Advertisement

ಅಧಿಕಾರಿಗಳಿಗೆ ಬೆವರಿಳಿಸಿದ ತಾಪಂ ಸದಸ್ಯರು

09:52 PM Aug 18, 2019 | Lakshmi GovindaRaj |

ಹುಣಸೂರು: ಏನ್ರೀ ಯಾವ್‌ ಲೆಕ್ಕ ತಂದಿದ್ದೀರಾ, ಫೀಲ್ಡ್‌ಗೋಗಿ ಮಾಹಿತಿ ತಂದಿದ್ದೀರಾ ಅಥವಾ ಆಫೀಸ್‌ನಲ್ಲೇ ಕೂತ್ಕೊಂಡು ಬರ್ಕೋಂಡ್‌ ಬಂದಿದ್ದೀರಾ.. ನಿಮ್ಮತ್ರ ಮಾಹಿತಿನೇ ಇಲ್ವಲ್ಲ ಸಾರ್‌, ನೀವು ಸರಿಯಾಗಿ ಮಾಹಿತಿ ಕೊಡದಿದ್ದರೆ ನಾವು ಯಾರನ್ನ ಕೇಳ್ಬೇಕು.. ತೊಂದರೆಗೊಳಗಾದವರಿಗೆ ಹೇಗೆ ಪರಿಹಾರ ನೀಡಕ್ಕಾಗುತ್ತೆ, ನೀವೇ ಹೇಳಿ ನೋಡೋಣ..

Advertisement

ಇದು ಹುಣಸೂರು ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಪದ್ಮಮ್ಮರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ನೆರೆ ಹಾವಳಿ ಸಂಬಂಧ ತುರ್ತು ಸಭೆಯಲ್ಲಿ ಅಧ್ಯಕ್ಷರಾದಿಯಾಗಿ ಎಲ್ಲ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ತಾಲೂಕಿನಲ್ಲಿ ಸುಮಾರು 165ಎಕರೆಯಷ್ಟು ತೋಟದ ಬೆಳೆ ಹಾಳಾಗಿವೆ ಎನ್ನುತ್ತಿದ್ದಂತೆ, ಏನ್‌ ಸಾರ್‌ ನೀವ್‌ ಹೇಳ್ಳೋದು ಹನಗೋಡು ಹೋಬಳಿಯೊಂದರಲ್ಲೇ 500-600 ಎಕರೆ ತೋಟದ ಬೆಳೆ ನಾಶವಾಗಿದೆ.

ನೀವೇನ್‌ ಸರ್ವೆ ಮಾಡಿದ್ದೀರಾ, ಯಾರೋ ಬರ್ಕೊಟ್ಟಿದ್ದನ್‌ ಇಲ್ಲಿ ಓದುತ್ತಿದ್ದಾರೋ. ಯಾವ ಊರಿನಲ್ಲಿ ಎಷ್ಟು ?. ಯಾವ ಬೆಳೆ ಹಾಳಾಗಿದೆ. ಸ್ವಲ್ಪ ಲೆಕ್ಕ ಹೇಳಿ ನೋಡೋಣವೆಂದು ಅಧ್ಯಕ್ಷರು ಏರು ಧ್ವನಿಯಲ್ಲಿ ಕೇಳಿದರು. ಈ ವೇಳೆ ಸದಸ್ಯರಾದ ಪ್ರೇಮಕುಮಾರ್‌, ಶ್ರೀನಿವಾಸ್‌, ರೂಪಾ ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಕಟ್ಟನಾಯಕ, ಡಾ.ಪುಷ್ಪಾ ಎಲ್ಲರೂ ಒಮ್ಮೆಲೆ ಪ್ರಶ್ನೆಗಳ ಮೇಲೆ ಪ್ರಶ್ನೆಯ ಸುರಿಮಳೆಯನ್ನೇ ಸುರಿಸಿ ಸರಿಯಾಗಿ ಲೆಕ್ಕಕೊಡಿ, ಮಳೆ ನಿಂತು ನಾಲ್ಕು ದಿನ ಆಗಿದೆ, ಪ್ರವಾಹವೂ ಇಳಿಮುಖವಾಗಿದೆ.

