Advertisement

ಅನುದಾನ ಹಂಚಿಕೆಗೆ ಸದಸ್ಯರ ಅಸಮಾಧಾನ

03:31 PM May 26, 2022 | Team Udayavani |

ಚಳ್ಳಕೆರೆ: ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷೆ ಸುಮಕ್ಕ ಆಂಜಿನಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಪೌರಾಯುಕ್ತೆ ಕೆ.ಲೀಲಾವತಿ ಸ್ವಾಗತಿಸಿ ಮಾತನಾಡಿ, ಸಭೆಯಲ್ಲಿ ಒಟ್ಟು 24 ವಿವಿಧ ವಿಷಯಗಳ ಚರ್ಚೆಗೆ ಅವಕಾಶ ನೀಡಲಾಗಿದೆ. ಪಾವಗಡ ರಸ್ತೆಯ ಮಹಾಲಕ್ಷ್ಮೀ ಚಿತ್ರಮಂದಿರದ ಬಗ್ಗೆ ಸರ್ವೋತ್ಛ ನ್ಯಾಯಾಲಯ ನೀಡಿರುವ ಆದೇಶವನ್ನು ಜಾರಿಗೆ ತರುವ ಕುರಿತು ಸದಸ್ಯರು ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದರು.

Advertisement

ಆಡಳಿತ ಪಕ್ಷದ ಸದಸ್ಯರಾದ ಸುಮಾ ಭರಮಣ್ಣ, ವಿರೂಪಾಕ್ಷಿ, ಜಯಲಕ್ಷ್ಮೀ, ಕವಿತಾ ಬೋರಯ್ಯ, ಟಿ. ಮಲ್ಲಿಕಾರ್ಜುನ್‌, ಸಿ. ಶ್ರೀನಿವಾಸ್‌, ವಿ.ವೈ. ಪ್ರಮೋದ್‌, ಎಸ್‌. ಜಯಣ್ಣ, ಶಿವಕುಮಾರ್‌, ಎಂ. ನಾಗವೇಣಿ ಮತ್ತಿತರರು ನಗರಸಭೆಯ ಅನುದಾನ ಹಂಚಿಕೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ವಿವಿಧ ಯೋಜನೆಗಳಲ್ಲಿ ಅನುದಾನ ಬಿಡುಗಡೆ ಮಾಡುತ್ತಿದ್ದು ಎಲ್ಲಾ 31 ವಾರ್ಡ್‌ಗಳಿಗೂ ಸಮನಾಗಿ ಹಂಚಿಕೆ ಮಾಡಬೇಕಿದೆ. ಕೆಲವೊಂದು ವಾರ್ಡ್‌ಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಅವಶ್ಯವಾಗಿ ಬೇಕಾದ ಕಾಮಗಾರಿಗಳಿಗೆ ಮಾತ್ರ ಅಗತ್ಯ ಬಿದ್ದರೆ ಹೆಚ್ಚು ಅನುದಾನ ನೀಡಬೇಕು. ಆಡಳಿತ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧ್ಯಕ್ಷೆ ಸುಮಕ್ಕ ಆಂಜಿನಪ್ಪ ತಾವು ಪ್ರತಿನಿಧಿಸುವ 17ನೇ ವಾರ್ಡ್ ಗೆ 70 ಲಕ್ಷ ಅನುದಾನವನ್ನು ಮೀಸಲಿಟ್ಟಿರುವುದು ಸರಿಯಲ್ಲ. ನಗರದ ಯಾವುದೇ ವಾರ್ಡ್‌ ಈ ಪ್ರಮಾಣದ ಹಣ ಬಿಡುಗಡೆಯಾಗಿಲ್ಲ. ಕೆಲವೊಂದು ವಾರ್ಡ್‌ಗಳಿಗೆ ಹಣ ಮೀಸಲಿಟ್ಟಿಲ್ಲ. ಕೆಲವು ವಾರ್ಡ್ ಗಳಿಗೆ ಅತಿ ಕಡಿಮೆ ಅನುದಾನ ನಿಗದಿಪಡಿಸಿದ್ದೀರಿ. ಇದರಿಂದ ಬೇರೆ ಸದಸ್ಯರಿಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅಡ್ಡಿಯಾಗುತ್ತದೆ ಎಂದು ಅಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸಹಾಯಕ ಇಂಜಿನಿಯರ್‌ ಲೋಕೇಶ್‌ರವರನ್ನು ತರಾಟೆಗೆ ತೆಗೆದುಕೊಂಡಕೆಲ ಸದಸ್ಯೆಯರು, ಯಾವುದೇ ಕಾಮಗಾರಿಯ ಬಗ್ಗೆ ಮಾಹಿತಿ ಕೇಳಿದರೆ ನಿಮ್ಮ ಪತಿಗೆ ತಿಳಿಸಿರುವುದಾಗಿ ಹೇಳುತ್ತಾರೆ. ಆದರೆ ಇನ್ನು ಮುಂದೆ ನೇರವಾಗಿ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು. ಪೌರಾಯುಕ್ತೆ ಟಿ. ಲೀಲಾವತಿ ಮಾತನಾಡಿ, ಅನುದಾನ ಹಂಚಿಕೆ ಕುರಿತಂತೆ ಯಾರೂ ಅಸಮಾಧಾನಗೊಳ್ಳಬಾರದು. ಮುಂದಿನ ದಿನಗಳಲ್ಲಿ ಎಲ್ಲರೂ ಸರಿಸಮಾನವಾಗಿ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪಾವಗಡ ರಸ್ತೆಯ ಮಹಾಲಕ್ಷ್ಮೀ ಚಿತ್ರಮಂದಿರದ ಸಮಸ್ಯೆಯ ಬಗ್ಗೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶವನ್ನು ನಗರಸಭೆ ಪಾಲಿಸಬೇಕಿದೆ. ನಿಯಮಗಳ ಪ್ರಕಾರ ಸದರಿ ಸ್ವತ್ತನ್ನು ಬಹಿರಂಗ ಹರಾಜು ಮೂಲಕ ನೀಡುವುದು ಸೂಕ್ತ. ಕಾನೂನುಬದ್ಧವಾಗಿ ಹರಾಜು ನಡೆಸುವಂತೆ ಸದಸ್ಯರಾದ ಶ್ರೀನಿವಾಸ್‌, ರಮೇಶ್‌ ಗೌಡ, ಕೆ. ವೀರಭದ್ರಪ್ಪ ಮುಂತಾದವರು ಒತ್ತಾಯಿಸಿದರು.

