Advertisement

ಹಿಂಡಿಯಲ್ಲಿ ಕಲ್ಲು ಬೆರಸಿ ಮಾರಾಟ

02:45 PM Nov 29, 2018 | Team Udayavani |

ಬಂಗಾರಪೇಟೆ: ಬರಗಾಲದಲ್ಲಿ ಕೈ ಹಿಡಿಯುವ ಹೈನೋದ್ಯಮ ಜಿಲ್ಲೆಯ ಜೀವಾಳವಾಗಿದೆ. ಹೀಗಾಗಿ ಜಾನುವಾರುಗಳ ಮೇವಿನ ಜತೆ ಹಿಂಡಿ, ಬೂಸ ಬಳಸುವುದು ಸಾಮಾನ್ಯ. ಅದರೆ ತೂಕ ಹೆಚ್ಚು ಬರಲೆಂದು ಹಿಂಡಿಯಲ್ಲಿ ಕಲ್ಲುಗಳನ್ನು ಮಿಶ್ರಣ ಮಾಡಿ ರೈತರಿಗೆ ಮಾರುತ್ತಿರುವ ಕೃತ್ಯ ಬೆಳಕಿಗೆ ಬಂದಿದೆ ಬಂಗಾರಪೇಟೆ ಪಟ್ಟಣದಲ್ಲಿ 20ಕ್ಕೂ ಹೆಚ್ಚು ಹಿಂಡಿ ಹಾಗೂ ಬೂಸಾ ಮಾರಾಟ ಮಾಡುವ ಅಂಗಡಿಗಳಿದ್ದು, ಈ ಅಂಗಡಿಗಳು ಪಶುಪಾಲನೆ ಇಲಾಖೆಯಿಂದ ಯಾವುದೇ ಲೈಸನ್ಸ್‌ ಪಡೆಯದೇ ಅಕ್ರಮವಾಗಿ ಕೃಷಿ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ.

Advertisement

ಸರ್ಕಾರದ ಹಾಗೂ ಇಲಾಖೆಯ ಕಣ್ಣುತಪ್ಪಿಸಿ ಕೆಲವರು ಹಿಂಡಿ ಉತ್ಪಾದನಾ ಘಟಕಗಳಳನ್ನು ತಯಾರಿಸಿಕೊಂಡು ಯಾವುದೇ ಹೆಸರಿಲ್ಲದೆ ತಯಾರಿಸಿ ಅಕ್ರಮವಾಗಿ ಸರಬರಾಜು ಮಾಡುತ್ತಿರುವುದು ಕಂಡು ಬಂದಿದೆ.

ಜಾನುವಾರುಗಳಿಗೆ ಉಪಯೋಗಿಸುವ ಹಿಂಡಿಯ ಬೆಲೆ ಪ್ರತಿ ಕೆ.ಜಿ.ಗೆ 30 ರಿಂದ 35 ರೂಗಳಿದ್ದು, ಪ್ರತಿ ಮೂಟೆಯಲ್ಲಿ 30 ಕೆ.ಜಿ.ಗಳಿದ್ದರೂ 35 ಕೆಜಿಗಳೆಂದು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಹಿಂಡಿ ಪ್ರತಿ ಕೆ.ಜಿ.ಗೆ 50 ರಿಂದ 150 ಗ್ರಾಪಂ ಸಣ್ಣ ಗಾತ್ರದ ಕಲ್ಲುಗಳು ಮಿಶ್ರಣ ಮಾಡಿರುವುದರಿಂದ ರೈತರು ಹಿಂಡಿಯನ್ನು ಜಾನುವಾರುಗಳಿಗೆ ನೇರವಾಗಿ ನೀಡುವುದರಿಂದ ಹೊಟ್ಟೆನೋವಿನಿಂದ ನರಳುತ್ತಿರುವುದು ಕಂಡು ಬಂದಿದೆ. ಪ್ರತಿ ತಿಂಗಳ 10 ಇಂದ 12 ಹಸುಗಳು ಸಾಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಪಶು ಮತ್ತು ಕುಕ್ಕುಟ ಆಹಾರ ಮತ್ತು ಖನಿಜ ಮಿಶ್ರಣಗಳನ್ನು ನಿಯಂತ್ರಣ ಮಾಡಲು ಸರ್ಕಾರಗಳು ಈಗಾಗಲೇ ಗ್ರಾಹಕ ರಕ್ಷಣಾ ಕಾಯ್ದೆ-1986 ಮತ್ತು ಭಾರತೀಯ ಮಾನಕ ಸಂಸ್ಥೆ ಕಾಯ್ದೆ-1986 ಎಂಬ ಎರಡು ಕಾಯ್ದೆಗಳನ್ನು ಜಾರಿಗೆ ತಂದು ಸೂಕ್ತ ಕ್ರಮಕೈಗೊಳ್ಳಲು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ವಹಿಸಿದ್ದರೂ ಸಹ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೇ ಕಣ್ಮುಚ್ಚಿ ಕುಳಿತಿದ್ದಾರೆ.

