ದಾಂಡೇಲಿ : ನಗರದ ಸಿವಿಲ್ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಶನಿವಾರ ಬೆಳಿಗ್ಗೆ ಚಾಲನೆಯನ್ನು ನೀಡಲಾಯಿತು.
ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣಕುಮಾರ್.ಆರ್.ಜೆ.ಎಸ್ ಅವರು ಲೋಕ್ ಅದಾಲತಿಗೆ ಚಾಲನೆ ನೀಡಿ, ಇಂದು ರಾಜ್ಯದಾದ್ಯಂತ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಬಾಕಿಯಿರುವ ಪ್ರಕರಣಗಳು ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ಹಾಗೂ ಸರಕಾರಿ ಮತ್ತು ಖಾಸಗಿ ಬ್ಯಾಂಕ್, ಸಹಕಾರಿ ಸಂಘ, ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಇರುವಂತಹ ಪ್ರಕರಣಗಳನ್ನು ಇತ್ಯರ್ಥ್ಯಪಡಿಸಲು ಲೋಕ್ ಅದಾಲತ್ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಸರಕಾರಿ ಅಭಿಯೋಜಕರಾದ ಹುಸೇನಸಾಬ ನದಾಫ್ ಹಾಗೂ ಸಂಧಾನಕಾರರಾಗಿ ನ್ಯಾಯವಾದಿ ಮಮ್ತಾಜ್ ಶೇಖ ಅವರು ಕರ್ತವ್ಯ ನಿರ್ವಹಿಸಿದರು. ಲೋಕ್ ಅದಾಲತ್ ಯಶಸ್ಸಿಗಾಗಿ ನಗರದ ವಕೀಲರುಗಳು, ಸಿವಿಲ್ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸರು ಸಹಕರಿಸುತ್ತಿದ್ದಾರೆ. ರಾಜಿ ಸಂಧಾನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಜನರು ಲೋಕ್ ಅದಾಲತ್ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು ಆಗಮಿಸಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ನಗರದ ವಕೀಲರ ಸಂಘದ ಅಧ್ಯಕ್ಷ ವಿ.ಆರ್.ಹೆಗಡೆ, ಕಾರ್ಯದರ್ಶಿ ವಿಶ್ವನಾಥ ಲಕ್ಷ್ಯಟ್ಟಿ, ವಕೀಲರುಗಳಾದ ಎಂ.ಸಿ.ಹೆಗಡೆ, ಎಚ್.ಎಸ್.ಕುಲಕರ್ಣಿ, ಎಸ್.ಎಂ.ದಬಗಾರ, ಎಸ್.ಸೋಮಕುಮಾರ್, ವಿಶ್ವನಾಥ ಜಾಧವ, ಐ.ಸಿ.ನಾಯ್ಕ, ಸುನೀಲ ದೇಸಾಯಿ, ಫೀರ್ ಸಾಬ ನದಾಫ್, ಎಂ.ಎ.ಶೇಖ, ಸೋಮಶೇಖರ ಶಿರಗುಪ್ಪಿ, ಅನಿತಾ ಸೋಮಕುಮಾರ್, ಶೈಲಾ ನಾಮಧಾರಿ, ಕವಿತಾ ಗಡೆಪ್ಪನವರ, ಸುಮಿತ್ರಾ.ಕೆ, ರೂಪಾ ಕೇರವಾಡಕರ, ರತ್ನಾದೀಪ, ಅಕ್ಷಯ್ ಘಟಕಾಂಬಳೆ, ನಾಗರಾಜ ಮೊದಲಾದವರು ಹಾಗೂ ನಗರದ ವಿವಿಧ ಸರಕಾರಿ, ಖಾಸಗಿ ಬ್ಯಾಂಕ್, ಸಹಕಾರಿ ಸಂಘಗಳ ವ್ಯವಸ್ಥಾಪಕರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ದಾಂಡೇಲಿ ಸಿವಿಲ್ ನ್ಯಾಯಾಲಯದಲ್ಲಿ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ :
ನಗರದ ಸಿವಿಲ್ ನ್ಯಾಯಾಲಯವು ಇಂದು ಐತಿಹಾಸಿಕ ದಾಖಲೆಗೆ ಸಾಕ್ಷಿಯಾಯಿತು. ಮೆಗಾ ಲೋಕ್ ಅದಾಲತಿನಲ್ಲಿ ಒಟ್ಟು 1501 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಂತಿಮವಾಗಿ 1360 ಪ್ರಕರಣಗಳನ್ನು ಇತ್ಯರ್ಥ್ಯ ಪಡಿಸುವುದರ ಮೂಲಕ ಮೂಲಕ ನಗರದ ಸಿವಿಲ್ ನ್ಯಾಯಾಲಯ ಹೊಸ ಮೈಲಿಗಲ್ಲನ್ನು ಸಾಧಿಸಿ ಗಮನ ಸೆಳೆಯಿತು. ಒಟ್ಟು ರೂ:3,25,079/- ನ್ನು ದಂಡ ಆಕರಣೆ ಮಾಡಲಾಯಿತು. ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣಕುಮಾರ್.ಆರ್.ಜೆ.ಎಸ್ ಅವರ ನೇತೃತ್ವದಲ್ಲಿ ನಡೆದ ಮೆಗಾ ಲೋಕ್ ಅದಾಲತ್ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಯಿತು. ಕಳೆದ ಎರಡು ವರ್ಷಗಳಿಂದ ಸಿವಿಲ್ ನ್ಯಾಯಾಲಯದಲ್ಲಿ ಅತ್ಯಂತ ತ್ವರಿತಗತಿಯಲ್ಲಿ ಪ್ರಕರಣಗಳು ಇತ್ಯರ್ಥ್ಯವಾಗುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.