ಯಾಕೆ ಲೆಕ್ಕ ಕೊಡಕ್ಕಾಗುತ್ತಿಲ್ಲ, ನೀವು ಹಳ್ಳಿಗಳಿಗೆ ಭೇಟಿ ನೀಡಿದ್ದರೆ ತಾನೆ ಲೆಕ್ಕಕೊಡೋದು. ಮಕ್ಕಿ ಕಾಮಕ್ಕಿ ಲೆಕ್ಕ ಬೇಡ ನಮಗೆ ಸರಿಯಾಗಿ ಮತ್ತೂಮ್ಮೆ ಸರ್ವೆ ಮಾಡಿ ದಾಖಲೆ ಕೊಡಬೇಕೆಂದು ಪಟ್ಟು ಹಿಡಿದ ವೇಳೆ, ತಾಪಂ ಇಒ ಗಿರೀಶ್‌ ಮತ್ತೆ ಪರಿಶೀಲಿಸಿ ಮತ್ತೂಮ್ಮೆ ಸರಿಯಾದ ವರದಿ ನೀಡಬೇಕೆಂದು ಆದೇಶಿಸಿದರು. ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಿ, ಹನಗೋಡು ಹೋಬಳಿಯ ಶಿಥಿಲಗೊಂಡಿದ್ದ ಕೇಂದ್ರಗಳನ್ನು ಅಕ್ಕಪಕ್ಕದ ಶಾಲೆ-ಮನೆಗಳಿಗೆ ತಾತ್ಕಾಲಿಕವಾಗಿ ವರ್ಗಾಯಿಸಿದ್ದೇವೆ. 10ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನೀರು ಜಿನುಗುತ್ತಿದ್ದು ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿಇಒ ನಾಗರಾಜ್‌ ನೆರೆ ಪೀಡಿತ ಪ್ರದೇಶಗಳ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಕಟ್ಟಡ ಸುಸ್ಥಿತಿ ಬಗ್ಗೆ ಖಾತ್ರಿ ನೀಡಿದ ನಂತರವಷ್ಟೇ ಶಾಲೆ ಪುನರಾರಂಭಿಸಲು ಸೂಚಿಸಲಾಗಿದೆ. 40ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲಗೊಂಡಿವೆ. ಅಥವಾ ಛಾವಣಿ ಸಡಿಲಗೊಂಡಿವೆ. ಪೂರ್ಣವಾಗಿ ಯಾವುದೇ ಕಟ್ಟಡ ಕುಸಿದಿಲ್ಲ, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ತಮ್ಮನ್ನು ಕಾಳಜಿ ಕೇಂದ್ರಗಳ ಉಸ್ತುವಾರಿಯಾಗಿ ನೇಮಿಸಿದ್ದು, ವಿವಿಧ ಕೇಂದ್ರಗಳಲ್ಲಿ 127 ಮಂದಿ ಊಟ ಮಾಡುತ್ತಿದ್ದಾರೆಂದರು.

Advertisement

ಪಶು ಇಲಾಖೆ ಡಾ.ಲಿಂಗರಾಜು ಹೊಸಮನಿ ಪ್ರವಾಹದಿಂದ ಯಾವುದೇ ಹಸು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿಲ್ಲವೆಂಬ ಮಾಹಿತಿಗೆ ಇಒ ಗಿರೀಶ್‌ ತಮ್ಮ ಬಳಿಯೇ ಹನಗೋಡು ಹೋಬಳಿ ಒಂದು ಹಾಗೂ ನಿಲುವಾಗಿಲಿನಲ್ಲಿ ಎರಡು ಹಸು ಸಾವನ್ನಪ್ಪಿರುವ ದಾಖಲೆ ಇದ್ದು, ಸರಿಯಾಗಿ ಮಾಹಿತಿ ಪಡೆದು ಸಭೆಗೆ ಬರಬೇಕೆಂದು ಎಚ್ಚರಿಸಿದರು.

