ್ಯದ 200 ಕೆರೆಗಳ ಪುನಶ್ಚೇತನದ ಯೋಜನೆಯೇ ಕೆರೆ ಸಂಜೀವಿನಿ. ರಾಜ್ಯ ಸರಕಾರದ ಸಹಯೋಗದೊಂದಿಗೆ 100 ಕೆರೆಗಳ ಅಭಿವೃದ್ಧಿ, ಗ್ರಾ. ಯೋಜನೆ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಮತ್ತೆ 100 ಕೆರೆಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಡಾ| ಹೆಗ್ಗಡೆ ಅವರು ಈಗಾಗಲೇ ತಿಳಿಸಿದ್ದಾರೆ. ಇದಕ್ಕಾಗಿ ಸಮಿತಿಗಳ ರಚನೆ ಪ್ರಗತಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next