ಮೂಡುಬಿದಿರೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಕೊರೊನಾ ಮೆಗಾ ವ್ಯಾಕ್ಸೀನ್ ಡ್ರೈವ್ ಗೆ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿರುವಂತೆ ಕೋವಿಡ್ ಹಿಮ್ಮೆಟ್ಟಿಸಲು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಪ್ರಕ್ರಿಯೆ ಜು. 21ರಿಂದ ನಡೆಯುತ್ತಲಿದೆ. ಖಾಸಗಿಯಾಗಿ ರೂ. 150 ಶುಲ್ಕದಲ್ಲೂ ಈ ಲಸಿಕೆ ಪಡೆದುಕೊಳ್ಳಬಹುದು. ಎಲ್ಲರೂ ಈ ಲಸಿಕೆ ಪಡೆದು ಭಾರತವನ್ನು ಕೊರೊನ ಮುಕ್ತ ದೇಶವಾಗಿಸುವಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕಿದೆ ಎಂದು ಅವರು ಈ ವೇಳೆ ಕರೆ ನೀಡಿದರು.
ತಹಶೀಲ್ದಾರ್ ಪುಟ್ಟರಾಜು, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಸಮುದಾಯ ಆರೋಗ್ಯಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ,ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಎಂ. ಬಾಹುಬಲಿಪ್ರಸಾದ್, ಗೀತಾ ಆಚಾರ್ಯ, ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ, ಪ್ರಮುಖರಾದ ಹರೀಶ್ ಎಂ.ಕೆ, ಗಿರೀಶ್ ಕುಮಾರ್ ಮೊದಲಾದವರಿದ್ದರು.
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪೂರೈಕೆಯಾಗಿರುವ ಒಂದು ಸಾವಿರ ಲಸಿಕೆಗಳ ಪೈಕಿ 500ನ್ನು ಇಲ್ಲೇ ನೀಡುತ್ತಿದ್ದು, ಉಳಿದಂತೆ ವಿಶಾಲ್ ನಗರ ಅಂಗನವಾಡಿ ಹಾಗೂ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದಲ್ಲಿ ಜನರಿಗೆ ನೀಡಲಾಗುವುದು ಎಂದು ಡಾ. ಶಶಿಕಲಾ ತಿಳಿಸಿದರು.