ಮೇಲುಕೋಟೆ: ಇಲ್ಲಿನ ಪ್ರಖ್ಯಾತ ಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹುಣಿಸೆ ತೋಪಿನ ಮಾರ್ಗದ ಬಳಿ ಸುಮಾರು 3500 ವರ್ಷ ಹಳೆಯದೆನ್ನಲಾದ ಬೃಹತ್ ಶಿಲಾಯುಗ ಕಾಲದ ನಿಲುಸುಗಲ್ಲು ಪತ್ತೆಯಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಶೆಲ್ವಪ್ಪಿಳ್ಳೆ ಅಯ್ಯಂಗಾರ್ ನಿಲುಸುಗಲ್ಲನ್ನು ಗುರುತಿಸಿದ್ದು, ಇದು ಪ್ರಾಗೈತಿಹಾಸ ಸಂಶೋಧನೆಗೆ ಪೂರಕವಾದ ಮಹತ್ವದ ಆಕರವಾಗಿದ್ದು, ಹೆಚ್ಚಿನ ಸಂಶೋಧನೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿಲಾಯುಗದಲ್ಲೇ ಮೇಲುಕೋಟೆ ಬೆಟ್ಟಗುಡ್ಡಗಳ ಬಳಿ ಜನವಸತಿ ಇತ್ತು ಎಂಬುದಕ್ಕೆ ಈ ಕಲ್ಲು ಐತಿಹಾಸಿಕ ದಾಖಲೆಯಾಗಲಿದೆ. ಈ ನಿಲುಸುಗಲ್ಲು ಅಂದಾಜು ಸರಿಸುಮಾರು 15 ಅಡಿ ಉದ್ದವಿದೆ. ಇದನ್ನು ಇಂಗ್ಲೀಷ್‌ನಲ್ಲಿ ಮೆನಿØರ್ ಎಂದು ಕರೆಯಲಾಗಿದ್ದು, ಯುರೋಪಿನಲ್ಲಿ ಸಹ ಕಂಡು ಬರುತ್ತವೆ. ಮಂಡ್ಯ ಭಾಗದಲ್ಲಿ ಇದು ಮೊಟ್ಟ ಮೊದಲ ನಿಲಸುಗಲ್ಲು ಸಂಶೋಧನೆಯಾಗಲಿದೆ. ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಅವರು ತಮ್ಮ ಕ್ಷೇತ್ರ ಅಧ್ಯಯನ ಮತ್ತು ಮೇಲುಕೋಟೆಯ ಪಾರಂಪರಿಕ ಕೊಳಗಳ ಬಗ್ಗೆ ನಿಖರ ಅಧ್ಯಯನಕ್ಕೆ ತೆರಳಿದ್ದ ವೇಳೆ ಹುಣಿಸೇ ತೋಪಿನ ಬಳಿಯ ಮರದ ಕೆಳಗೆ ಇದ್ದ ನಿಲುಸುಗಲ್ಲನ್ನು ಪತ್ತೆ ಮಾಡಿ, ಕಲ್ಲಿನ ಮೇಲಿದ್ದ ಚಿಹ್ನೆಗಳನ್ನು ಗಮನಿಸಿ ಇದು ನಿಲಸುಗಲ್ಲು ಎಂಬುದರ ಬಗ್ಗೆ ವಿವರ ಕಲೆ ಹಾಕಿದ್ದಾರೆ. ಮೇಲುಕೋಟೆಯಲ್ಲಿ ಪತ್ತೆಯಾಗಿರುವ ನಿಲುವುಗಲ್ಲಿನ ಮಾಹಿತಿಯನ್ನು ರಾಜ್ಯ ಪುರಾತತ್ವ ಇಲಾಖೆಯ ಅ ಕಾರಿಗಳ ಗಮನಕ್ಕೂ ತಂದಿದ್ದು, ತಕ್ಷಣ ರಕ್ಷಣಾ ಕ್ರಮ ಜರುಗಿಸಿ ಅಧ್ಯಯನಕ್ಕೆ ಮತ್ತು ಸಂಶೋಧನೆ ಮಾಡಿ ಇತಿಹಾಸದ ಮೇಲೆ ಬೆಳಕು ಚೆಲ್ಲಲು ಮನವಿ ಮಾಡಿದ್ದಾರೆ.
