ವಿಜಯಪುರ: ಮೇಕೆದಾಟು ಯೋಜನೆ ರಾಜ್ಯದ ಹಕ್ಕು, ತಮಿಳುನಾಡು ವಿರೋಧ ಮಾಡುವ ಕ್ರಮ ಸರಿಯಲ್ಲ ಎಂದು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನದಿಂದ ತಮಿಳುನಾಡು ರಾಜ್ಯಕ್ಕೆ ತೊಂದರೆ ಇಲ್ಲ, ಬದಲಾಗಿ ಭವಿಷ್ಯದಲ್ಲಿ ಅನುಕೂಲವೇ ಆಗಲಿದೆ. ಹೀಗಾಗಿ ಅಲ್ಲಿನ ರಾಜಕೀಯ ನಾಯಕರು ವಾಸ್ತವಿಕತೆ ಅರಿಯಬೇಕು ಎಂದರು.
ಇಷ್ಟಕ್ಕೂ ಸದರಿ ಯೋಜನೆ ನಮ್ಮ ರಾಜ್ಯದ ನೆಲದಲ್ಲಿ, ನಮ್ಮದೇ ಜಮೀನು ಮುಳುಗಡೆಯಿಂದ ರೂಪಿತ ಯೋಜನೆ. ರಾಜ್ಯದಲ್ಲಿ ವಿದ್ಯುತ ಉತ್ಪಾದನೆ ಬಳಿಕ ಸದರಿ ನೀರು ತಮಿಳುನಾಡಿಗೇ ಹರಿಯುತ್ತದೆ. ಇದರಿಂದ ಅವರಿಗೆ ಅನುಕೂಲ ಆಗಲಿದೆ ಎಂದರು.
ಇದನ್ನೂ ಓದಿ:ತಮಿಳುನಾಡು ನಿರ್ಧಾರದ ಬಗ್ಗೆ ಮಾತನಾಡಲ್ಲ, ನಾವು ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ: ಸಿಎಂ
ಇನ್ನು ಮೇಕೆದಾಟು ಯೋಜನೆ ಬೆಂಗಳೂರು ಹಾಗೂ ಕೆಲ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಸಹಕಾರಿ ಆಗಲಿದ್ದು, ರಾಜ್ಯದ ನೀರು ಬಳಕೆ ಆಗುತ್ತದೆ. ಹೀಗಿದ್ದರೂ ಅನಗತ್ಯವಾಗಿ ತಮಿಳುನಾಡು ಸರ್ಕಾರ ಹಾಗೂ ರಾಜಕೀಯ ನಾಯಕರು ವಿರೋಧಿಸುವ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರ ರಾಜ್ಯದ ಹಿತಕ್ಕಾಗಿ ಕೈಗೊಳ್ಳುವ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲ ಹಾಗೂ ಸಹಕಾರವಿದೆ. ಸರ್ವ ಪಕ್ಷದ ಸಭೆ ಕರೆದರೂ ರಾಜ್ಯದ ಹಿತಕ್ಕಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು