ದಿನೇಶ್ ಬಾಬು ನಿರ್ದೇಶನದ ಯಶಸ್ವಿ ಚಿತ್ರ “ಅಮೃತವರ್ಷಿಣಿ’ ಶೀರ್ಷಿಕೆ ಇಟ್ಟುಕೊಂಡು ಹೊಸ ಚಿತ್ರವೊಂದು ಶುರುವಾಗುತ್ತಿದೆ ಎಂಬ ಕುರಿತು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರಕ್ಕೆ ದಿನೇಶ್ ಬಾಬು ಅವರ ಶಿಷ್ಯ ಶಿವಪ್ರಭು ನಿರ್ದೇಶಕರು ಎಂಬುದೂ ಗೊತ್ತು. “ಅಮೃತ ವರ್ಷಿಣಿ’ ಚಿತ್ರಕ್ಕೆ ಯಶಸ್ ಸೂರ್ಯ ನಾಯಕನಾಗಿದ್ದು, ಆಗಿನ್ನೂ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ “ಅಮೃತವರ್ಷಿಣಿ’ಗೆ ಮೇಘಶ್ರೀ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಸಂಚಾರಿ ವಿಜಯ್ ಅಭಿನಯದ “ಕೃಷ್ಣ ತುಳಸಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು ಮೇಘಶ್ರೀ. ಎರಡು ವರ್ಷಗಳ ಹಿಂದೆ ಯೋಗಿ ಅಭಿನಯದ “ಕಾಲಭೈರವ’ ಚಿತ್ರ ನಿರ್ದೇಶಿಸಿದ್ದ ಶಿವಪ್ರಭು, ಈಗ ಹೊಸ ಕಥೆ ಹೆಣೆದು, ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಶಿವಪ್ರಭು ಇಲ್ಲಿ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಬರೆದು ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಎಲ್ಲಾ ಸರಿ, “ಅಮೃತ ವರ್ಷಿಣಿ’ ಶೀರ್ಷಿಕೆಯೇ ಯಾಕೆ ಎಂಬ ಪ್ರಶ್ನೆಗೆ, ಈ “ಅಮೃತ ವರ್ಷಿಣಿ’ಗೂ ಮೂಲ ಚಿತ್ರ “ಅಮೃತ ವರ್ಷಿಣಿ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ನಿರ್ದೇಶಕರ ಮಾತು.
ಬಹುತೇಕ ನಾಯಕಿ ಮೇಲೆಯೇ ಸಾಗುವ ಕಥೆಯಲ್ಲೊಂದು ತಿರುವು ಇದೆ. ಅದೇ ಚಿತ್ರದ ಹೈಲೆಟ್ ಎನ್ನುವ ನಿರ್ದೇಶಕ ಶಿವಪ್ರಭು, ಈ ಹಿಂದೆ ಮಡಿಕೇರಿಯ ಸಮೀಪ ಇರುವ ದೊಡ್ಡ ಮನೆಯೊಂದರಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸುವುದಾಗಿ ಹೇಳಿದ್ದೆ. ಆದರೆ, ಮಳೆ ಸುರಿದು ಎಲ್ಲವೂ ಕೊಚ್ಚಿ ಹೋಗಿರುವುದರಿಂದ ಅಂಥದ್ದೇ ಮನೆಯೊಂದನ್ನು ಹುಡುಕಿ, ಸಕಲೇಶಪುರ ಮತ್ತು ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಿಸುವುದಾಗಿ ಹೇಳುತ್ತಾರೆ ಶಿವಪ್ರಭು. ಅಂದಹಾಗೆ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸಭಾಕುಮಾರ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.
ಸದ್ಯ ನಿರ್ದೇಶಕ ಶಿವಪ್ರಭು ಅಕ್ಟೋಬರ್‌ನಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅವರೀಗ “ಅಮೃತವರ್ಷಿಣಿ’ ಜಪದಲ್ಲಿದ್ದು, ಆ ಚಿತ್ರದ ಬಳಿಕ “ಸುಪ್ರಭಾತ’ ಎಂಬ ಇನ್ನೊಂದು ಚಿತ್ರವನ್ನು ನಿರ್ದೇಶಿಸುವ ಯೋಚನೆ ಇಟ್ಟುಕೊಂಡಿದ್ದಾರೆ. ವಿಶೇಷವೆಂದರೆ, “ಸುಪ್ರಭಾತ’ ಚಿತ್ರವೂ ಸಹ ದಿನೇಶ್ ಬಾಬು ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ಅದೇನೆ ಇರಲಿ, ತಮ್ಮ ಗುರು ನಿರ್ದೇಶಿಸಿದ್ದ “ಅಮೃತವರ್ಷಿಣಿ’ ಚಿತ್ರದ ಹೆಸರನ್ನೇ ಮರು ಬಳಕೆ ಮಾಡಿಕೊಂಡು ಹೊಸಬಗೆಯ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ ನಿರ್ದೇಶಕರು.