Advertisement

ಮೇಲುಕೋಟೆ ವಜ್ರಾಂಗಿ ಆಭರಣ ಅವ್ಯವಹಾರ ಪ್ರಕರಣ: ಅರ್ಚಕ ನರಸರಾಜಭಟ್ ನೇಮಕಕ್ಕೆ ಹೈಕೋರ್ಟ್ ತಡೆ

08:39 PM Jan 25, 2021 | sudhir |

ಮಂಡ್ಯ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ವಜ್ರಾಂಗಿ ಆಭರಣ ಅವ್ಯವಹಾರದ ಆರೋಪ ಹೊತ್ತು ಅಮಾನತ್ತಾಗಿರುವ ಅರ್ಚಕ ನರಸರಾಜಭಟ್ ನೇಮಕಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.

Advertisement

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎಂ.ಜಿ.ಉಮಾ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಸಮಗ್ರ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.

2016ರಲ್ಲಿ ಅವ್ಯವಹಾರ ನಡೆಸಿರುವುದು ಸಾಬೀತಾದ ಕಾರಣ ಅರ್ಚಕ ನರಸರಾಜಭಟ್ ಅವರನ್ನು ಅಮಾನತ್ತು ಮಾಡಲಾಗಿತ್ತು. ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಮತ್ತು ವಿವಿಧ ಅಧಿಕಾರಿಗಳು ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು.
ಜಿಲ್ಲಾಧಿಕಾರಿ ಸಹ ಅರ್ಚಕರನ್ನು ಸೇವೆಯಿಂದ ವಜಾಗೊಳಿಸಲು ಧಾರ್ಮಿಕದತ್ತಿ ಆಯುಕ್ತರಿಗೆ ವರದಿ ನೀಡಿದ್ದರು.

ಧಾರ್ಮಿಕದತ್ತಿ ಆಯುಕ್ತರ ಹಿಂದಿನ ಕೇಂದ್ರ ಸ್ಥಾನೀಕ ಸಹಾಯಕರು ನರಸರಾಜಭಟ್ ನೇಮಕಕ್ಕೆ ಆದೇಶ ನೀಡಿ ಮತ್ತೆ ವಿಚಾರಣೆ ನಡೆಸುವಂತೆ ಆದೇಶಿಸಿದ್ದರು. ಈಗಾಗಲೇ ವಿಚಾರಣೆಗಳು ಮುಕ್ತಾಯವಾಗಿರುವ ಕಾರಣ ಮತ್ತೆ ಕಾಲಹರಣ ಮಾಡದೆ ಕ್ರಮ ಕೈಗೊಳ್ಳುವಂತೆ ಶ್ರೀನಿವಾಸ ನರಸಿಂಹನ್ ಗುರೂಜಿ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ:145 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರಾಗಿಣಿ ಬಿಡುಗಡೆ

Advertisement

ವಿಚಾರಣೆ ನಡೆಸಿ, ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ದ್ವಿಸದಸ್ಯ ಪೀಠ ನ್ಯಾಯಾಧೀಶರು ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡು ಒಂದೇ ಪ್ರಕರಣದ ಬಗ್ಗೆ ಎಷ್ಟು ವಿಚಾರಣೆ ನಡೆಸುತ್ತೀರಿ. ಜಿಲ್ಲಾಧಿಕಾರಿಗಳ ವಿಚಾರಣಾ ವರದಿಯ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ. ಅಮಾನತ್ತಾಗಿರುವ ಅರ್ಚಕರ ಸಹೋದರರೇ ಕರ್ತವ್ಯನಿರ್ವಹಿಸುತ್ತಿರುವಾಗ ಅಮಾನತ್ತಾದ ಅರ್ಚಕರ ನೇಮಕಕ್ಕೆ ಅವಸರ ಏಕೆ?, ಕೈಗೊಂಡ ಕ್ರಮಗಳ ಬಗ್ಗೆ ಹೈಕೋರ್ಟ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಆದೇಶಿಸಿ ಪ್ರಕರಣದ ವಿಚಾರಣೆಯನ್ನು ಫೆ.11ಕ್ಕೆ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ.

ಹೈಕೋರ್ಟ್ ದ್ವಿಸದಸ್ಯ ಪೀಠದ ಆದೇಶವನ್ನು ಸ್ವಾಗತಿಸುತ್ತೇನೆ. ನ್ಯಾಯಾಲಯಗಳು ಇಂಥ ಸತ್ಯವನ್ನು ಎತ್ತಿ ಹಿಡಿಯುತ್ತವೆ. ಧಾರ್ಮಿಕ ದತ್ತಿ ಇಲಾಖೆಯ ಈಗಿನ ಆಯುಕ್ತ ದಯಾನಂದ್ ಹಾಗೂ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಇಬ್ಬರೂ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿದ್ದಾರೆ. ಹೀಗಾಗಿ ನೆನೆಗುದಿಗೆ ಬಿದ್ದಿದ್ದ ವಜ್ರಾಂಗಿ ಆಭರಣ ಅವ್ಯವಹಾರದ ಸಂಬoಧ ಸಮರ್ಪಕವಾದ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಎಂದಿಗೂ ಸತ್ಯಕ್ಕೇ ಜಯವಾಗಲಿದೆ ಎಂದು ದೂರುದಾರ ಶ್ರೀನಿವಾಸನರಸಿಂಹನ್ ಗುರೂಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next