ಜಮ್ಮು: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುವ ಮುನ್ನ 2018ರ ಜನವರಿಯಿಂದ ಜೂನ್ ವರೆಗೆ ಆರು ತಿಂಗಳ ಕಾಲ ಮೆಹಬೂಬ ಮುಫ್ತಿ ಮುಖ್ಯಮಂತ್ರಿಯಾಗಿದ್ದಾಗ ಶ್ರೀನಗರದ ಗುಪ್ಕಾರ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸದ ನೂತನ ಪೀಠೋಪಕರಣ ಸೇರಿದಂತೆ ಮರು ವಿನ್ಯಾಸಕ್ಕಾಗಿ ಬರೋಬ್ಬರಿ 82 ಲಕ್ಷ ರೂಪಾಯಿ ಖರ್ಚು ಮಾಡಿರುವ ಅಂಶ ಆರ್ ಟಿಐ ಮೂಲಕ ಬಹಿರಂಗಗೊಂಡಿದೆ.
ಮುಖ್ಯಮಂತ್ರಿ ನಿವಾಸಕ್ಕೆ ವ್ಯಯಿಸಿದ ಹಣವನ್ನು ಭಾರತ ಸರ್ಕಾರ ಭರಿಸಿತ್ತು ಎಂದು ಆರ್ ಟಿಐಯಲ್ಲಿ ತಿಳಿದು ಬಂದಿದೆ. ಮುಫ್ತಿ ಅವರು 6 ತಿಂಗಳ ಕಾಲ ಸಿಎಂ ಆಗಿದ್ದಾಗ ಮಾಡಿದ ಖರ್ಚು ಎಷ್ಟು ಎಂಬ ಬಗ್ಗೆ ಜಮ್ಮು-ಕಾಶ್ಮೀರ ಮೂಲದ ಸಾಮಾಜಿಕ ಕಾರ್ಯಕರ್ತ ಇನಾಮ್ ಉನ್ ನಬಿ ಸೌದಾಗರ್ ಸಲ್ಲಿಸಿದ್ದ ಆರ್ ಟಿಐಗೆ ಈ ಉತ್ತರ ದೊರಕಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾನೂನು ಅಗತ್ಯವಿರಲಿಲ್ಲ; ಸಿದ್ದರಾಮಯ್ಯ ಹೇಳಿಕೆ ಅವರ ವೈಯಕ್ತಿಕ: ಡಿಕೆಶಿ
2018ರ ಜನವರಿಯಿಂದ ಜೂನ್ ವರೆಗೆ ಮುಫ್ತಿ, ಪೀಠೋಪಕರಣ, ಟಿವಿ ಸೇರಿದಂತೆ ಇತರ ವಸ್ತುಗಳ ಖರೀದಿಗಾಗಿ 82 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಅಷ್ಟೇ ಅಲ್ಲ 2018ರ ಮಾರ್ಚ್ 28ರಂದು ಒಂದೇ ದಿನ ವಿಶೇಷ ಜಮಖಾನೆ ಖರೀದಿಗಾಗಿ 28 ಲಕ್ಷ ರೂಪಾಯಿ ವ್ಯಯಿಸಿರುವುದಾಗಿ ಆರ್ ಟಿಐನಲ್ಲಿ ಬಯಲಾಗಿದೆ.
2018ರ ಜೂನ್ ತಿಂಗಳಿನಲ್ಲಿ ಎಲ್ ಇಡಿ ಟಿವಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಗಾಗಿ 25 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಗಾರ್ಡನ್ ಗೆ ಹಾಕುವ 2,94,314 ರೂ. ಮೌಲ್ಯದ ಕೊಡೆಗಳು ಸೇರಿದಂತೆ 2017ರ ಜನವರಿ 30ರಂದು 14 ಲಕ್ಷ ರೂಪಾಯಿ ಸಿಎಂ ನಿವಾಸಕ್ಕಾಗಿ ಖರ್ಚು ಮಾಡಲಾಗಿದೆ. ಇದರಲ್ಲಿ 2018ರ ಫೆಬ್ರುವರಿ 22ರಂದು 11,62,000 ಮೌಲ್ಯದ ಬೆಡ್ ಶೀಟ್ ಕೂಡಾ ಸೇರಿದೆ ಎಂದು ಐಎಎನ್ ಎಸ್ ವರದಿ ಮಾಡಿದೆ.