ಬೆಂಗಳೂರು: ಬೆಂಗಳೂರಿಗೆ ನೀರು ಕೊಡಲು ಮೇಕೆದಾಟು ಪಾದಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ನಲ್ಲಿ ನಾಯಕತ್ವ ಮೇಲಾಟದಿಂದ ಪಾದಯಾತ್ರೆಯಾಗುತ್ತಿದೆ. ಕೋವಿಡ್ ಜಾಸ್ತಿಯಾದರೆ ಅದು ಪಾದಯಾತ್ರೆಯಿಂದಲೇ ಎಂಬ ಎಚ್ಚರಿಕೆ ಕೊಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಹೋರಾಟಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ನಮ್ಮ ಸರ್ಕಾರ ಯೋಜನೆ ಜಾರಿಗೆ ಬದ್ಧವಾಗಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾನೂನು ಸಮಸ್ಯೆ ಬಗೆಹರಿಸಿಕೊಂಡು ಅನುಷ್ಠಾನ ಮಾಡಲಾಗುತ್ತದೆ. ನಾವು ಮಾಡುತ್ತೇವೆ ಅದು ನಮ್ಮ ಸರ್ಕಾರದ ಬದ್ಧತೆ ಎಂದರು.
ನಿಯಮ ಉಲ್ಲಂಘಿಸಿದರೆ ಅರೆಸ್ಟ್ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾನೂನು ಉಲ್ಲಂಘನೆ, ಕಾನೂನು ಜಾರಿ ಬಗ್ಗೆ ಎಲ್ಲವನ್ನೂ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ :ಪೊಲೀಸರ ವಿರುದ್ಧ ಘೋಷಣೆ, ರಸ್ತೆ ತಡೆ
ರಾಜ್ಯಪಾಲರಿಗೆ ಮನವಿ: ಪಂಜಾಬ್ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇವೆ. ಅಧಿಕಾರ ಇಲ್ಲದಿದ್ದಾಗ ಕಾಂಗ್ರೆಸ್ ಇಂತಹ ಅರಾಜಕತೆ ಸೃಷ್ಟಿ ಮಾಡುತ್ತದೆ. ದೇಶದಲ್ಲಿ ಪ್ರಧಾನಿ ಹುದ್ದೆ ಪಕ್ಷಕ್ಕೆ ಸೀಮಿತ ಅಲ್ಲ. ಪಂಜಾಬ್ ಸರ್ಕಾರ ವಿಫಲವಾಗಿದೆ ಹಾಗಾಗಿ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ರಾಲಿಯಲ್ಲಿ ಒಂದು ವೇಳೆ ಖಾಲಿ ಕುರ್ಚಿ ಇದ್ದರೂ ರಸ್ತೆಯಲ್ಲಿ ತಡೆಗಟ್ಟಿದ್ದು ಯಾಕೆ? ಖಾಲಿ ಕುರ್ಚಿ ಇರುತ್ತಿದ್ದರೆ ಪಕ್ಷ ನೋಡಿಕೊಳ್ಳುತ್ತಿತ್ತು. ರಾಜ್ಯ ಸರ್ಕಾರದ ಜವಾಬ್ದಾರಿ ಏನು? ಪಂಜಾಬ್ ನಲ್ಲಿ ಗುಪ್ತಚರ ಇಲಾಖೆ ಇಲ್ಲವೇ? ತನ್ನ ಮುಖ ಉಳಿಸಿಕೊಳ್ಳಲು ಪಂಜಾಬ್ ಸರ್ಕಾರ ಬೇರೆ ರೀತಿ ಹೇಳುತ್ತಿದೆ ಎಂದು ನಳಿನ್ ಕಟೀಲ್ ತಿರುಗೇಟು ನೀಡಿದರು.