ಕಾವೇರಿ ವಿಚಾರದಲ್ಲಿ ಪದೇ ಪದೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ನೆರೆಯ ತಮಿಳುನಾಡು ಸರಕಾರ ಮೇಕೆದಾಟು ವಿಚಾರದಲ್ಲಿಯೂ ಅದೇ ಪ್ರವೃತ್ತಿ ಮುಂದುವರಿಸಿದೆ. ಕಾವೇರಿ ನಿರ್ವಹಣ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ಗಳೆರಡರಲ್ಲಿಯೂ ತನ್ನ ಮೊಂಡುವಾದ ಮುಂದಿಡುತ್ತಲೇ, ರಾಜ್ಯದ ಯೋಜನೆಗಳಿಗೆ ವಿರೋಧಿಸುವ ಅದು, ತನ್ನ ಮೂಗಿನ ನೇರಕ್ಕೆ ಚಿಂತಿಸುವುದನ್ನು ಚಾಳಿ ಮಾಡಿಕೊಂಡಂತೆ ಕಾಣಿಸುತ್ತಿದೆ.
ಬುಧವಾರವಷ್ಟೇ ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡಿನ ಅರ್ಜಿ ವಿಚಾರಣೆ ನಡೆದಿದ್ದು, ಈ ಸಂದರ್ಭದಲ್ಲಿ ಶುಕ್ರವಾರದ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ನಡೆಸಲು ಅವಕಾಶ ನೀಡಲಾಗಿದೆ. ಅಲ್ಲದೆ, ಚರ್ಚೆಯನ್ನೇ ನಡೆಸಲು ಅವಕಾಶ ನೀಡಬಾರದು ಎಂಬ ಆ ರಾಜ್ಯದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿರುವುದು ಸ್ವಾಗತಾರ್ಹ. ಮುಂದಿನ ವಾರ ರಾಜ್ಯದ ಅರ್ಜಿಯ ವಿಚಾರಣೆ ಜತೆಗೆ ಅಂತಿಮ ವಿಚಾರಣೆಯೂ ನಡೆಯಲಿದ್ದು, ರಾಜ್ಯ ಸರಕಾರದ ವಕೀಲರು ಸಮರ್ಥ ವಾದ ಮಂಡಿಸಬೇಕಾಗಿದೆ.
ಮೇಕೆದಾಟು ಪ್ರಕರಣದಲ್ಲಿ ತಮಿಳುನಾಡಿನ ವಾದಗಳೇ ಸರಿಯಾಗಿಲ್ಲ ಎಂದು ತೋರುತ್ತದೆ. ಅಲ್ಲದೆ ರಾಜ್ಯದ ಡಿಪಿಆರ್ ಬಗ್ಗೆಯೂ ಚರ್ಚೆಗೆ ಸಿದ್ಧವಿಲ್ಲ ಎಂದಾದ ಮೇಲೆ, ಇದರ ಸಾಧಕ-ಬಾಧಕಗಳ ಅರಿವೂ ಅದಕ್ಕೆ ಬೇಕಾಗಿಲ್ಲ. ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧವಾಗಿದ್ದಿನಿಂದಲೂ ಕರ್ನಾಟಕವು ಈ ಯೋಜನೆಯಿಂದ ತಮಿಳುನಾಡು ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇದನ್ನು ಸಂಪೂರ್ಣವಾಗಿ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಸಂಬಂಧ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿಕೊಂಡು ಬರುತ್ತಲೇ ಇದೆ. ಆದರೆ ಈ ವಾದವನ್ನು ಒಪ್ಪದೇ ಹಿಂಬಾಗಿಲ ಮೂಲಕ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವುದು ಖೇದಕರ.
ಈ ಪ್ರಕರಣದಲ್ಲಿ ತಮಿಳುನಾಡು ಒಂದೇ ಆಯಾಮದಲ್ಲಿ ವಿರೋಧ ಮಾಡುತ್ತಿಲ್ಲ. ಅದು ಸುಪ್ರೀಂ ಮೂಲಕವೇ ಇಡೀ ಯೋಜನೆಗೆ ತಡೆಹಾಕುವ ಸರ್ವ ಪ್ರಯತ್ನವನ್ನೂ ಮಾಡುತ್ತಿದೆ. ಅಂದರೆ ತನ್ನ ಅರ್ಜಿಯಲ್ಲಿ ಅದು ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರಕ್ಕೆ ಈ ಬಗ್ಗೆ ಚರ್ಚಿಸುವ ಅಧಿಕಾರವೇ ಇಲ್ಲ ಎಂದು ಹೇಳುತ್ತಿದೆ. ಅಲ್ಲದೆ, ಕೇಂದ್ರ ಪರಿಸರ ಸಚಿವಾಲಯವೂ ಈ ಬಗ್ಗೆ ನಿರಪೇಕ್ಷಣ ಪತ್ರ ನೀಡಬಾರದು ಎಂದು ಸೂಚಿಸಿ ಎಂಬುದಾಗಿಯೂ ಸುಪ್ರೀಂಗೆ ಮನವಿ ಮಾಡಿದೆ. ಜತೆಗೆ ಇತಿಹಾಸದಿಂದಲೂ ಕೇಂದ್ರ ಸರಕಾರಗಳ ಮೇಲೆ ತನ್ನದೇ ಆದ ಪ್ರಭಾವ ಬಳಸಿಕೊಂಡು ಕಾವೇರಿ ನದಿ ನೀರಿನ ಬಗ್ಗೆ ಕರ್ನಾಟಕದ ಮೇಲೆ ಅನ್ಯಾಯ ಮಾಡಿಕೊಂಡು ಬರುತ್ತಲೇ ಇದೆ. ಈಗ ಮಂಗಳವಾರ ಮತ್ತೆ ಸುಪ್ರೀಂಕೋರ್ಟ್ ಮುಂದೆ ಕರ್ನಾಟಕದ ಅರ್ಜಿ ವಿಚಾರಣೆಗೆ ಬರಲಿದೆ. ಕರ್ನಾಟಕದ ಪರ ಶ್ಯಾಮ್ ದಿವಾನ್ ಅವರು ವಾದ ಮಂಡಿಸಲಿದ್ದು, ಕರ್ನಾಟಕ ಸರಕಾರವು ಸಮರ್ಥ ವಾದ ಮಂಡನೆಗಾಗಿ ಪೂರಕ ಮಾಹಿತಿಗಳನ್ನು ಒದಗಿಸಬೇಕು.
ಅಲ್ಲದೆ, ಶುಕ್ರವಾರದ ಸಭೆ ವೇಳೆಯೂ ರಾಜ್ಯದ ಅಧಿಕಾರಿಗಳು ಮೇಕೆದಾಟು ಯೋಜನೆ ಕುರಿತಂತೆ ಸಮರ್ಥವಾಗಿ ಚರ್ಚೆ ಮಂಡಿಸಬೇಕು. ಇಲ್ಲಿ ತಮಿಳುನಾಡಿನ ಅಧಿಕಾರಿಗಳು ಅಡ್ಡಿಪಡಿಸಿಯೇ ತೀರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅವರ ವಾದ ಮೇಲಾಗದಂತೆ ನೋಡಿಕೊಂಡು, ಕಾವೇರಿ ನಿರ್ವಹಣ ಪ್ರಾಧಿಕಾರದ ಅಧಿಕಾರದ ಬಗ್ಗೆ ವಿಸ್ತೃತವಾಗಿ ವಾದ ಮಂಡಿಸಬೇಕು.