ಈ ಬಗ್ಗೆ ಸ್ಪಷ್ಟನೆ ನೀಡಿದ ಪೌರಾಯುಕ್ತೆ, ಮಹಾಲಕ್ಷ್ಮೀ ಚಿತ್ರಮಂದಿರದ ಸಮಸ್ಯೆ ಸಂಬಂಧಪಟ್ಟಂತೆ ಬಿ. ವನಿತಾ ಕೋಂ ಯೋಗಾನಂದ ಅರ್ಜಿ ನೀಡಿ ನಗರಸಭೆಯ ನಿಯಮಗಳ ಪ್ರಕಾರ 21 ಮೀಟರ್‌ ಬಿಟ್ಟು ಮಾರುಕಟ್ಟೆ ಮೌಲ್ಯಕ್ಕೆ ಸದರಿ ನಿವೇಶನವನ್ನು ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸದಸ್ಯರ ಅಭಿಪ್ರಾಯವನ್ನು ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

Advertisement

ಉಪಾಧ್ಯಕ್ಷೆ ಆರ್‌. ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರನಾಯಕ, ವೈ. ಪ್ರಕಾಶ್‌, ಸುಜಾತಾ ಪಾಲಯ್ಯ, ಎಂ.ಜೆ. ರಾಘವೇಂದ್ರ, ತಿಪ್ಪಮ್ಮ, ಚಳ್ಳಕೆರೆಯಪ್ಪ, ಪಾಲಮ್ಮ, ಸಾವಿತ್ರಮ್ಮ, ಜೈತುಂಬಿ, ನಿರ್ಮಲಾ, ನಾಮನಿರ್ದೇಶನ ಸದಸ್ಯರಾದ ಹೊಸಮನೆ ಮನೋಜ್‌, ವೀರೇಶ್‌, ಇಂದ್ರೇಶ್‌, ಜಗದಾಂಬ, ವ್ಯವಸ್ಥಾಪಕ ಲಿಂಗರಾಜು, ಕಂದಾಯಾಧಿಕಾರಿ ವಿ. ಈರಮ್ಮ, ಎಇಇ ವಿನಯ್‌ ಮತ್ತಿತರರು ಉಪಸ್ಥಿತರಿದ್ದರು.

ಪೌರಕಾರ್ಮಿಕರಿಗೆ ನೂತನ ತಾಂತ್ರಿಕತೆಯಿಂದ ಕೂಡಿದ ರಕ್ಷಾ ಕವಚಗಳನ್ನು ವಿತರಿಸಲಾಗುವುದು. ಪ್ರಸ್ತುತ ಪ್ರತಿನಿತ್ಯ ನೀಡುವ ಉಪಹಾರದ ಬದಲು ಎಲ್ಲಾ ಪೌರಕಾರ್ಮಿಕರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಕೆಲಸದ ನಂತರ ವಿಶ್ರಾಂತಿ ಪಡೆಯಲು 30 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕಡೆ ವಿಶ್ರಾಂತಿ ಗೃಹ ನಿರ್ಮಿಸಲಾಗುವುದು. -ಟಿ. ಲೀಲಾವತಿ, ಪೌರಾಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next