ಗಯಾನಾ: ತವರಿನಾಚೆ ಅತೀ ದೊಡ್ಡ ಗೆಲುವು ದಾಖಲಿಸಿದ ಹೆಗ್ಗಳಿಕೆಯೊಂದಿಗೆ ಬಾಂಗ್ಲಾದೇಶ ತಂಡ ವೆಸ್ಟ್ ಇಂಡೀಸ್ ನೆಲದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.
ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ 2ನೇ ಮುಖಾಮುಖಿಯನ್ನು ಬಾಂಗ್ಲಾ ಪಡೆ 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ 35 ಓವರ್‌ಗಳಲ್ಲಿ ಕೇವಲ 108 ರನ್ನಿಗೆ ಕುಸಿಯಿತು. ಇದು ತವರಲ್ಲಿ ವಿಂಡೀಸ್ ದಾಖಲಿಸಿದ 2ನೇ ಅತೀ ಕಡಿಮೆ ಮೊತ್ತವಾಗಿದೆ. ಜವಾಬಿತ್ತ ಬಾಂಗ್ಲಾ 20.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 112 ರನ್ ಬಾರಿಸಿತು.
ಇದು ಭಾರತ-ಇಂಗ್ಲೆಂಡ್ ನಡುವಿನ ಮಂಗಳವಾರದ ಓವಲ್ ಮುಖಾಮುಖಿಯನ್ನು ನೆನಪಿಸಿತು! ಮಳೆಯಿಂದ ಅಡಚಣೆಗೊಳಗಾದ ಮೊದಲ ಪಂದ್ಯವನ್ನು ಬಾಂಗ್ಲಾದೇಶ 6 ವಿಕೆಟ್‌ಗಳಿಂದ ಜಯಿಸಿತ್ತು. ಅಂತಿಮ ಏಕದಿನ ಶನಿವಾರ ನಡೆಯಲಿದೆ.
ಬಾಂಗ್ಲಾ ಸ್ಪಿನ್ನಿಗೆ ವಿಂಡೀಸ್ ತತ್ತರಿಸಿತು. ಮೆಹಿದಿ ಹಸನ್ (29ಕ್ಕೆ 4) ಮತ್ತು ನಸುಮ್ ಅಹ್ಮದ್ (19ಕ್ಕೆ 3) ಸೇರಿಕೊಂಡು ವಿಕೆಟ್ ಬೇಟೆಯಾಡುತ್ತ ಹೋದರು. ಅಜೇಯ 25 ರನ್ ಮಾಡಿದ ಕೀಮೊ ಪೌಲ್ ಅವರದೇ ಹೆಚ್ಚಿನ ಗಳಿಕೆ. ಚೇಸಿಂಗ್ ವೇಳೆ ನಾಯಕ ತಮಿಮ್ ಇಕ್ಬಾಲ್ 50 ರನ್ ಮತ್ತು ಲಿಟನ್ ದಾಸ್ 32 ರನ್ ಮಾಡಿ ಅಜೇಯರಾಗಿ ಉಳಿದರು. ಉರುಳಿದ್ದು ನಜ್ಮುಲ್ ಹೊಸೇನ್ ವಿಕೆಟ್ ಮಾತ್ರ (20). ಇದು ಗುಡಕೇಶ್ ಮೋಟಿ ಪಾಲಾಯಿತು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-35 ಓವರ್‌ಗಳಲ್ಲಿ 108 (ಕೀಮೊ ಪೌಲ್ ಔಟಾಗದೆ 25, ಶೈ ಹೋಪ್ 18, ಕೈಲ್ ಮೇಯರ್ 17, ಮೆಹಿದಿ ಹಸನ್ 29ಕ್ಕೆ 4, ನಸುಮ್ ಅಹ್ಮದ್ 19ಕ್ಕೆ 3). ಬಾಂಗ್ಲಾದೇಶ-20.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 112 (ತಮಿಮ್ ಇಕ್ಬಾಲ್ ಔಟಾಗದೆ 50, ಲಿಟನ್ ದಾಸ್ ಔಟಾಗದೆ 32, ಗುಡಕೇಶ್ ಮೋಟಿ 39ಕ್ಕೆ 1).