Advertisement

ಹೊರವರ್ತುಲ ರಸ್ತೆ ಸಮಸ್ಯೆ ಅರಿಯಲು ನ.14ರಂದು ಸಭೆ: ಅಶ್ವತ್ಥನಾರಾಯಣ

04:31 PM Nov 03, 2022 | Team Udayavani |

ಬೆಂಗಳೂರು: ನಗರದ ಹೊರವರ್ತುಲ ರಸ್ತೆ ಪ್ರದೇಶದಲ್ಲಿ ಕಂಪನಿಗಳು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರಕಾರವು ಆದ್ಯ ಗಮನ ನೀಡಿದೆ. ಈ ನಿಟ್ಟಿನಲ್ಲಿ ಉದ್ಯಮಿಗಳು ಮತ್ತು ಜನಸಾಮಾನ್ಯರ ಜತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರು ನ.14ರಂದು ಆ ಪ್ರದೇಶದಲ್ಲಿ ಸಭೆ ನಡೆಸಿ, ವೀಕ್ಷಣೆ ನಡೆಸಲಿದ್ದಾರೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.

Advertisement

ಔಟರ್ ರಿಂಗ್‌ ರೋಡ್‌ ಕಂಪನಿಗಳ ಒಕ್ಕೂಟ (ಓರ್‍ಕಾ) ಮತ್ತು ಇತರ ಕೆಲವು ಸಂಘಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಗರದ ಮೂಲಸೌಲಭ್ಯ ಸಮಸ್ಯೆ ನಿವಾರಣೆ ಕುರಿತು ಗುರುವಾರ ಅವರು ವಿಧಾನಸೌಧದಲ್ಲಿ ಮಾಸಿಕ ಸಭೆ ನಡೆಸಿದರು. ಈ ಪ್ರದೇಶದ ಸಮಸ್ಯೆಗಳ ನಿವಾರಣೆಗೆ ಪ್ರತೀ ತಿಂಗಳೂ ಸಭೆ ನಡೆಸಲಾಗುವುದು ಎನ್ನುವ ಸರಕಾರದ ತೀರ್ಮಾನದಂತೆ ಈ ಸಭೆ ಏರ್ಪಡಿಸಲಾಗಿತ್ತು.

ನಂತರ ಮಾತನಾಡಿದ ಸಚಿವರು ಔಟರ್ ರಿಂಗ್‌ ರೋಡ್‌ನ 17 ಕಿ.ಮೀ. ಪ್ರದೇಶವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉದ್ಯಮಿಗಳು ಸರಕಾರದ ಗಮನ ಸೆಳೆದಿದ್ದರು. ಇಲ್ಲಿ ಸುಗಮ ಸಂಚಾರ, ಒಳಚರಂಡಿ, ಒತ್ತುವರಿ, ಮೆಟ್ರೊ ಕಾಮಗಾರಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಆದ್ಯ ಗಮನ ಹರಿಸಲಾಗುವುದು. ಹಾಗೆಯೇ ನಗರದಲ್ಲಿರುವ ಸರ್ವೀಸ್‌ ರಸ್ತೆಗಳನ್ನು ಕೂಡ ಮತ್ತಷ್ಟು ಸುಧಾರಿಸಲಾಗುವುದು. ನಾವು ಒಟ್ಟಾಗಿ ಕೂತು ಸಮಸ್ಯೆಗಳನ್ನು ಬಗೆಹರಿಸಬೇಕೇ ವಿನಾ ನಮ್ಮ ನಗರವನ್ನು ನಾವೇ ಟೀಕಿಸುತ್ತ ಕೂರಬಾರದು ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ:ಆರ್ ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ: ಬೆಂಗಳೂರಿಗೆ ಬಂದ ಎಬಿ ಡಿವಿಲಿಯರ್ಸ್

ಬೆಂಗಳೂರಿನಲ್ಲಿ ಈ ಬಾರಿ 50 ವರ್ಷಗಳಲ್ಲೇ ಕಂಡುಕೇಳರಿಯದಂತಹ ಮಳೆ ಬಂದಿದೆ. ಇದರಿಂದ ಕೆಲವು ಸಮಸ್ಯೆಗಳಾಗಿರುವುದು ನಿಜ. ಇದರ ಬಗ್ಗೆ ನಾವು ಹೆಚ್ಚು ಮುಕ್ತವಾಗಿ ಚರ್ಚಿಸುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಹಾರ ಮಾರ್ಗೋಪಾಯಗಳನ್ನು ಸೂಚಿಸುತ್ತಲೇ ಇದ್ದಾರೆ ಎಂದು ಅವರು ಹೇಳಿದರು.

Advertisement

ಸಂಚಾರ ನಿಯಮಗಳು, ಪಾರ್ಕಿಂಗ್‌, ಸಮೂಹ ಸಾರಿಗೆ ಇತ್ಯಾದಿಗಳ ಬಗ್ಗೆ ಮಕ್ಕಳಿಗೆ ನಾವು ಶಾಲಾ ಹಂತದಿಂದಲೇ ಜಾಗೃತಿ ಮೂಡಿಸಬೇಕು. ಇದರ ಜತೆಗೆ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಔಟರ್ ರಿಂಗ್‌ ರೋಡ್‌ ಪ್ರದೇಶದ ಮೂಲಸೌಲಭ್ಯ ಸುಧಾರಣೆಗೆ ಹೇಗೆ ವಿನಿಯೋಗಿಸಬಹುದು ಎನ್ನುವ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕು.  ಅಂತಿಮವಾಗಿ ಜನರ ಸಹಭಾಗಿತ್ವದಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮಹದೇವಪುರ ವಲಯದ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ, ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್‌, ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್‌.ಪ್ರಹ್ಲಾದ್‌, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ರವಿಕಾಂತೇಗೌಡ ಉಪಸ್ಥಿತರಿದ್ದರು.

ಉದ್ಯಮಿಗಳ ಪರವಾಗಿ ನಾಸ್ಕಾಂ ಪ್ರಾದೇಶಿಕ ಮುಖ್ಯಸ್ಥ ಭಾಸ್ಕರ್ ವರ್ಮ, ಏಬಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರಾವ್‌ ಚಂದನ್, ಗೋಲ್ಡ್‌ಮನ್‌ ಸ್ಯಾಕ್ಸ್‌ನ ರವಿಕೃಷ್ಣನ್‌, ವಿಎಂ ವೇರ್‍ ನ ರಾಮಕುಮಾರ್ ನಾರಾಯಣನ್‌, ಓರ್‍ಕಾ ಸಂಘಟನೆಯ ಪ್ರತಿನಿಧಿಗಳಾದ ಮಾನಸ್‌ ದಾಸ್‌, ಅರ್ಚನಾ ತಾಯಡೆ, ಅರವಿಂದ್‌ ಅಯ್ಯಾಸ್ವಾಮಿ, ನಿಧಿ ಪ್ರತಾಪನೇನಿ, ಕೆ ಎಂ ಮೋಹನ್‌, ಕೃಷ್ಣಕುಮಾರ ಗೌಡ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next