Advertisement

ಆನೆ ಮೇಲೆ ಸಿಟ್ಟು ಕರಗಿ ಈಗ ಪ್ರೀತಿಯ ಮಳೆ!

11:12 PM May 14, 2019 | mahesh |

ಸುಬ್ರಹ್ಮಣ್ಯ: ಆನೆಯ ಕಾಟಕ್ಕೆ ಶಪಿಸುತ್ತಿದ್ದ ಬಾಳುಗೋಡು ಗ್ರಾಮಸ್ಥರು ಅದು ಗಾಯಗೊಂಡ ಮೇಲೆ ಹಾಗೂ ಬೇರೆ ಆನೆಗಳ ದಾಳಿಗೆ ತುತ್ತಾದ ಬಳಿಕ ಮನೆಯ ಸಾಕು ಪ್ರಾಣಿಯಂತೆ ಪ್ರೀತಿಸಲು ಆರಂಭಿಸಿದ್ದಾರೆ.

Advertisement

ಈ ಭಾಗದಲ್ಲಿ ಅತೀ ಹೆಚ್ಚು ಕೃಷಿ ಹಾನಿಯಾಗುತ್ತಿರುವುದು ಕಾಡು ಪ್ರಾಣಿಗಳ ಹಾವಳಿಯಿಂದ. ಕಾಡಾನೆಗಳ ಹಿಂಡು ತೋಟಕ್ಕೆ ದಾಳಿ ಇಟ್ಟರೆ ಫಸಲು ಕ್ಷಣಾರ್ಧದಲ್ಲಿ ನೆಲಸಮ. ಕೃಷಿಗೆ ತೊಂದರೆ ಕೊಡುತ್ತ ಜೀವಭಯ ಮೂಡಿಸುತ್ತಿದ್ದ ಕಾಡಾನೆ ಮೇಲೆ ಬಾಳುಗೋಡಿನ ಜನತೆಗೆ ಪ್ರೀತಿ ಬಂದಿದೆ. ಅದಕ್ಕೆ ಕಾರಣವೂ ಇದೆ.

ಬಾಳುಗೋಡು ಅರಣ್ಯದ ಅಂಚಿನಲ್ಲಿ ಕಾಡಾನೆಯೊಂದು ಅಲೆಯುತ್ತಿತ್ತು. ಅದು ತೋಟಕ್ಕೆ ನುಗ್ಗಿ, ಫ‌ಸಲು ನಾಶ ಮಾಡುತ್ತಿರಲಿಲ್ಲ. ಕಾಡಿನ ಅಂಚಿನಲ್ಲಿ ಸುತ್ತಾಡುತ್ತಿದ್ದ ಆನೆ ರೈತರ ಸುದ್ದಿಗೆ ಬಂದಿರಲಿಲ್ಲ. ದಿನಕಳೆದಂತೆ ಆನೆ ಕಾಡಿನೊಳಕ್ಕೆ ತೆರಳುವ ಅಂದಾಜಿನಲ್ಲಿ ಇರಲಿಲ್ಲ. ಕುತೂಹಲಗೊಂಡ ಸ್ಥಳೀಯರು ಆನೆ ಮೇಲೆ ಅನುಮಾನಪಟ್ಟರು, ಹಿಂಬಾಲಿಸಿದರು. ಈ ವೇಳೆ ಆನೆ ಗಾಯಗೊಂಡಿದ್ದು ಅವರಿಗೆ ಗೊತ್ತಾಯಿತು. ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅಧಿಕಾರಿಗಳು, ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಿದ್ದರು. ಮುಂಗಾಲಿಗೆ ಗಾಯಗೊಂಡಿದ್ದ ಆನೆ ಅತೀವ ನೋವು ಉಣ್ಣುತ್ತಿರುವುದನ್ನು ಕಂಡ ಜನರಿಗೆ ಅನುಕಂಪ ಉಕ್ಕಿ ಬಂದಿದೆ.

ಕಾಡಿನ ಆಹಾರ ಪೂರೈಕೆ
ನೋವಿನಿಂದ ಬಳಲುತ್ತಿದ್ದ ಆನೆಗೆ ಅಗತ್ಯವಿರುವ ಬೈನೆ ಆಹಾರವನ್ನು ಸ್ಥಳಿಯರೇ ಕಾಡಿಗೆ ಹೋಗಿ ಹೊರೆ ಕಟ್ಟಿ ತಂದು ಕೊಡುತ್ತಿದ್ದಾರೆ. ಕುಡಿಯಲು ನೀರು ಒದಗಿಸಿದ್ದಾರೆ. ವೈದ್ಯರಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಓಡಾಡಲು ಶುರು ಮಾಡುವ ಹಂತದಲ್ಲೇ ಮತ್ತೂಂದು ಕಾಡಾನೆ ಪುನಃ ದಾಳಿ ಮಾಡಿ, ತಿವಿದು ಗಾಯಗೊಳಿಸಿದೆ. ಸ್ಥಳೀಯರು ಸದ್ದು ಮಾಡಿ, ಪುಂಡಾನೆಯನ್ನು ಓಡಿಸಿದ್ದರು. ಗಾಯಗೊಂಡು ನಿತ್ರಾಣವಾಗಿರುವ ಆನೆ ಕಾಡಿಗೆ ಮರಳಲೂ ಅಂಜುತ್ತಿದ್ದು, ಸ್ಥಳೀ ಯರೇ ಗಮನವಿರಿಸಿ ಸಲಹುತ್ತಿದ್ದಾರೆ.

ಆನೆ ಜೀವ ಉಳಿಯಬೇಕು
ಮೂಕ ಪ್ರಾಣಿ ಆನೆ ಗಾಯಗೊಂಡು ನೋವು ಅನುಭವಿಸುತ್ತಿದೆ. ಬಳಲಿ ನಿತ್ರಾಣಗೊಂಡಿದೆ. ಅದಕ್ಕೆ ಆಹಾರದ ಕೊರತೆಯಾಗದಂತೆ ಐದು ದಿನಗಳಿಂದಲೂ ಮೇವು ನೀಡುತ್ತಿದ್ದೇವೆ. ಆನೆ ನಮ್ಮಂತೆಯೇ ಬದುಕಲು ಹವಣಿಸುತ್ತಿದೆ. ಅದರ ಪ್ರಾಣ ರಕ್ಷಣೆ ನಮ್ಮೆಲ್ಲರ ಹೊಣೆ. ಈ ಮೊದಲು ಕೃಷಿಗೆ ತೊಂದರೆ ನೀಡುತ್ತಿದ್ದರೂ ಆನೆಯ ಮೇಲೆ ಪ್ರೀತಿ ಹುಟ್ಟಿದೆ.
– ದೀಪಕ್‌ ಬಾಳುಗೋಡು, ಸ್ಥಳೀಯ ವಿದ್ಯಾರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next