ಮೆಲ್ಬರ್ನ್: ಮಂಗಳವಾರ ಎಂಸಿಜಿಯಲ್ಲಿ ಆರಂಭವಾಗಲಿರುವ “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ಬದಲಾಗದ ಆಡುವ ಬಳಗವನ್ನು ಪ್ರಕಟಿಸಿದೆ. ಪಾಕಿಸ್ಥಾನ 12 ಸದಸ್ಯರ ತಂಡವನ್ನು ಹೆಸರಿಸಿದ್ದು, ಕೀಪರ್ ಸ್ಥಾನಕ್ಕೆ ಮೊಹಮ್ಮದ್ ರಿಜ್ವಾನ್‌ಗೆ ಅವಕಾಶ ನೀಡಿದೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯ 360 ರನ್ನುಗಳ ಭಾರೀ ಅಂತರದಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಾಕಿಸ್ಥಾನ ಭಾರೀ ಒತ್ತಡದಲ್ಲಿದೆ.
ಆಸ್ಟ್ರೇಲಿಯ ತನ್ನ ಆಡುವ ತಂಡದಲ್ಲಿ ಯಾವುದೇ ಪರಿವರ್ತನೆ ಮಾಡಿಕೊಳ್ಳದ ಕಾರಣ ವೇಗಿ ಸ್ಕಾಟ್ ಬೋಲ್ಯಾಂಡ್ ತವರಿನ ಅಂಗಳದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. 2021-22ರ ಆ್ಯಶಸ್ ಸರಣಿಯ ವೇಳೆ ಇಲ್ಲಿಯೇ ಟೆಸ್ಟ್ ಪದಾರ್ಪಣೆ ಮಾಡಿದ್ದ ಬೋಲ್ಯಾಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 7 ರನ್ನಿಗೆ 6 ವಿಕೆಟ್ ಉಡಾಯಿಸಿ ಮೆರೆದಿದ್ದರು.
ಪಾಕಿಸ್ಥಾನದ ಪೇಸ್ ಬೌಲರ್ ಖುರ್ರಂ ಶಾಜಾದ್ ಗಾಯಾಳಾಗಿ ಸರಣಿಯಿಂದಲೇ ಬೇರ್ಪಟ್ಟಿದ್ದಾರೆ. ಇವರ ಬದಲು ಆಫ್ಸ್ಪಿನ್ನರ್ ಸಾಜಿದ್ ಖಾನ್ ಆಡಬಹುದು. ಹಾಗೆಯೇ ಪರ್ತ್‌ನಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ ಕೀಪರ್ ಸಫìರಾಜ್ ಖಾನ್ ಅವರನ್ನು ಕೈಬಿಡಲಾಗಿದೆ. ಈ ಸ್ಥಾನವನ್ನು ಮೊಹಮ್ಮದ್ ರಿಜ್ವಾನ್ ತುಂಬಲಿದ್ದಾರೆ. ಪರ್ತ್ ನಲ್ಲಿ ದುಬಾರಿಯಾಗಿದ್ದ ಫಾಹಿಮ್ ಅಶ್ರಫ್ ಅವರನ್ನೂ ಕೈಬಿಡಲಾಗಿದೆ. ಆದರೆ ಈ ಟೆಸ್ಟ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.
ಆಸ್ಟ್ರೇಲಿಯ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ನಥನ್ ಲಿಯಾನ್, ಜೋಶ್ ಹೇಝಲ್‌ವುಡ್.
ಪಾಕಿಸ್ಥಾನ 12ರ ಬಳಗ: ಇಮಾಮ್ ಉಲ್ ಹಕ್, ಅಬ್ದುಲ್ಲ ಶಫೀಕ್, ಶಾನ್ ಮಸೂದ್ (ನಾಯಕ), ಬಾಬರ್ ಆಜಂ, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಲಿ ಆಘಾ, ಶಾಹೀನ್ ಶಾ ಅಫ್ರಿದಿ, ಹಸನ್ ಅಲಿ, ಮಿರ್ ಹಮ್ಜಾ, ಆಮಿರ್ ಜಮಾಲ್, ಸಾಜಿದ್ ಖಾನ್.
ಪಾಕಿಸ್ಥಾನದಿಂದ ಕ್ರಿಸ್ಮಸ್ ಉಡುಗೊರೆ
ಆಸ್ಟ್ರೇಲಿಯದ ಆಟಗಾರರಿಗೆ ಕ್ರಿಸ್ಮಸ್ ಉಡುಗೊರೆ ನೀಡುವ ಮೂಲಕ ಪಾಕಿಸ್ಥಾನದ ಕ್ರಿಕೆಟಿಗರು ಸೌಹಾರ್ದತೆ ಮೆರೆದರು. “ಇದು ಮೆರ್ರಿ ಕ್ರಿಸ್ಮಸ್ ಗಿಫ್ಟ್. ಮಕ್ಕಳಿಗೆ ಲಾಲಿಪಪ್’ ಎಂದು ಪಾಕ್ ಕ್ರಿಕೆಟಿಗರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಆಸೀಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್, “ನಾವು ಪಾಕಿಸ್ಥಾನಿ ಕ್ರಿಕೆಟಿಗರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ’ ಎಂದರು.