ಮುದಗಲ್ಲ: ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗಳು ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಕೇವಲ ದಾಖಲೆಗಳಿಗೆ ಮಾತ್ರ ಮುಖ್ಯಾಧಿಕಾರಿಗಳು ಎನ್ನುವಂತಾಗಿದೆ ಎಂದು ಕೆಲವು ಸದಸ್ಯರು ಆಕ್ಷೇಪಿಸಿದರು.
ಇದರ ಜತೆಗೆ ಕಾರ್ಯವೈಖರಿ ಸುಧಾರಿಸಿಕೊಳ್ಳದಿದ್ದರೆ ಮುಂದಿನ ಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಡಿ.ಎಸ್.ಹೂಲಗೇರಿ ಮುಖ್ಯಾಧಿಕಾರಿಗಳನ್ನು ಎಚ್ಚರಿಸಿದರು.
ಪುರಸಭೆ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷೆ ಅಮೀನಾಬೇಗಂ ಮಹಿಬೂಬ ಬಾರಿಗಿಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಮರಿಲಿಂಗಪ್ಪ ಸ್ವಾಗತಿಸಿ, ವಿಷಯಗಳನ್ನು ವ್ಯವಸ್ಥಾಪಕ ಮಲ್ಲಿಕಾರ್ಜುನ ಮಂಡಿಸಿದರು.
ಹಿಂದಿನ ನಡವಳಿಕೆ ಹಾಗೂ ಲೆಕ್ಕಪತ್ರಕ್ಕೆ ಅನುಮೋದನೆಗೆ ವಿಷಯ ಓದಿರುವುದನ್ನು ಸದಸ್ಯರಾದ ಎಸ್. ಆರ್. ರಸೂಲ ಮತ್ತು ಗುಂಡಪ್ಪ ಗಂಗಾವತಿ ಆಕ್ಷೇಪಿಸಿದರು. ಬರೀ ಜಮಾ-ಖರ್ಚು ಮಾತ್ರ ಹೇಳುತ್ತಿದ್ದೀರಿ. ಯಾವುದಕ್ಕೆ ಎಷ್ಟು ಖರ್ಚು ಮಾಡಿರುವದು ಎನ್ನುವ ವಿವರವಾದ ಮಾಹಿತಿ ನೀಡಿಲ್ಲ. ಹಿಂದಿನ ಸಭೆಯ ನಡವಳಿಕೆಗಳ ಪಟ್ಟಿಯನ್ನು ನೀಡುವದಿಲ್ಲ. ಇದೇನು ಸಾಮಾನ್ಯ ಸಭೆಯೋ? ನೀವು ಹೇಳುವದನ್ನು ಕೇಳಿ ಹೊರಟು ಹೋಗುವುದೋ? ಎಂದು ಆಕ್ಷೇಪಿಸಿದರು. ಆಗ ಶಾಸಕ ಹೂಲಗೇರಿಯವರು ಕೂಡ ಅಸಮಾಧಾನ ವ್ಯಕ್ತಪಡಿಸಿ, ನೀವು ಸದಸ್ಯರಿಗೆ ಮಾಹಿತಿ ಕೊಡದೇ ಇನ್ಯಾರಿಗೆ ಮಾಹಿತಿ ಕೊಡುತ್ತೀರಿ ಎಂದು ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ‘
ಕೋಟಿ-ಕೋಟಿ ಹಣವಿದ್ದರೂ ಕೂಡ ಮುಖ್ಯಾಧಿಕಾರಿಗಳು ಪೌರ ಕಾರ್ಮಿಕರಿಗೆ ವೇತನ ಕೊಡದೇ ಇರುವುದನ್ನು ಪ್ರಶ್ನಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸದಸ್ಯ ಗುಂಡಪ್ಪ ಗಂಗಾವತಿ, ಕಾರ್ಮಿಕರನ್ನು ನಿರ್ಲಕ್ಷಿಸಬೇಡಿ. ಅವರು ಪಟ್ಟಣದ ಸ್ವತ್ಛತೆ ಮಾಡುತ್ತಾರೆ. ಕುಡಿಯುವ ನೀರಿನ ಕಾರ್ಮಿಕರಿಗೂ ವೇತನ ನೀಡದೇ ನಿರ್ಲಕ್ಷಿಸಬೇಡಿ ಎಂದರು.
ಕಾರ್ಮಿಕರಿಗೆ ಬೆಳಗಿನ ಉಪಾಹಾರವನ್ನು ಕಳೆದ ತಿಂಗಳಿಂದ ತಡೆಹಿಡಿಯಲಾಗಿದೆ. ಕಾರ್ಮಿಕರು ಮುಂಜಾನೆ ಪಟ್ಟಣದ ಸ್ವತ್ಛತೆಗೆ ಆಗಮಿಸುತ್ತಿದ್ದರೂ ಮುಖ್ಯಾಧಿಕಾರಿಗಳು ನಿರ್ಲಕ್ಷ ಭಾವನೆ ತಾಳಿದ್ದಾರೆ ಎಂದು ಸದಸ್ಯ ಗುಂಡಪ್ಪ ಗಂಗಾವತಿ ಆರೋಪಿಸಿದರು.
ಇದಕ್ಕೆ ಕೆಲ ಸದಸ್ಯರು ಸಹಮತ ವ್ಯಕ್ತಪಡಿಸಿ, ಉಪಾಹಾರದ ಟೆಂಡರ್ ಯಾರಿಗೆ ಕೊಟ್ಟಿದ್ದೀರಿ ಎಂದು ಕೇಳಿದರು. ಶಾಸಕರು ಮಧ್ಯಪ್ರವೇಶಿಸಿ ಮುಖ್ಯಾಧಿಕಾರಿಗಳನ್ನು ಕೇಳಿದರೆ ಉಪಾಹಾರ ಮಾಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ಸಮಜಾಯಿಸಿದರು.
ಪಟ್ಟಣದಲ್ಲಿಯ ರಸ್ತೆ ಅಭಿವೃದ್ಧಿಗಾಗಿ ವ್ಯಕ್ತಿಪ್ರತಿಷ್ಠೆ ಕೈಬಿಟ್ಟು ಅಭಿವೃದ್ಧಿಗೆ ಸಹಕರಿಸಿ, ಅರಣ್ಯ ಇಲಾಖೆಯಿಂದ ಮರಗಳ ತೆರವಿಗೆ ಪರವಾನಗಿ ಬಂದಿದೆ. ಎಲ್ಲ ಸದಸ್ಯರು ಸಹಕರಿಸಬೇಕೆಂದು ಶಾಸಕರು ಸದಸ್ಯರೆಲ್ಲರಿಗೂ ಮನವಿ ಮಾಡಿದರು.