ಗಂಗಾವತಿ: ಆನೆಗೊಂದಿ ಭಾಗದ ಸ್ಥಳೀಯರು ಮತ್ತು ರಾಜವಂಶಸ್ಥರನ್ನು ಸಭೆಗೆ ಆಹ್ವಾನಿಸದೆ ಬೆಂಗಳೂರಿನಲ್ಲಿ ವಿಶ್ವವಿಖ್ಯಾತ ಕಿಷ್ಕಿಂದಾ ಅಂಜನಾದ್ರಿ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರ ನೇತೃತ್ವದಲ್ಲಿ ಸಭೆಯನ್ನು ನಡೆಸುತ್ತಿರುವುದಕ್ಕೆ ಆನೆಗೊಂದಿ ಭಾಗದ 4 ಗ್ರಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿಖ್ಯಾತ ಕಿಷ್ಕಿಂದಾ ಅಂಜನಾದ್ರಿ ಪ್ರದೇಶ ದೇಶ ವಿದೇಶದಲ್ಲಿ ಖ್ಯಾತವಾಗಿದ್ದು ಇಲ್ಲಿಗೆ ಬರುವ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸಕ್ತಿ ಹೊಂದಿದ್ದು ಈಗಾಗಲೇ ಹಲವು ಬಾರಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಜಿಲ್ಲೆಯ ಜನ ಪ್ರತಿನಿಧಿಗಳ ಎದುರು ತಮ್ಮ ಮನಸ್ಸಿನ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ಅಂಜನಾದ್ರಿ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಕಲ್ಪಿಸುವ ಕುರಿತಂತೆ ಸಭೆಯನ್ನು ಬುಧವಾರ ಆಯೋಜನೆ ಮಾಡಲಾಗಿದೆ. ಈ ಸಭೆಗೆ ಆನೆಗೊಂದಿ ಭಾಗದ ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಆನೆಗುಂದಿ ರಾಜಮನೆತನದವರನ್ನು ಆಹ್ವಾನಿಸದೆ ನಿರ್ಲಕ್ಷ್ಯ ಮಾಡಲಾಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಯಾವ ಸಮಸ್ಯೆಗಳೂ ಇವೆ ಏನು 3ಸೌಕರ್ಯ ಕಲ್ಪಿಸಬೇಕು ಎನ್ನುವ ಕುರಿತು ಸ್ಥಳೀಯ ಗ್ರಾ ಪಂ ಗಳಿಗೆ ಮನವರಿಕೆ ಇದ್ದು ಸ್ಥಳೀಯರಿಗೆ ಆಹ್ವಾನ ನೀಡದೆ ಕೊಪ್ಪಳ ಗಂಗಾವತಿಯ ಕೆಲವರನ್ನು ಮಾತ್ರ ಸಭೆಗೆ ಕರೆಯಲಾಗಿದೆ.
ಇದನ್ನೂ ಓದಿ:ನಾಗಮಂಗಲ: ಚಲುವರಾಯಸ್ವಾಮಿ ಆಪ್ತ ಉದ್ಯಮಿ ಮನೆ- ಕಚೇರಿ ಮೇಲೆ ಐಟಿ ದಾಳಿ
ಆಂಧ್ರಪ್ರದೇಶದ ಟಿಟಿಡಿ ನಮ್ಮಲ್ಲಿಯೇ ಆಂಜನೇಯ ಜನಿಸಿದ್ದು ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದು ಇದನ್ನು ಸಮರ್ಥವಾಗಿ ಎದುರಿಸಲು ಆನೆಗೊಂದಿ ಭಾಗದ ಸ್ಥಳೀಯರು ಮತ್ತು ಇಲ್ಲಿಯ ರಾಜಮನೆತನದ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ಸರಕಾರ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಬೇಕು. ಈ ಸಂದರ್ಭದಲ್ಲಿ ಕೇವಲ ಕೊಪ್ಪಳ ಮತ್ತು ಗಂಗಾವತಿ ಕೆಲವರನ್ನು ಮಾತ್ರ ಆಹ್ವಾನಿಸಿ ಬೆಂಗಳೂರಿನಲ್ಲಿ ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಮತ್ತು ಇತಿಹಾಸದ ಬಗ್ಗೆ ಸಭೆ ನಡೆಸಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯ ಸರಕಾರ ಕಳೆದ 2 ವರ್ಷಗಳಿಂದ ಕೊರೊನಾ ನೆಪದಲ್ಲಿ ಆನೆಗೊಂದಿ ಉತ್ಸವ ನಡೆಸಲಿಲ್ಲ ಅಂಜನಾದ್ರಿಯಲ್ಲಿಯೇ ಆಂಜನೇಯ ಜನಿಸಿದ್ದು ಎಂದು ಸಮರ್ಥವಾಗಿ ವಾದ ಮಂಡಿಸುತ್ತಿಲ್ಲ ಸ್ಥಳೀಯರನ್ನು ಪದೇಪದೆ ನಿರ್ಲಕ್ಷ್ಯ ಮಾಡಲಾಗಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕೆಲ ಅವೈಜ್ಞಾನಿಕ ನಿಯಮಗಳಿಂದ ಆನೆಗೊಂದಿ ಭಾಗ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ ಇಂಥ ಸಂದರ್ಭದಲ್ಲಿ ಹೊಸ ಮಾಸ್ಟರ್ ಪ್ಲಾನ್ ಸೇರಿದಂತೆ ಅಂಜನಾದ್ರಿ ಬಗ್ಗೆ ಸ್ಥಳೀಯ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಬೇರೆ ಊರಿನವರು ಸಭೆ ಕರೆದು ಚರ್ಚೆ ಮಾಡುವುದು ಸರಿಯಲ್ಲ ಎಂದು ಆನೆಗೊಂದಿ ರಾಜಮನೆತನದ ಶ್ರೀಕೃಷ್ಣದೇವರಾಯ ಮತ್ತು ಆನೆಗುಂದಿ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ ಉದಯವಾಣಿ ಜತೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.