ಹೊನ್ನಾಳಿ: ತಾಲೂಕಿನ ಹಿರೇಗೋಣಿಗೆರೆ ಗ್ರಾಪಂ ಒಟ್ಟು 17 ಸದಸ್ಯ ಬಲ ಹೊಂದಿದ್ದು, ಈ ಪೈಕಿ ಪಂಚಾಯಿತಿಯ 12 ಸದಸ್ಯರು ಅಧ್ಯಕ್ಷ ಸಿ. ಮಹೇಶ್ ವಿರುದ್ಧ ಅವಿಶ್ವಾಸ ನಿರ್ಣಯ ಸಭೆಗೆ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿ ಸಭೆಗೆ ಹಾಜರಾಗದ ಕಾರಣ ಸಿ.ಮಹೇಶ್ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಉಪವಿಭಾಗಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.
ಅವರು ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ಅಧ್ಯಕ್ಷ ಸಿ. ಮಹೇಶ್ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ 12 ಜನ ಸದಸ್ಯರು ಸಭೆ ಕರೆಯುವಂತೆ ತಮಗೆ ಜ. 18ರಂದು ಖುದ್ದಾಗಿ ಭೇಟಿಮಾಡಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಫೆ. 7 ರಂದು ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿತ್ತು.
ಆದರೆ ಅವಿಶ್ವಾಸ ಮಂಡನೆ ಸಭೆಗೆ ನಿಗದಿತ ವೇಳೆ ಮುಗಿದು ಒಂದು ಗಂಟೆಯಾದರೂ ಯಾವೊಬ್ಬ ಸದಸ್ಯರೂ ಕೂಡ ಹಾಜರಾಗದ ಕಾರಣ ಸಭೆಯನ್ನು ವಿಸರ್ಜಿಸಲಾಯಿತು. ಹಾಗೂ ಕಾಯ್ದೆ ಪ್ರಕಾರ ಮತ್ತೂಮ್ಮೆ ಅವಿಶ್ವಾಸ ಮಂಡಿಸಲು ಅವಕಾಶವಿಲ್ಲದ ಕಾರಣ ಪ್ರಸ್ತುತ ಅಧ್ಯಕ್ಷರಾಗಿರುವ ಸಿ.ಮಹೇಶ್ ಅವರೇ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಗುರುವಾರ ಬೆಳಗ್ಗೆ ಕರೆಯಲಾಗಿದ್ದ ಅವಿಶ್ವಾಸ ಮಂಡನೆ ಸಭೆಯಲ್ಲಿ ತಹಶೀಲ್ದಾರ್ ತುಷಾರ್ ಬಿ. ಹೂಸೂರು, ಪಿಡಿಒ ಅರುಣ್ ಕುಮಾರ್, ಕಾರ್ಯದರ್ಶಿ ರಾಜೇಂದ್ರಪ್ಪ ಮಾತ್ರ ಹಾಜರಿದ್ದರು.
ಬೇಲಿಮಲ್ಲೂರು ಮರಳು ಕ್ಯಾರೆಗೆ ಎ.ಸಿ. ಭೇಟಿ: ಗುರುವಾರ ದಾವಣಗೆರೆ ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಹಾಗೂ ತಹಶೀಲ್ದಾರ್ ತುಷಾರ್ ಬಿ. ಹೂಸೂರು ಹಿರೇಗೋಣಿಗೆರೆ ಗ್ರಾಪಂ ಅವಿಶ್ವಾಸ ಮಂಡನೆ ಸಭೆ ವಿಸರ್ಜನೆ ನಂತರ ಮಾರ್ಗದಲ್ಲಿ ಬರುವ ಬೇಲಿಮಲ್ಲೂರು ಮರಳು ಕ್ಯಾರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಬೇಲಿಮಲ್ಲೂರು ಹಾಗೂ ಕೆಲವೆಡೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ವಶಪಡಿಸಿಕೊಂಡು ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ದಾಸ್ತಾನು ಮಾಡಿದ್ದು, ಈ ಮರಳಿನ ವಿತರಣೆ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ, ಸರ್ಕಾರಿ ಕಾಮಗಾರಿಗಳಿಗೆ ಸರ್ಕಾರದ ಎಸ್.ಆರ್. ದರದಲ್ಲಿ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.