ಸಭೆಗೆ ಗೈರು ಕ್ರಮಕ್ಕೆ ಒತ್ತಾಯ: ತುರ್ತು ಸಭೆ ಆಯೋಜಿಸಿದ್ದರೂ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶಿತರಾದ ಸದಸ್ಯರು ಗೈರಾಗಿರುವವರ ವಿರುದ್ಧ ಕ್ರಮವಾಗಲೇಬೇಕೆಂದು ಪಟ್ಟು ಹಿಡಿದರು. ಇಒ ಗಿರೀಶ್‌ ಮೊದಲು ನೋಟಿಸ್‌ ನೀಡಿ ಸಮಜಾಯಿಸಿ ಸಮರ್ಪಕವಾಗಿಲ್ಲದಿದ್ದಲ್ಲಿ, ಸೂಕ್ತ ಕ್ರಮಕ್ಕೆ ಸಿಇಒಗೆ ಪತ್ರಬರೆಯಲಾಗುವುದೆಂದು ತಿಳಿಸಿದರು.ಸಭೆಯಲ್ಲಿ ಜಿಪಂ ಸದಸ್ಯರಾದ ಸಾವಿತ್ರಿ, ಜಯಲಕ್ಷ್ಮೀ, ತಹಶೀಲ್ದಾರ್‌ ಬಸವರಾಜು, ತಾಪಂ ಸದಸ್ಯರಿದ್ದರು.

ಸಮರ್ಪಕ ಮಾಹಿತಿ ಕೊಡಿ: ಜಿಪಂ ಎಂಜಿನಿಯರಿಂಗ್‌ ವಿಭಾಗದ ಎಇಇ ರಮೇಶ್‌ ಮಳೆ ಹಾನಿಯಿಂದ ತಾಲೂಕಿನಲ್ಲಿ 9 ಕಿ.ಮೀ. ರಸ್ತೆ ಹಾಳಾಗಿದ್ದು, ಪ್ರತಿನಿತ್ಯ ಹನಗೋಡು ಹೋಬಳಿ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ತಮಗೆ ಮನೆ ಹಾನಿ ದಾಖಲೆ ದೃಢೀಕರಣದ ಜವಾಬ್ದಾರಿ ವಹಿಸಿದ್ದು ನಿರ್ವಹಿಸುತ್ತಿದ್ದೇನೆಂದು ಮಾಹಿತಿ ನೀಡಿದರು. ಈ ವೇಳೆ ಜಿಪಂ ಸದಸ್ಯ ಕಟ್ಟನಾಯಕ, ತಾಪಂ ಸದಸ್ಯೆ ಪುಷ್ಪಲತಾ, ಏನ್‌ ಸಾರ್‌, ಬಿಲ್ಲೇನಹೊಸಹಳ್ಳಿ, ಕೋಣನಹೊಸಹಳ್ಳಿ ರಸ್ತೆ ಎಲ್ಲಿ ಸೇರಿಸಿದ್ದೀರಾ. ಏಕೆ ಹೀಗೆ ಮಾಡ್ತೀರಾ.

ನಿಮಗಿಷ್ಟ ಬಂದ ಹಾಗೆ ಬರೆದುಕೊಂಡು ಬರೋದಾ, ಇಡೀ ಗ್ರಾಮವೇ ಪ್ರವಾಹದಲ್ಲಿ ಸಿಲುಕಿತ್ತು, ನಿಮಗೆ ಗೊತ್ತಾಗಿಲ್ವ, ತಹಶೀಲ್ದಾರ್‌, ಪೊಲೀಸರು ಊರೇ ಖಾಲಿ ಮಾಡಿಸಿದ್ದಾರೆ. ರಸ್ತೆ ಎಲ್ಲಾ ಹಾಳಾಗಿದೆ. ಬೇಕಾಬಿಟ್ಟಿಯಾಗಿ ಬರೆದುಕೊಂಡು ಬಂದಿದ್ದೀರಾ. 10 ಸಾವಿರದಲ್ಲಿ ಆಗುವ ಕಾಮಗಾರಿಗೆ 5 ಲಕ್ಷ ಅಂದಾಜು ಪಟ್ಟಿ ಸಲ್ಲಿಸಿದ್ದೀರಾ. ಇದ್ಯಾವ ನ್ಯಾಯ ಸಾರ್‌ ಎಂದು ಏರು ಧ್ವನಿಯಲ್ಲೇ ಪ್ರಶ್ನಿಸಿದಾಗ, ಸರ್‌ ಅದು ಅಂದಾಜು ಪಟ್ಟಿ ಸಾರ್‌ ಕಡಿಮೇನೂ ಮಾಡಬಹುದೆಂದು ಸಮಜಾಯಿಸಿ ನೀಡಿದರು. ಇ ಒ ಬಿಲ್ಲೇನಹೊಸಹಳ್ಳಿ ರಸ್ತೆಯನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next