ಕಾನೂನು ಕ್ರಮ ಅಗತ್ಯ

Advertisement

ಬಂಗಾರಪೇಟೆ ತಾಲೂಕಿನಲ್ಲಿ 130ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಘಗಳಿದ್ದು, ಈ ಸಂಘಗಳ ಮೂಲಕ ಕೋಚಿಮುಲ್‌ಗೆ ಪ್ರತಿ ದಿನ 75 ಸಾವಿರ ಲೀಟರ್‌ಗಳಿಗೂ ಹೆಚ್ಚಾಗಿ ಹಾಲು ಉತ್ಪಾದನೆಯಗುತ್ತಿದೆ. 8 ರಿಂದ 9 ಸಾವಿರ ಸೀಮೆ ಹಸುಗಳಿದ್ದು, ಈ ಹಸುಗಳಿಗೆ ಮುಖ್ಯ ಆಹಾರವಾಗಿ ಹಿಂಡಿಯನ್ನು ನೀಡಲಾಗುತ್ತಿದೆ. ಈ ಹಿಂಡಿಯಲ್ಲಿ ಅಕ್ರಮವಾಗಿ ಕಲ್ಲುಗಳನ್ನು ಬೆರಸಿ ರೈತರಿಗೆ ಅನ್ಯಾಯ ಮಾಡುತ್ತಿರುವ ಅಂಶ ಕಂಡು ಬಂದಿದೆ. ಸಂಬಂಧಪಟ್ಟ ಇಲಾಖೆಗಳು ಈ ಅಕ್ರಮವನ್ನು ತಡೆಗಟ್ಟಲು ಮುಂದಾಗಬೇಕಿದೆ. ಲೈಸನ್ಸ್‌ ಇಲ್ಲದೇ ಕೃಷಿ, ಹೈನು ದಾಸ್ತಾನು ಮಾರಾಟ ಮಾಡುತ್ತಿರುವವರ ವಿರುದ್ಧ ಹಾಗೂ ಅನಧಿಕೃತವಾಗಿ ತಯಾರಿಕೆ ಮಾಡುವ ಘಟಕಗಳ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ರೈತ ಸೇನೆಯ ತಾಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್‌ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಜಾನುವಾರುಗಳಿಗೆ ಪೂರೈಕೆ ಮಾಡುವ ಆಹಾರ ಪದಾರ್ಥಗಳಲ್ಲಿ ಕಳಪೆಯಾಗಿದ್ದಲ್ಲಿ ಇಲಾಖೆಯಿಂದ ಪರೀಕ್ಷಿಸಲಾಗುವುದು. ಕಲಬೆರಿಕೆ ಪಶು ಆಹಾರಗಳನ್ನು ಪೂರೈಕೆ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಲಾಗುವುದು .ಜಾನುವಾರುಗಳಿಗೆ ಆಹಾರ ಪದಾರ್ಥಗಳನ್ನು ಪೂರ್ಯಕೆ ಮಾಡಲು ಇಲಾಖೆಯಿಂದ ಲೈಸನ್ಸ್‌ ಪಡೆಯುವುದು ಕಡ್ಡಾಯ. ಬಂಗಾರಪೇಟೆಯಲ್ಲಿ ಕಲ್ಲುಗಳನ್ನು ಬೆರಸಿ ಕಲಬೆರಕೆ ಮಾಡಿದ ಪಶು ಆಹಾರ ಮಾರಾಟ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು. 
   ಡಾ.ಟಿ.ಶಿವರಾಮ್‌ ಭಟ್‌, ಪಶು ಇಲಾಖಾ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next