ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡು ಜಗಳ ಮಾಡುವುದು ಬೇಡ ಎಂದು ನಾನು ವಿನಯಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮಿಳುನಾಡಿಗೆ ಮೇಲೆದಾಟು ಯೋಜನೆ ಸಂಬಂಧ ನಮ್ಮಲ್ಲಿನ ಕಾರ್ಯಯೋಜನೆ ರೂಪು-ರೇಷೆ ನೀಡಲು ಸಿದ್ಧ. ಇದನ್ನು ನಾನು ಕೇಂದ್ರ ಸಚಿವರ ಗಮನಕ್ಕು ತಂದಿದ್ದೇನೆ ಎಂದು ತಿಳಿಸಿದರು.
ಉಭಯ ರಾಜ್ಯಗಳು ಪರಸ್ಪರ ಸಹಕಾರ ಮತ್ತು ವಿಶ್ವಾಸದಿಂದ ಯೋಜನೆ ಜಾರಿಗೊಳಿಸಬೇಕು ಎಂಬುದು ನಮ್ಮ ಅಭಿಪ್ರಾಯ. ಸಮುದ್ರಕ್ಕೆ ಹರಿದು ಹೋಗುವ ನೀರು ಹಿಡಿದಿಟ್ಟುಕೊಳ್ಳಲು ಯೋಜನೆ ರೂಪಿಸಲಾಗಿದೆ. ಇದರಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಸ್ವಂತ ಹಣದಿಂದ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಕೇಂದ್ರ ಸರ್ಕಾರದ ಅನುಮತಿಯೂ ದೊರೆತಿದೆ. ತಮಿಳುನಾಡು ಸರ್ಕಾರ ಸುಪ್ರೀಂಕೊರ್ಟ್ ಮೊರೆ ಹೋಗಿದೆ ಎಂಬ ಮಾಹಿತಿಯಿದೆ. ಹೀಗಾಗಿ,ನಾನು ವಿನಯಪೂರ್ವಕವಾಗಿ ಮನವಿ ಮಾಡುತ್ತಿದ್ದೇನೆ. ತಮಿಳುನಾಡಿಗೆ ಆತಂಕ ಬೇಡ ಎಂದರು.
ಡಿಸೆಂಬರ್ 6 ರಂದು ಎಲ್ಲ ಮಾಜಿ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಹಾಗೂ ತಜ್ಞರ ಸಭೆ ಕರೆದಿದ್ದು ಅಲ್ಲಿ ಮೇಕೆದಾಟು ಯೋಜನೆ ಬಗ್ಗೆಯೂ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಹೇಳಿದರು.