ವಾಡಿ: ಗ್ರಾಮದ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸುವ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳ ಚರ್ಚೆ ನೆಲದ ಮೇಲೆಯೇ ನಡೆಯುತ್ತಿದ್ದು, ಕಚೇರಿ ಪೀಠೊಪಕರಣಕ್ಕಿಲ್ಲದ ಅನುದಾನ ಗ್ರಾಮಾಭಿವೃದ್ಧಿಗೆ ಇರುತ್ತದೆಯೇ ಎನ್ನುವ ಅನುಮಾನದ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ. ಹಳಕರ್ಟಿ ಗ್ರಾಪಂನಲ್ಲಿ ಚುನಾಯಿತ ಸದಸ್ಯರ ವಿಶೇಷ ಸಭೆಗಳು ಕಳೆದ ಹಲವು ತಿಂಗಳಿಂದ ನೆಲದ ಮೇಲೆಯೇ ನಡೆಯುತ್ತಿದೆ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸಾಮಾನ್ಯ ಸದಸ್ಯರ ಗುಂಪಿನಲ್ಲಿ ಕುಳಿತು ವಿಚಾರ ಮಂಡಿಸುತ್ತಾರೆ. ಸದಸ್ಯರ ನಡುವೆ ಕುಳಿತು ಸರಕಾರದ ಯೋಜನೆಗಳ ಬಗ್ಗೆ ಮಾತನಾಡುವ ಅಭಿವೃದ್ಧಿ ಅಧಿಕಾರಿ ಕಾವೇರಿ ರಾಠೊಡ, ಅಭಿವೃದ್ಧಿ ಸಭೆಯನ್ನು ಗುಂಪು ಚರ್ಚೆಯನ್ನಾಗಿ ಮಾರ್ಪಡಿಸುವ ಮೂಲಕ ಸಭೆಯ ಅಶಿಸ್ತಿಗೆ ಕಾರಣವಾಗಿದ್ದಾರೆ ಎಂದು ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳಕರ್ಟಿ ಗ್ರಾಪಂನಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಸಭೆಯಲ್ಲಿ 14ನೇ ಹಣಕಾಸಿನಲ್ಲಿ ಬಿಡುಗಡೆಯಾದ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಲು ಹಾಗೂ ಮನೆಗಳ ಹಂಚಿಕೆ ಕುರಿತ ಚರ್ಚೆ ನೆಲದ ಮೇಲೆಯೇ ನಡೆಯಿತು. ಸದಸ್ಯರಾದ ಜಗದೀಶ ಸಿಂಧೆ,
ಮಲ್ಲಿಕಾರ್ಜುನ ಹಾಗೂ ಇಮಿಯಾಜ್ ಪಟೇಲ ಮಧ್ಯೆ ಅನುದಾನ ಹಂಚಿಕೆಗಾಗಿ ಪರಸ್ಪರ ವಾಗ್ವಾದ ನಡೆಸಿದರೆ, ಅಧ್ಯಕ್ಷೆ ಚೆನ್ನಮ್ಮ ಉಪ್ಪಿನ ಹಾಗೂ ಇತರ ಮಹಿಳಾ ಸದಸ್ಯೆಯರು ಮೌನಕ್ಕೆ ಶರಣಾಗಿದ್ದರು. ವಯೋವೃದ್ಧ ಸದಸ್ಯರು ತುಂಬಾ ಸಮಯ ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿರುವುದು ಕಂಡುಬಂತ.