ಈ ಸಂಶೋಧನೆಯ ಸಂದರ್ಭದಲ್ಲಿ ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ, ಮತ್ತು ಬರಹಗಾರ್ತಿ ಯಶೋಧಪ್ರಸಾದ್, ಕಾಲೇಜು ವಿದ್ಯಾರ್ಥಿ ಸಹಸ್ರಾಕ್ಷನ್ ಅವರು ಸಹಕರಿಸಿದ್ದಾರೆ. ಮೇಲುಕೋಟೆಯಲ್ಲಿನ ಎಲ್ಲ ಪುರಾತನ ಕೊಳಗಳು ಹಾಗೂ ನೀರಿನ ಮೂಲಗಳನ್ನು ಗುರುತಿಸಿ ಯಾವ ಕಾಲದಲ್ಲಿ ಕೊಳಗಳು ನಿರ್ಮಾಣವಾಗಿವೆ. ಕೊಳಗಳ ನಿರ್ಮಾಣದ ಉದ್ದೇಶವೇನು ವಾಸ್ತುಶೈಲಿ ಯಾವುದು ಎಂಬ ಐತಿಹಾಸಿಕ ಸಂಗತಿಗಳನ್ನು ದಾಖಲೀಕರಣ ಮಾಡಿ ಮುಂದಿನ ಜನಾಂಗಕ್ಕೆ ನಿಖರ ಮಾಹಿತಿ ನೀಡುವ ಕಾರ್ಯವನ್ನೂ ಮಾಡಲಾಗುತ್ತಿದೆ. ಈವರೆಗೆ ಮೇಲುಕೋಟೆಯಲ್ಲಿ ಇಂತಹ ಕಾರ್ಯ ನಡೆದಿಲ್ಲ ಎಂದೂ ಡಾ.ಶೆಲ್ವಪ್ಪಿಳ್ಳೆ ಅಯ್ಯಂಗಾರ್ ಮಾಹಿತಿ ನೀಡಿದ್ದಾರೆ.
ಜನ ವಾಸ ಮಾಡುತ್ತಿದ್ದರು ಎಂಬುದಕ್ಕೆ ನಿಲುಸುಗಲ್ಲು ಸಾಕ್ಷಿ : ಮೇಲುಕೋಟೆಯಲ್ಲಿ ಸಾ.ಶ.ಪೂರ್ವ 1500ರಿಂದ 500ರ ನಡುವೆ ಜನ ವಾಸ ಮಾಡುತ್ತಿದ್ದರು ಎಂಬುದಕ್ಕೆ ಈ ಕಲ್ಲು ಸಾಕ್ಷಿಯಾಗಿದೆ. ಆ ಕಾಲಘಟ್ಟದಲ್ಲಿ ಇಲ್ಲಿನ ನಿವಾಸಿಗಳು ತಮ್ಮ ಗುಂಪಿನ ಜನ ಇಹಲೋಕ ತ್ಯಜಿಸಿದಾಗ ಮಣ್ಣು ಮಾಡಿ ಅದರ ಕುರುಹಾಗಿ ಅಲ್ಲಿನ ಪರಿಸರದಲ್ಲಿ ಸಿಗುವ ದೊಡ್ಡದಾದ ಕಲ್ಲನ್ನು ಕಬ್ಬಿಣದಿಂದ ಒಡೆದು, ಸಮಾ ಧಿಗಳ ಮೇಲೆ ನಿಲ್ಲಿಸುತ್ತಿದ್ದರು. ಇದನ್ನು ಸಾಮಾನ್ಯವಾಗಿ ಉತ್ತರ ದಕ್ಷಿಣದ ಅಕ್ಷದಲ್ಲಿ ನಿಲ್ಲಿಸುತ್ತಿದ್ದು, ಮೇಲುಕೋಟೆಯಲ್ಲಿ ಸಿಕ್ಕಿರುವ ನಿಲಸುಗಲ್ಲು ಸಹ ದಕ್ಷಿಣೋತ್ತರವಾಗಿ ನಿಲ್ಲಿಸಿದ್ದಾರೆ. ಕೆಲವರ ಪ್ರಕಾರ ಇದು ದಕ್ಷಿಣಾಯನ ಅಥವಾ ಉತ್ತರಾಯಣವನ್ನು ಪತ್ತೆ ಹಚ್ಚಲು ಅವರಿಗೆ ಸಹಕಾರಿಯಾಗುತ್ತಿತ್ತು.