Advertisement

ಮೆಗಾಡೇರಿ ಆರಂಭಿಸಿದರೆ ಹಾಲಿನ ದರ ಹೆಚ್ಚಳ

02:34 PM Aug 09, 2018 | |

ಚಿಕ್ಕಬಳ್ಳಾಪುರ: ನಗರದ ಹೊರ ವಲಯದ ನಂದಿ ಕ್ರಾಸ್‌ನಲ್ಲಿ 165 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಮೆಗಾಡೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಬಳಿಕ ಹಾಲು ಉತ್ಪಾದಕರಿಗೆ ಸದ್ಯ ಕಡಿತಗೊಳಿಸಿರುವ ಹಾಲಿನ ದರವನ್ನು ಏರಿಕೆ ಮಾಡಲಾಗುವುದು ಎಂದು ಕೋಚಿಮುಲ್‌ ನಿದೇರ್ಶಕ ಕೆ.ವಿ.ನಾಗರಾಜ್‌ ಭರವಸೆ ನೀಡಿದರು.

Advertisement

ನಗರದ ಕೋಚಿಮುಲ್‌ ಉಪ ಶಿಬಿರ ಕಚೇರಿಯಲ್ಲಿ ಬುಧವಾರ ತಾಲೂಕಿನ ಒಕ್ಕೂಟದ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಹಾಗೂ ಒಕ್ಕೂಟಕ್ಕೆ ಹೊಸದಾಗಿ ಆಗಮಿಸಿರುವ ಅಧಿಕಾರಿಗಳಿಗೆ ನಡೆದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಕೋಚಿಮುಲ್‌ ಹಾಲು ಒಕ್ಕೂಟಕ್ಕೆ ನಿರೀಕ್ಷೆಗೂ ಮೀರಿ ಹಾಲು ಶೇಖರಣೆಯಾಗುತ್ತಿದೆ. ಇದರಿಂದ ಒಕ್ಕೂಟಕ್ಕೆ ಮಾರುಕಟ್ಟೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ತಾವು ದೂರದೃಷ್ಟಿ ಹೊಂದಿ ಚಿಕ್ಕಬಳ್ಳಾಪುರದ ನಂದಿ ಕ್ರಾಸ್‌ ಬಳಿ 165 ಕೋಟಿ ರೂ. ವೆಚ್ಚದಲ್ಲಿ ಮೆಗಾಡೇರಿ ಸ್ಥಾಪಿಸಲಾಗಿದೆ ಎಂದರು.

ಉತ್ಪನ್ನಕ್ಕೆ ಅಧುನಿಕ ತಂತ್ರಜ್ಞಾನ: ಡೇರಿಯಲ್ಲಿ 5 ಲಕ್ಷ ಲೀಟರ್‌ ಹಾಲನ್ನು ಸಂಸ್ಕರಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ಅಧುನಿಕ ತಂತ್ರಜ್ಞಾನವನ್ನು ಅಳವಡಿಸ ಲಾಗಿದೆ. ಮೆಗಾಡೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೆ ಒಕ್ಕೂಟದಲ್ಲಿ ಪ್ರತಿ ನಿತ್ಯ 5 ಲಕ್ಷ ಲೀಟರ್‌ ಹಾಲನ್ನು ಸಂಸ್ಕರಣೆ ಮಾಡಲು ಅನು ಕೂಲವಾಗುತ್ತದೆ. ಇದರಿಂದ ಬರುವ ಲಾಭವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು. ಮೆಗಾ ಡೇರಿ ಕಾರ್ಯಾರಂಭ ಮಾಡಿದ ನಂತರ ಹಾಲು ಉತ್ಪಾದಕರಿಗೆ ಈಗ ಕಡಿತ ಮಾಡಿರುವ ಬೆಲೆಗಿಂತ ಹೆಚ್ಚಿನ ದರ ನೀಡಲು ಕೋಚಿಮುಲ್‌ ಬದ್ಧವಾಗಿದೆ
ಎಂದು ತಿಳಿಸಿದರು.

ಯಶಸ್ವಿನಿ ಯೋಜನೆ ಕಡಿತಕ್ಕೆ ಆಕ್ಷೇಪ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿದ್ದ ಯಶಸ್ವಿನಿ ಯೋಜನೆಯನ್ನು ಕಡಿತಗೊಳಿಸಿದ್ದಾರೆ. ಯಶಸ್ವಿನಿ ಯೋಜನೆ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಾಕಷ್ಟು ಅನುಕೂಲ ಕಲ್ಪಿಸಿತ್ತು. ಆದರೆ ಇದೀಗ ಮೈತ್ರಿ ಸರ್ಕಾರ ಆರೋಗ್ಯ ಕಾರ್ಡ್‌ ವಿತರಿಸುವುದಾಗಿ ಹೇಳಿ ಯಶಸ್ವಿನಿ ಯೋಜನೆಯನ್ನು ರದ್ದು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗುಣಮಟcದಲ್ಲಿ ಚಿಕ್ಕಬಳ್ಳಾಪುರ ಪ್ರಥಮ: ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕು ಹಾಲಿನ ಗುಣಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದೆ. ಜತೆಗೆ ರಾಸುಗಳ ವಿಮೆ ನೋಂದಣಿಯಲ್ಲೂ ಚಿಕ್ಕಬಳ್ಳಾಪುರ ತಾಲೂಕು ಪ್ರಥಮ ಸ್ಥಾನದಲ್ಲಿದೆ. ತಾಲೂಕಿನ ರೈತರ ಅನುಕೂಲಕ್ಕೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕೋಚಿಮುಲ್‌ ವತಿಯಿಂದ ಶುದ್ಧ ನೀರಿನ ಘಟಕ ಸ್ಥಾಪಿಸಲಾಗುತ್ತಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. 

Advertisement

ಒಕ್ಕೂಟದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ನಿಷ್ಟೆ, ಪ್ರಾಮಾಣಿಕತೆ ಅಗತ್ಯ. ಇವರೆಡು ಇದ್ದವರು ಎಲ್ಲಿ ಹೋದರೂ ಗೌರವ ಸಿಗುತ್ತದೆ. ತಾಲೂಕಿನಲ್ಲಿ ಕೆಲ ವರ್ಷಗಳಿಂದ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದರಿಂದ ತಾಲೂಕು ಒಕ್ಕೂಟ ಇಡೀ ಅವಿಭಜಿತ ಜಿಲ್ಲೆಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಬೀಳ್ಕೊಡುಗೆ, ಸ್ವಾಗತ: ಕಾರ್ಯಕ್ರಮದಲ್ಲಿ ಕೋಚಿಮುಲ್‌ ಉಪ ಶಿಬಿರ ಕಚೇರಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ಕೆ.ಜಿ.ಈಶ್ವರಯ್ಯ, ವಿಸ್ತರಣಾಧಿಕಾರಿಗಳಾದ ಎನ್‌.ಜಿ.ಜಯಚಂದ್ರ, ಎಸ್‌.ಎನ್‌.ರಮೇಶ್‌ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಅದೇ ರೀತಿ ಶಿಬಿರ ಕಚೇರಿ ಉಪ ವ್ಯವಸ್ಥಾಪಕರಾಗಿ ಆಗಮಿಸಿದ ಡಾ.ಪಾಪೇಗೌಡ, ವಿಸ್ತರಣಾಧಿಕಾರಿಗಳಾದ ನವೀನ್‌ ಚಂದ್ರ, ಎಂ.ಜಿ.ವೇಣು,
ಎಂ.ಪ್ರಭಾಕರ್‌, ಎಸ್‌.ಸತ್ಯನಾರಾಯಣ ಅವರನ್ನು ಸನ್ಮಾನಿಸಿ ಸ್ವಾಗತ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸರ್‌ಎಂ ವಿಶ್ವೇಶ್ವರಯ್ಯ ಎಂಪಿಸಿಎಸ್‌ ಹಾಲು ಉತ್ಪಾದಹಕರ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೆಡ್ಡಿ, ಸಂಘದ ಜಿ.ಬಿ.ನಾರಾಯಣಸ್ವಾಮಿ, ವೆಂಕಟೇಶ್‌, ಜಿ.ಎಂ. ವೇಣುಗೋಪಾಲ್‌, ದೇವರಾಜ್‌ ಉಪಸ್ಥಿತರಿದ್ದರು. 

ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಲಾಭಗಳಿಸುವ ವ್ಯಾಪಾರದ ಮನೋಭಾವ ಇಲ್ಲ. ಹಾಲು ಉತ್ಪಾದಕರ ಹಿತಕ್ಕಿಂತ ನಮಗೆ ಬೇರೊಂದಿಲ್ಲ. ಸದ್ಯ ಆರ್ಥಿಕ ನಷ್ಟದಲ್ಲಿರುವುದರಿಂದ ಹಾಲಿನ ದರ ಕಡಿತಗೊಳಿಸಲಾಗಿದೆ. ಮೆಗಾಡೇರಿ ಕಾರ್ಯಾರಂಭ ನಂತರ ಕಡಿತಗೊಳಿಸಿರುವ ದರಕ್ಕಿಂತ ಹೆಚ್ಚಿನ ಬೆಲೆ ಕೊಡಲು ಕೋಚಿಮುಲ್‌ ಸಿದ್ಧವಾಗಿದೆ. ಕೋಚಿಮುಲ್‌ ಗೆ ಬಂದ ಲಾಭದಲ್ಲಿ ಕೈಗೊಳ್ಳುತ್ತಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇವಾ ಕಾರ್ಯಕ್ರಮಗಳೇ ಇದಕ್ಕೆ ನಿರ್ದಶನ.
 ಕೆ.ವಿ.ನಾಗರಾಜ್‌, ಕೋಚಿಮುಲ್‌ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next