ಮೇಲುಕೋಟೆ: ಸ್ಥಾನೀಕರು ಜಿಲ್ಲಾ ಖಜಾನೆಯಿಂದ ವೈರಮುಡಿ ಕಿರೀಟ ತಂದು ವಿಧಿ ವಿಧಾನ ಪೂರೈಸುವ ವಿಚಾರದಲ್ಲಿ ದೇವಾಲಯದ ಕೈಪಿಡಿಯ ನಿಯಮ, ಹೈಕೋರ್ಟ್ ನಿರ್ದೇಶನ, ಆಡಳಿತ ಸಮಿತಿ ತೀರ್ಮಾನಗಳನ್ನು ನಿರ್ಲಕ್ಷಿಸಿ ಒಂದನೇ ಸ್ಥಾನೀಕರನ್ನು ಮಾತ್ರ ಯಾವುದೇ ಆದೇಶ ನೀಡದೆ ಕರೆದುಕೊಂಡು ಹೋಗುತ್ತಿದ್ದ ಅಧಿಕಾರಿಗಳ ಕ್ರಮವನ್ನು 4ನೇ ಸ್ಥಾನೀಕರು ಪ್ರಶ್ನಿಸಿ ವೈರಮುಡಿ ಕಿರೀಟ ತರಲು ಜಿಲ್ಲಾ ಖಜಾನೆಗೆ ತೆರಳುತ್ತಿದ್ದ ವಾಹನ ತಡೆದ ಕಾರಣ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ದೇಗುಲದ ನಿಯಮಗಳು ಮತ್ತು ಸರ್ಕಾರಿ ಕಚೇರಿಯ ನಿಯಮಗಳನ್ನು ಉಲ್ಲಂಘಿಸಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಸಹ ಹಾಜರಿರದೆ ವೈರಮುಡಿ ಕಿರೀಟ ತರಲು 4ನೇ ಸ್ಥಾನೀಕರನ್ನು ಕೈಬಿಟ್ಟು ಪ್ರಥಮ ಸ್ಥಾನೀಕರನ್ನು ಮಾತ್ರ ಕರೆದುಕೊಂಡು ಹೋಗುತ್ತಿದ್ದ ಅಧಿಕಾರಿಗಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಸ್ಥಾನೀಕರ ಕುಟುಂಬ, ದೇವಾಲಯದ ಇಒರನ್ನು ಸ್ಥಳಕ್ಕೆ ಕರೆಸಿ ಒಂದನೇ ಸ್ಥಾನೀಕರಿಗೆ ಆದೇಶ ನೀಡಿ ಕರೆದುಕೊಂಡು ಹೋಗಿಲ್ಲ. ಇಲ್ಲದಿದ್ದರೆ ದೇವಾಲಯ ಕೈಪಿಡಿಯ ನಿಯಮ ಮತ್ತು ಹೈಕೋರ್ಟ್ ನಿರ್ದೇಶನ, ಆಡಳಿತ ಸಮಿತಿಯ ತೀರ್ಮಾನದಂತೆ ಎಲ್ಲ ಸ್ಥಾನೀಕರಿಗೆ ಅವಕಾಶ ನೀಡಿ ಎಂದು ಪಟ್ಟು ಹಿಡಿದರು.
ಇದನ್ನೂ ಓದಿ:ಪ್ರಧಾನಿ ಮೋದಿಗೆ ಬಹುಪರಾಕ್…ಜೈಪುರ್ ಸಾಹಿತ್ಯ ಸಮ್ಮೇಳನದಲ್ಲಿ ಶಶಿ ತರೂರ್ ಹೇಳಿದ್ದೇನು
ಸುಮಾರು ಏಳು ಗಂಟೆಗೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಮತ್ತು ದೂರವಾಣಿಯಲ್ಲಿ ಮಾತನಾಡಿದ ಎಸಿ ಶಿವಾನಂದಮೂರ್ತಿ ಒಂದನೇ ಸ್ಥಾನೀಕರ ಪರವಾಗಿ ವಾದಿಸಿದರು. ಈ ವೇಳೆ ಪ್ರಶ್ನಿಸಿದ ನಾಲ್ಕನೇ ಸ್ಥಾನೀಕರು ಪ್ರಥಮ ಸ್ಥಾನೀಕರೆ ಹೋಗಬೇಕೆಂಬ ಆದೇಶ ಇದ್ದರೆ ಕೊಡಿ, ಕಳೆದ ಸಲವೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸುಳ್ಳು ಹೇಳಿ ನಮಗೆ ಅನ್ಯಾಯ ಮಾಡಿದಿರಿ ಜಿಲ್ಲಾಧಿಕಾರಿಗಳಿಗೂ ಸಮರ್ಪಕವಾದ ಮಾಹಿತಿ ನೀಡುವುದಿಲ್ಲ. ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿ ಅವರ ಪರ ಆದೇಶ ತರಲು ವಿಫಲವಾದ ಪ್ರಥಮ ಸ್ಥಾನೀಕರ ಪರವಾಗಿದ್ದೀರಿ. ಈ ಬಾರಿ ಸಹ ಮತ್ತೆ ಅದೇ ವರ್ತನೆ ಮರುಕಳಿಸುವಂತೆ ಮಾಡಿ ಅನ್ಯಾಯ ಮಾಡುತ್ತಿದ್ದೀರಿ. ಒಂಬತ್ತು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗೆ ದೇಗುಲದ ಅಧಿಕಾರಿಗೆ ಮನವಿ ನೀಡಿದರೂ ಪರಿಶೀಲಿಸಿ ಕ್ರಮ ಜರುಗಿಸಿಲ್ಲ. ಯಾವುದೇ ನಿಯಮ ಪಾಲನೆ ಮಾಡದ ಕಾರಣ ನಿಮ್ಮಿಂದಲೇ ಗೊಂದಲ ಆಗುತ್ತಿದ್ದರೂ ಪರಿಹರಿಸುವ ಪ್ರಯತ್ನ ಮಾಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
4ನೇ ಸ್ಥಾನೀಕರ ಯಾವುದೇ ಮಾತನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಹೆಚ್ಚಿನ ಪೊಲೀಸರನ್ನು ಕರೆಸಿಕೊಂಡು ನಾಲ್ಕನೇ ಸ್ಥಾನೀಕರ ಕುಟುಂಬವನ್ನು ಬದಿಗೆ ಸರಿಸಿ ವೈರಮುಡಿ ತರುವ ವಾಹನದಲ್ಲಿ ಒಂದನೇ ಸ್ಥಾನೀಕರನ್ನು ಮಾತ್ರ ಕರೆದು ಕೊಂಡು ಮಂಡ್ಯ ಖಜಾನೆಗೆ ತೆರಳಿದರು.