Advertisement

ನವೋದ್ಯಮಿಗಳಿಗೆ ಮೆಗಾ ಉತ್ಸವ ವೇದಿಕೆ

11:42 AM Oct 19, 2019 | Suhan S |

ಹುಬ್ಬಳ್ಳಿ: ಒಂದೇ ಸೂರಿನಡಿ ಬಟ್ಟೆ, ಯಂತ್ರಗಳು, ಬೆಳ್ಳಿ ಸಾಮಗ್ರಿಗಳು, ಸಿಹಿ ತಿನಿಸುಗಳು ಬೇಕೆ? ಹಾಗಿದ್ದಲ್ಲಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನಕ್ಕೆ ಬನ್ನಿ.

Advertisement

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ದೇಶಪಾಂಡೆ ಫೌಂಡೇಶನ್‌ ಆಶ್ರಯದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ನವೋದ್ಯಮಿ ಮೆಗಾ ಉತ್ಸವ ಆಯೋಜಿಸಲಾಗಿದೆ.

ಇದರಲ್ಲಿ ವಿವಿಧ ಜಿಲ್ಲೆಯಿಂದ ಆಗಮಿಸಿರುವ ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ಅಣಿಗೊಳಿಸಿದ್ದಾರೆ. ಹಾಸನ, ಶಿವಮೊಗ್ಗ, ಗಂಗಾವತಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಾಪಾರಸ್ಥರು ಆಗಮಿಸಿದ್ದಾರೆ.

ವಿಶೇಷವಾಗಿ ಮನೆಯಲ್ಲಿಯೇ ಶುದ್ಧವಾದ ಎಣ್ಣೆ ತಯಾರಿಸುವ ಯಂತ್ರ, ತರಕಾರಿ ಸಂಸ್ಕರಣೆ ಮಾಡುವ ಯಂತ್ರಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಈ ಯಂತ್ರದ ಮೂಲಕ ಮನೆಯಲ್ಲಿ ಬೇಕಾದ ಬೀಜಗಳ ಎಣ್ಣೆಯನ್ನು ತಯಾರಿಸಿಕೊಳ್ಳುವ ಮೂಲಕ ಶುದ್ಧತೆಗೆ ಆದ್ಯತೆ ನೀಡಬಹುದು.

ತರಕಾರಿ ಹಾಗೂ ಹಣ್ಣು-ಹಂಪಲ ಶುದ್ಧೀಕರಣ ಯಂತ್ರದ ಮೂಲಕ ತರಕಾರಿಗಳಿಗೆ ಅಂಟಿಕೊಂಡಿರುವ ಕ್ರಿಮಿನಾಶಕ-ಬ್ಯಾಕ್ಟಿರಿಯಾಗಳನ್ನು ಸ್ವತ್ಛಗೊಳಿಸಬಹುದು ಎಂದು ಪೋರ್ಟೆಬಲ್‌ ಹೋಮ್‌ ಯೂಸ್‌ ಕೋಲ್ಡ್‌ಪ್ರಸ್‌ ಆಯಿಲ್‌ ಪ್ರಸ್‌ ಯಂತ್ರದ ಕುರಿತು ಡಾ| ನಾಗರಾಜ ಮಾಹಿತಿ ನೀಡುತ್ತಾರೆ.

Advertisement

ದೀಪಾವಳಿ ಸಮೀಪಿಸುತ್ತಿದ್ದು, ಮನೆಯ ಅಲಂಕಾರಕ್ಕೆ ಬೇಕಾಗುವ ಮಣ್ಣಿನ ವಿವಿಧ ಬಗೆಯ ಹಣತೆಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಮ್ಯಾಜಿಕ್‌ ಲ್ಯಾಂಪ್‌, ಗಣೇಶ ದೀಪ, ಮಣ್ಣಿನ ಗ್ಲಾಸ್‌, ಐದು ದೀಪಗಳ ಸೆಟ್‌, ಬೋಟ್‌ ಗಣೇಶ ಸೇರಿದಂತೆ ದೀಪಾವಳಿ ಹಬ್ಬಕ್ಕೆ ಬೇಕಾಗುವ ವಿವಿಧ ಬಗೆಯ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಈ ಹಣತೆಗಳ ದರ 50 ರೂ.ಗಳಿಂದ ಹಿಡಿದು 200ರ ವರೆಗೂ ಇದೆ ಎಂದು ಧನ್ಯ ಟೆರ್ರಾಕೋಟ್‌ನ ಮುಖ್ಯಸ್ಥ ಎಸ್‌.ಬಿ. ಹಾಲೇಶ ಹೇಳುತ್ತಾರೆ.

ಪ್ಲಾಸ್ಟಿಕ್‌ ನಿಷೇಧಿಸಿರುವ ಹಿನ್ನೆಲೆಯಲ್ಲಿ ಬಟ್ಟೆಯ ಬ್ಯಾಗ್‌ ಗಳು ಹೆಚ್ಚಿನ ಪ್ರಚಾರ ಪಡೆಯುತ್ತಿವೆ. ಹಲವು ಮಳಿಗೆದಾರರು ಪ್ಲಾಸ್ಟಿಕ್‌ ಬದಲಾಗಿ ಬಟ್ಟೆಯ ಬ್ಯಾಗ್‌ಗಳನ್ನು ಮಾರಾಟ ಹಾಗೂ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಗೋಕಾಕ ಕರದಂಟು, ಐನಾಪುರ ಬಾಳು ಮಾಮಾ ಪೇಡೆ, ಬಿದಿರಿನ ವಸ್ತುಗಳು, ವಿವಿಧ ಬಗೆ ಬಟ್ಟೆಗಳು, ಮಹಿಳೆಯರಿಗಾಗಿ ವಿಶೇಷ ಜ್ಯುವೆಲರಿ ಸಾಮಗ್ರಿಗಳು, ನೋವು ನಿವಾರಕ ತೈಲಗಳು, ಗೃಹೋಪಯೋಗಿ ವಸ್ತುಗಳು ಗಮನ ಸೆಳೆಯುತ್ತಿವೆ. ಶುಕ್ರವಾರದಿಂದ ಆರಂಭಗೊಂಡಿರುವ ಮೆಗಾ ಉತ್ಸವ ನಾಲ್ಕು ದಿನಗಳವರೆಗೆ ನಡೆಯಲಿದ್ದು, ಕೆಲ ಸಾಮಗ್ರಿಗಳಿಗೆ ವಿಶೇಷ ರಿಯಾಯಿತಿ ಸಹ ನೀಡಲಾಗುತ್ತಿದೆ.

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next