ಶನಿವಾರಸಂತೆ: ಶನಿವಾರಸಂತೆ ಗ್ರಾ.ಪಂ.ಆಡಳಿತ ಮಂಡಳಿಯ ಮಾಸಿಕ ಸಾಮಾನ್ಯ ಸಭೆ ಗ್ರಾ.ಪಂ.ಅಧ್ಯಕ್ಷ ಮಹಮದ್‌ಗೌಸ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ನಡೆಯಿತು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸದರಿ ಗ್ರಾ.ಪಂ.ಯು ಯಾವುದೆ ರೀತಿಯಲ್ಲಿ ಅಭಿವೃದ್ದಿಯಾಗದಿರುವುದು ಮತ್ತು ಗ್ರಾ.ಪಂ.ಅಧ್ಯಕ್ಷರ ಕಾರ್ಯವೈಕರ್ಯಗಳಲ್ಲಿ ವೈಫಲ್ಯ ಬಗ್ಗೆ ಅಧ್ಯಕ್ಷರ ವಿರುದ್ದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಮೂಲ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಿದ್ದರೂ ಕೆಲವು ವಾರ್ಡ್‌ಗಳಲ್ಲಿ ಕುಡಿಯುವನೀರು ಸರಬರಾಜು ಮಾಡಲು ಅಳವಡಿಸುವ ಕೊಳವೆ ಒಡೆದುಹೋಗುವ ಸಂದರ್ಭದಲ್ಲಿ ಅದನ್ನು ದುರಸ್ಥಿ ಪಡಿಸಲು ವಿಫಲವಾಗಿರುವುದ್ದರಿಂದ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಜನರಿಗೆ ತೊಂದರೆಯಾಗುತ್ತಿದೆ ಕೆಲವು ವಾರ್ಡ್ ಬೀದಿಗಳಲ್ಲಿ ಕೆಟ್ಟುಹೋದ ಬೀದಿದೀಪಗಳನ್ನು ಹೊಸದಾಗಿ ಅಳವಡಿಸುತ್ತಿಲ್ಲ ಸದಸ್ಯರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯೆ ಆದಿತ್ಯ ಅಸಮಾಧಾನ ವ್ಯಕ್ತಪಡಿಸಿದರು ಇದಕ್ಕೆ ಸದಸ್ಯರು ಧ್ವನಿಗೂಡಿಸಿದರು.
ಗುಂಡೂರಾವ್ ಬಡಾವಣೆ ಮತ್ತು ಸಂತೆ ಮಾರುಕಟ್ಟೆ ಬೀದಿಯಲ್ಲಿ ಸಮರ್ಪಕವಾಗಿ ಕಸವಿಲೇವಾರಿಯಾಗುತ್ತಿಲ್ಲ, ಇಲ್ಲಿನ ರಸ್ತೆ ಬದಿಯ ಚರಂಡಿಯನ್ನು ದುರಸ್ಥಿಗೊಳಿಸದೆ ಬಹಳ ದಿನಗಳೆ ಕಳೆದುಹೋಗಿದೆ, ಚರಂಡಿಯಲ್ಲಿ ಪೊದೆಗಳು ಬೆಳೆದು ಚರಂಡಿ ಮುಚ್ಚಿಹೋಗುತ್ತಿದೆ ಎಂದು ವಾರ್ಡ್ ಸದಸ್ಯ ಸರ್ದಾರ್ ಆಹಮದ್ ಅಸಮಾಧಾನ ವ್ಯಕ್ತ ಪಡಿಸಿದಾಗ ಇದಕ್ಕೆ ಉತ್ತರಿಸಿದ ಅಧ್ಯಕ್ಷ ಮಹಮದ್‌ಗೌಸ್ ಗುಂಡೂರಾವ್ ಬಡಾವಣೆ ಮತ್ತು ಸಂತೆ ಮಾರುಕಟ್ಟೆ ಸ್ಥಳದಲ್ಲಿ ನಾಲ್ಕು ರಸ್ತೆಗಳಿರುವುದ್ದರಿಂದ ಹೊಸದಾಗಿ ಸೀಮೆಂಟ್ ಕಾಂಕ್ರೀಟ್ ಚರಂಡಿ ವ್ಯವಸ್ಥೆ ಮಾಡುವ ಸಲುವಾಗಿ ಇದರ ಕಾಮಗಾರಿಗಾಗಿ ತಕ್ಷಣ ಕ್ರಿಯಾಯೋಜನೆ ರೂಪಿಸೋಣ ಎಂದು ಉತ್ತರಿಸಿದರು.
ಸದರಿ ಗ್ರಾ.ಪಂ.ಗೆ ಹಸಿಮೀನು ಮಾರುಕಟ್ಟೆ ಮಳಿಗೆ ಹರಾಜಿನಿಂದ 8 ಲಕ್ಷ ರು ಕ್ಕಿಂತ ಹೆಚ್ಚಿನ ಆದಾಯ ಬರುತ್ತಿದೆ ಕಳೆದ ತಿಂಗಳ ಮಾಸಿಕ ಸಭೆಯಲ್ಲಿ ಬಾಕಿಯಾಗಿದ್ದ ಹಸಿಮೀನು ಮಾರುಕಟ್ಟೆ ಮಳಿಗೆ ಹರಾಜು ಪ್ರಕ್ರಿಯೆ ನಡೆಸುವಂತೆ ತೀರ್ಮಾನಿಸಲಾಗಿತು ಆದರೆ ಅಧ್ಯಕ್ಷರು ತಿಂಗಳು ಕಳೆದರೂ ಹರಾಜು ಪ್ರಕ್ರಿಯೆ ನಡೆಸುತ್ತಿಲ್ಲ ಏಕೆ? ಎಂದು ಸದಸ್ಯರಾದ ಆದಿತ್ಯ, ಎಸ್.ಎನ್.ಪಾಂಡು ಆಕ್ಷೇಪ ವ್ಯಕ್ತಪಡಿಸಿದರು ಗ್ರಾ.ಪಂ.ಸೇರಿದ ಆಸ್ತಿಯನ್ನು ಉಳಿಸಿಕೊಳ್ಳಲು ಆಡಳಿತ ಮಂಡಳಿಯಿಂದ ಆಗುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ಗ್ರಾ.ಪಂ.ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ ಇದಕ್ಕೆ ಅಧ್ಯಕ್ಷರ ಅಸಮರ್ಥನೆ ಕಾರಣ ಎಂದು ಸರ್ದಾರ್ ಆಹಮದ್ ಅಸಮಾಧಾನ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಗೀತಹರೀಶ್, ಸದಸ್ಯರಾದ ಎಚ್.ಆರ್.ಹರೀಶ್, , ಸೌಭಾಗ್ಯಲಕ್ಷ್ಮೀ ಉಷಜಯೇಶ್, ಹೇಮಾವತಿ, ರಜನಿ ರಾಜು, ಪಿಡಿಒ ಬಾಲಕೃಷ್ಣ ರೈ, ಕಾರ್ಯದರ್ಶಿ ತಮ್ಮಯ್ಯ ಆಚಾರ್, ಸಿಬಂದಿ ವಸಂತ್, ಪೌಜಿಯಾ ಉಪಸ್ಥಿತರಿದ್ದರು.