ಶಿಲ್ಲಾಂಗ್: ವಧೆಗಾಗಿ ಜಾನುವಾರುಗಳ ಮಾರಾಟ ಹಾಗೂ ಖರೀದಿಗೆ ನಿರ್ಬಂಧ ಹೇರಿ ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆಯ ವಿರುದ್ಧ ಮೇಘಾಲಯ ವಿಧಾನಸಭೆ ಸೋಮವಾರ ನಿರ್ಣಯ ಅಂಗೀಕರಿಸಿದೆ. ಅಧಿಸೂಚನೆಯು ರಾಜ್ಯದ ಆರ್ಥಿಕತೆ ಮೇಲೆ ಹಾಗೂ ಜನರ ಆಹಾರದ ಅಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ, ಕೇಂದ್ರವು ಕೂಡಲೇ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ಪಕ್ಷಭೇದ ಮರೆತು ಎಲ್ಲ ರಾಜಕೀಯ ನಾಯಕರೂ ಈ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದಾರೆ. ಮೇಘಾಲಯದ ಶೇ.90ರಷ್ಟು ಮಂದಿ ಗೋಮಾಂಸ ಸೇವಿಸುತ್ತಿದ್ದು, ಅಧಿಸೂಚನೆಯು ಅವರ ಆಹಾರ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ಇಬ್ಬರು ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದರು. ಇನ್ನೊಂದೆಡೆ, ಅಧಿಸೂಚನೆ ಖಂಡಿಸಿ ಮಿಜೋರಾಂನಲ್ಲಿ ಸ್ಥಳೀಯರು ಸೋಮವಾರ ‘ಬೀಫ್ ಫೆಸ್ಟ್’ ಆಯೋಜಿಸಿದ್ದರು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮಿಜೋರಾಂ ಭೇಟಿ ದಿನವೇ ಇದನ್ನು ಹಮ್ಮಿಕೊಳ್ಳಲಾಗಿತ್ತು.