ಶಿರಸಿ: ಜಿಲ್ಲೆಯ ಪ್ರಸಿದ್ದ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಲ್ಲಿನ ಎಂಇಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಟಿ.ಎಸ್. ಹಳೆಮನೆ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ನೇಮಿಸಲಾಗಿದೆ.
ಹಳೆಮನೆ ಅವರ ಸೇವಾ ಹಿರಿತನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯದ ಶಿಪಾರಸ್ಸಿನ ಮೇರೆಗೆ ರಾಜ್ಯಪಾಲ ಥಾವರಚಂದ ಗೆಹಲೋಟ್ ಆದೇಶ ಮಾಡಿದ್ದಾರೆ. ಮುಂದಿನ ಎರಡು ವರ್ಷ ಅವರ ಅಧಿಕಾರಾವಧಿ ಇರಲಿದೆ.
ಸುಮಾರು ಮೂರು ದಶಕಗಳಿಗಿಂತ ಹೆಚ್ಚು ಕಾಲ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಹಳೆಮನೆ ಅವರು ಯಲ್ಲಾಪುರ ತಾಲೂಕಿನ ಬಳಗಾರ ಗ್ರಾಮದವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದವರು.
ಯಲ್ಲಾಪುರದ ವೈ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪಡೆದರು. ಅಂಕೋಲಾದ ಗೋಖಲೆ ಸೆಂಟಿನರಿ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು, ಪಿ ಜಿ ಡಿಪ್ಲೊಮಾ ಇನ್ ಎಪಿಗ್ರಾಫಿ ಮತ್ತು ಡಿಪ್ಲೊಮಾ ಇನ್ ಹ್ಯುಮನ್ ರೈಟ್ಸ್ ಪದವಿಗಳನ್ನು ಪಡೆದರು.ನಂತರದಲ್ಲಿ ಸೇವೆಗೆ ಸೇರಿದ ಇವರು ’ರಾಮಚಂದ್ರಾಪುರ ಮಠ ಇಟ್ಸ್ ಹಿಷ್ಟರಿ ಅಂಡ್ ಎಂಟಿಕ್ಸಿಟಿಸ್’ ಎಂಬ ಮಹಾಪ್ರಬಂಧ ಮಂಡಿಸಿ ಕ ವಿವಿ ಧಾರವಾಡ ದಿಂದ ಡಾಕ್ಟರೇಟ್ ಪದವಿ ಪಡೆದವರು.
ಉತ್ತರ ಕನ್ನಡ ಜಿಲ್ಲಾ ಪರಂಪರಾ ಕೂಟದ ಸಂಚಾಲಕರೂ ಹಾಗೂ ಪ್ರಾಚ್ಯವಸ್ತು ಸಂಗ್ರಹಕರೂ ಆಗಿರುವ ಡಾ. ಹಳೆಮನೆ ರಾಜ್ಯ ಮಟ್ಟದ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಿ, ಸಂಪನ್ಮೂಲ ವ್ಯಕ್ತಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ ರಾಷ್ಟ್ರೀಯ ಯುವ ಸೇನಾದಳದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನೇಮಕದ ಕುರಿತು ಎಂ ಇ ಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಮತ್ತು ಪದಾಧಿಕಾರಿಗಳು, ಶಿಕ್ಷಕ ಶಿಕ್ಷಕೇತರ ಸಿಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.