Advertisement

ಕಾನೂನು ಸಮ ಸಮಾಜದ ಶಕ್ತಿ: ಬಸವಪ್ರಭು ಶ್ರೀ

04:49 PM Nov 04, 2021 | Team Udayavani |

ದಾವಣಗೆರೆ: ಪ್ರತಿಯೊಬ್ಬರು ಕಾನೂನು ಅರಿವು ಹೊಂದಿರಬೇಕು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

Advertisement

ಬುಧವಾರ ಸಂಜೆ ಶಿವಯೋಗಾಶ್ರಮದಲ್ಲಿ ಜನ ಸಾಮಾನ್ಯರಿಗಾಗಿ ಕಾನೂನು ಅರಿವು… ವಿಷಯ ಕುರಿತ ಶರಣ ಸಂಗಮದಲ್ಲಿ ಮಾತನಾಡಿದ ಆವರು, ಕಾನೂನು ಬಗ್ಗೆ ಮಾಹಿತಿ ಪಡೆಯುವುದು, ತಿಳಿಯುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ಯಾರಿಗೆ ಕಾನೂನಿನ ಬಗ್ಗೆ ಅರಿವು ಇರುತ್ತದೆಯೋ ಅವರು ಎಂದೆಂದಿಗೂ ಮೋಸ, ವಂಚನೆಗೆ ಒಳಗಾಗುವುದೇ ಇಲ್ಲ. ಮಾತ್ರವಲ್ಲ ಇತರರಿಗೂ ಮೋಸ, ವಂಚನೆ ಮಾಡಲಿಕ್ಕೆ ಹೋಗುವುದಿಲ್ಲ. ದೈನಂದಿನ ಚಟುವಟಿಕೆಗಳಿಗೆ ಅತ್ಯಗತ್ಯವಾದಷ್ಟು ಕಾನೂನು ಬಗ್ಗೆ ತಿಳಿವಳಿಕೆ ಹೊಂದಿರಬೇಕು ಎಂದು ಶ್ರೀಗಳು ತಿಳಿಸಿದರು. ಕಾನೂನು ಬಗ್ಗೆ ತಿಳಿದುಕೊಳ್ಳುವುದರಿಂದ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಜನ ಸಾಮಾನ್ಯರು ತುಂಬಾ ಮುಗ್ಧರು. ಅವರ ಮುಗ್ಧತೆಯನ್ನ ಅರಿತು ಬಲು ಬುದ್ಧಿವಂತರು ಮೋಸ ಮಾಡುವ ಸಾಧ್ಯತೆ ಇರುತ್ತದೆ. ನಯ ವಂಚಕರಿಂದ ಸದಾ ಜಾಗೃತವಾಗಿರಲು, ಯಾವುದೇ ರೀತಿಯ ವಂಚನೆಗೆ ಒಳಗಾಗದಿರಲು ಪ್ರತಿಯೊಬ್ಬರು ಕಾನೂನು ಬಗ್ಗೆ ತಿಳಿದುಕೊಳ್ಳಲೇಬೇಕು ಎಂದು ತಿಳಿಸಿದರು. ದೇಶದಲ್ಲಿ ಶಾಂತಿ ನೆಲೆಸಬೇಕಾದಲ್ಲಿ ಪ್ರತಿಯೊಬ್ಬರು ಈ ನೆಲದ ಕಾನೂನುಗಳನ್ನು ಪಾಲಿಸಬೇಕು. ಕಾನೂನು ಗಳು ತುಂಬಾ ಸರಳವಾಗಿವೆ. ಹಾಗಾಗಿ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು ಎಂದರು. ವಿಶ್ವದ ಮಹಾನ್‌ ದಾರ್ಶನಿಕ ಅಣ್ಣ ಬಸವಣ್ಣನವರು ಹೇಳುವಂತೆ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಇದಿರು ಹಳಿಯಲು ಬೇಡ… ಎಂಬ ಸಪ್ತಶೀಲಗಳನ್ನು ಪಾಲನೆ ಮಾಡಿದರೆ ದೇಶದ ಕಾನೂನು ಪಾಲಿಸಿದಂತೆ ಆಗುತ್ತದೆ. ನಮ್ಮ ದೇಶದ ಇಡೀ ಕಾನೂನುಗಳನ್ನು ಸಪ್ತಶೀಲದಲ್ಲೇ ಇವೆ ಎಂದು ತಿಳಿಸಿದರು.

ಪ್ರತಿಯೊಬ್ಬರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ರಸ್ತೆ ಸಂಚಾರ ನಿಯಮಗಳು ಒಳಗೊಂಡಂತೆ ಹಲವಾರು ಕಾನೂನುಗಳಿವೆ. ಅವುಗಳ ಪಾಲನೆ ಆಗಬೇಕು. ಕಾನೂನು, ನಿಯಮಗಳಿಂದಾಗಿಯೇ ದೇಶದ ಸರ್ವ ಜನರಿಗೂ ಸಾಮಾಜಿಕ ನ್ಯಾಯ ಸಿಗುತ್ತಿದೆ. ಕಾನೂನು ಸಮ ಸಮಾಜದ ಶಕ್ತಿ ಆಗಿದೆ ಎಂದು ತಿಳಿಸಿದರು. ನಗರ ಪೊಲೀಸ್‌ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ್‌ ಮಾತನಾಡಿ, ಎಂತದ್ದೇ ಸಂದರ್ಭದಲ್ಲಿ ಸಾರ್ವಜನಿಕರು 112ಗೆ ಕರೆ ಮಾಡಿದರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನೆರವು ನೀಡುತ್ತಾರೆ. ನಗರದ ಎಲ್ಲ ಕಡೆ ಸಿಸಿ ಟಿವಿ, ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಂಚಾರಿ ನಿಯಮಗಳ ಉಲ್ಲಂಘಿಸಿದವರಿಗೆ ಸೂಕ್ತ ಕ್ರಮಕ್ಕೆ ಅನುಕೂಲ ಆಗುತ್ತದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವ ಉದ್ದೇಶದಿಂದ ದುರ್ಗಾಪಡೆ ಕೆಲಸ ಮಾಡುತ್ತಿದೆ. ಮಹಿಳೆಯರು ಒಳಗೊಂಡಂತೆ ಎಲ್ಲರೂ ಸೈಬರ್‌ ಅಪರಾಧದ ಬಗ್ಗೆ ಜಾಗೃತ ವಹಿಸಬೇಕು ಎಂದು ಸಲಹೆ ನೀಡಿದರು. ಆರ್‌.ಎಲ್‌. ಕಾನೂನು ಕಾಲೇಜು ಪ್ರಾಚಾರ್ಯ ಡಾ| ಎಂ. ಸೋಮಶೇಖರ್‌, ಸಹಾಯಕ ಪ್ರಾಧ್ಯಾಪಕ ವಿದ್ಯಾಧರ ವೇದವರ್ಮ, ಕೆ. ಸಿದ್ದನಗೌಡ ಇತರರು ಇದ್ದರು. ಬಸವಕಲಾ ಲೋಕದ ವಚನ ಸಂಗೀತ ಹಾಡಿದರು. ಶರಣ ಬಸವ ಸ್ವಾಗತಿಸಿದರು. ರೋಷನ್‌ ನಿರೂಪಿಸಿ ದರು. ಕುಂಟೋಜಿ ಚನ್ನಪ್ಪ ಶರಣು ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next