ರಾಯಚೂರು: ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ನಡೆಯಬೇಕಿದ್ದ 7ನೇ ಸಾಮಾನ್ಯ ಸಭೆಗೆ ಆಡಳಿತ ಪಕ್ಷದ ಸದಸ್ಯರೇ ಗೈರಾಗಿದ್ದರಿಂದ ಸಭೆಯನ್ನು ರದ್ದುಗೊಳಿಸಲಾಯಿತು. ಶನಿವಾರ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ 12:30 ಆದರೂ ಆರಂಭಗೊಳ್ಳಲಿಲ್ಲ. ಜಿಪಂ ಸಿಇಒ ಅಭಿರಾಂ ಜಿ.ಶಂಕರ್ ಒಬ್ಬರೇ ಸದಸ್ಯರಿಗಾಗಿ ಕಾದು ಕುಳಿತಿದ್ದರು.
ಅಧ್ಯಕ್ಷತೆ ವಹಿಸಬೇಕಿದ್ದ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅವರೊಬ್ಬರೇ ಒಂದೂವರೆ ತಾಸು ತಡವಾಗಿ ಆಗಮಿಸಿದ್ದರಿಂದ ಸಭೆ ನಿಶ್ಚಲವಾಗಿತ್ತು. ನಂತರ ಒಬ್ಬೊಬ್ಬರಾಗಿ ಆಗಮಿಸಿದಾದರೂ ಕೋರಂ ಕೊರತೆ ಎದುರಾಯಿತು. ಆಡಳಿತ ಪಕ್ಷದ ಸದಸ್ಯೆ ಶಿವಜ್ಯೋತಿ ಶ್ರಿನಿವಾಸರೆಡ್ಡಿ, ಹೇಮಾವತಿ ಸತೀಶ ಬಿಟ್ಟರೆ ಮತ್ಯಾವ ಸದಸ್ಯರು ಬಂದಿರಲಿಲ್ಲ. ಇನ್ನುಳಿದ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರಿಂದ ಹಾಗೂ ಕೋರಂ ಕೊರತೆಯಿಂದ ಸಾಮಾನ್ಯ ಸಭೆಯನ್ನು ಮುಂದೂಡಲಾಯಿತು.
ಕಾದು ಕುಳಿತ ಅಧಿಕಾರಿಗಳು: ಸಭೆಗೆ ಆಗಮಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳು ಸಭೆ ಈಗ ನಡೆಯುತ್ತದೋ, ಆಗ ನಡೆಯುತ್ತದೋ ಎಂದು ಕಾದು ಕುಳಿತ್ತಿದ್ದರು. ಕೊನೆಗೆ ಬೇಸರಗೊಂಡು ಇತರ ಅಧಿಕಾರಿಗಳೊಂದಿಗೆ ಕುಶಲೋಪರಿ ವಿಚಾರಿಸುತ್ತ ಹರಟೆಗೆ ಅಣಿಯಾದರು. ಒಂದು ಗಂಟೆಯಾದರೂ ಕೋರಂ ಅಗತ್ಯಕ್ಕೆ ಅನುಗುಣವಾಗಿ ಸದಸ್ಯರು ಭಾಗವಹಿಸಿರಲಿಲ್ಲ. ಜಿಪಂ ಸದಸ್ಯ ಗಂಗಣ್ಣ ಸಾಹುಕಾರ ಮಾತನಾಡಿ, ಸದಸ್ಯರೇ ಬರದಿದ್ದರೆ ಸಭೆ ನಡೆಸಲು ಸಾಧ್ಯವೇ. ಇಂಥ ಪರಿಸ್ಥಿತಿ ಇದ್ದರೆ, ಯಾಕೆ ಸಭೆಯನ್ನು ನಡೆಸುತ್ತಿರಿ ಎಂದು ಅಧ್ಯಕ್ಷರಿಗೆ ಪ್ರಶ್ನಿಸಿದರು.
ಜಿಪಂ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು ಮಾತನಾಡಿ, ಅಧ್ಯಕ್ಷರು ತಮ್ಮ ಸದಸ್ಯರನ್ನು ವಿಶ್ವಾಸಕ್ಕೆ
ತೆಗೆದುಕೊಂಡು ಸಭೆ ನಡೆಸಬೇಕು. ಒಂದು ಸಭೆ ನಡೆಸಬೇಕಾದರೆ, ಆಗುವ ವೆಚ್ಚದ ಬಗ್ಗೆ ತಿಳಿದುಕೊಳ್ಳಬೇಕು.
ಸದಸ್ಯರ ಏನಾದರೂ ಸಮಸ್ಯೆಗಳಿದ್ದರೆ, ಅವರನ್ನು ಸಮಾಧಾನಪಡಿಸಿ ಸಭೆ ನಿಗದಿಪಡಿಸಬೇಕು. ಅನಾವಶ್ಯಕವಾಗಿ ಸಮಯ ವ್ಯರ್ಥ್ಯ ಮಾಡುವುದು ಸರಿಯಲ್ಲ. ಸದಸ್ಯರು ಬರದೇ ಇದ್ದರೆ ಸಭೆ ಮುಂದೂಡಬೇಕು ಎಂದು ಒತ್ತಾಯಿಸಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶ ಅವರು ಯಾವುದೇ ಪ್ರಕ್ರಿಯೆ ನೀಡದೇ ಸದಸ್ಯರನ್ನು ಆಹ್ವಾನಿಸಲು ಮೊಬೈಲ್ ಮೂಲಕ ಕರೆ ಮಾಡುವುದರಲ್ಲಿ ನಿರತರಾಗಿದ್ದರು. ನಂತರ ಅಧ್ಯಕ್ಷರೇ ಬೇಸತ್ತು ಸಭೆಯಿಂದ ಹೊರನಡೆದರು. ಜಿಪಂ ಸದಸ್ಯರಾದ ಕ್ಷೀರಲಿಂಗಪ್ಪ, ಜಯಶ್ರೀ ಶರಣಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.