ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ, ದೇಶದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಯಾವುದೇ ಆದ್ಯತೆ ಇಲ್ಲ ಎಂಬುದಾಗಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪುತ್ರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭಾರತ ಮುಸ್ಲಿಮರ ದೇಶವಲ್ಲ ಎಂಬ ಪೋಸ್ಟ್ ಅನ್ನು ಪಿಡಿಪಿ ಮುಖ್ಯಸ್ಥೆಯ ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ. ಆಗಸ್ಟ್ 5ರಿಂದ ಮೆಹಬೂಬ ಮುಫ್ತಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆಕೆಯ ಪುತ್ರಿ ಸನಾ ಇಲ್ಟಿಜಿಯ ಜಾವೇದ್ ತಾಯಿಯ ಟ್ವೀಟರ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರದ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಾಗರಿಕರಿಗೆ ಪೌರತ್ವ ನೀಡಲು ಮುಂದಾಗಿದೆ. ಆದರೆ ಅದರಲ್ಲಿ ಮುಸ್ಲಿಮರನ್ನು ಹೊರಗಿಡಲಾಗಿದೆ ಎಂದು ವಿಪಕ್ಷಗಳು ದೂರಿವೆ.
ಏತನ್ಮಧ್ಯೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸಮರ್ಥಿಸಿಕೊಂಡಿದ್ದು, ಸುತ್ತಮುತ್ತಲಿನ ನೆರೆಯ ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ನೆರವು ನೀಡಬೇಕಾಗಿರುವುದು ನಮ್ಮ ಹೊಣೆಗಾರಿಕೆ ಎಂದು ಹೇಳಿದೆ.
ಇದೇ ಮೊದಲ ಬಾರಿಗೆ ಮೆಹಬೂಬ ಅಥವಾ ಆಕೆಯ ಮಗಳು ಕೇಂದ್ರ ಸರ್ಕಾರವನ್ನು ದೂರಿದ್ದು, ಬಿಜೆಪಿ ನೇತೃತ್ವದ ಸರ್ಕಾರ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಭಾರತದಲ್ಲಿರುವ ಮುಸ್ಲಿಮ್ ಸಂಖ್ಯಾಬಾಹುಳ್ಯದ ರಾಜ್ಯದ ಭೌಗೋಳಿಕತೆಯನ್ನು ಬದಲಾಯಿಸಲು ಹೊರಟಿದೆ. ಈ ಮೂಲಕ ತಮ್ಮದೇ ರಾಜ್ಯದಲ್ಲಿ ಮುಸ್ಲಿಮರು ಎರಡನೇ ದರ್ಜೆಯ ನಾಗರಿಕರಾಗಬೇಕು ಎಂದು ಕೇಂದ್ರ ಬಯಸಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.